ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲೂ ಸವಲತ್ತು-ಸೌಲಭ್ಯ ಪಡೆಯಲು ಆಧಾರ್ ಕಡ್ಡಾಯ. ಬಡವರು, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಪಾಲಿಕೆ ವತಿಯಿಂದ ನೀಡಲಾಗುವ ಸಬ್ಸಿಡಿ, ಸಹಾಯಧನ, ಸೌಲಭ್ಯ ಮುಂತಾದ ಕಲ್ಯಾಣ ಕಾರ್ಯಕ್ರಮ ಪಡೆಯಲು ಆಧಾರ್ ಕಡ್ಡಾಯ ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ನಗರದ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗಾಗಿ ಹಮ್ಮಿಕೊಳ್ಳುವ ಕಲ್ಯಾಣ ಕಾರ್ಯಕ್ರಮಗಳು ಅರ್ಹರಿಗೆ ತಲುಪಲು ಹಾಗೂ ಅನುದಾನ ದುರ್ಬಳಕೆ ತಡೆಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯಗೊಳಿಸುವುದಾಗಿ ತಿಳಿಸಲಾಗಿದೆ.
ಪ್ರತಿವರ್ಷ ಬಜೆಟ್‌ನಲ್ಲಿ ಅಭಿವೃದ್ಧಿ ಕಾಮಗಾರಿಗಳು ಹೊರತುಪಡಿಸಿದರೆ ಸಿಂಹಪಾಲು ಅನುದಾನ ಕಲ್ಯಾಣ ಕಾರ್ಯಕ್ರಮಗಳಿಗೆ ಒದಗಿಸಲಾಗುತ್ತದೆ. ಆದರೆ, ಅರ್ಹರಲ್ಲದವರಿಗೂ ಸೌಲಭ್ಯ ದೊರೆಯುತ್ತಿವೆ ಎಂಬ ಆರೋಪಗಳಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟಿರುವ ಶೇ.24.10 ಅನುದಾನ ಬಳಕೆಗೆ ಯಾವುದೇ ವಾರ್ಡ್‌ನಲ್ಲಿ ಫಲಾನುಭವಿಗಳು ಸಿಗದಿದ್ದಾಗ, ಹೆಚ್ಚಿನ ಸಂಖ್ಯೆಯಲ್ಲಿರುವ ವಾರ್ಡ್‌ಗಳಲ್ಲಿ ಆ ಅನುದಾನ ಬಳಸಿಕೊಳ್ಳಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಹಿರಿಯರಿಗೆ ವಾಕಿಂಗ್ ಸ್ಟಿಕ್: ಹಿರಿಯ ನಾಗರಿಕರಿಗೆ ರಕ್ತದೊತ್ತಡ ಹಾಗೂ ಮಧುಮೇಹ ಖಾಯಿಲೆಗೆ ಸಂಬಂಧಿಸಿದ ಮಾತ್ರೆಗಳನ್ನು ಪಾಲಿಕೆಯ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡುವುದಾಗಿ ಘೋಷಿಸಲಾಗಿದೆ. ಅದೇ ರೀತಿ ಹಿರಿಯರಿಗಾಗಿ 3 ಕೋಟಿ ರೂ. ವೆಚ್ಚದಲ್ಲಿ ಜಾಗ ಲಭ್ಯವಿರುವ ಕಡೆಗಳಲ್ಲಿ ವಿಶ್ರಾಂತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಕೊಠಡಿ, ಪ್ರತಿ ವಾರ್ಡ್‌ನ 100 ಮಂದಿಗೆ ವಾಕಿಂಗ್ ಸ್ಟಿಕ್ ನೀಡುವುದಾಗಿ ಘೋಷಣೆ ಮಾಡಲಾಗಿದೆ.
ದಿವ್ಯಾಂಗರಿಗೆ ವಿಶೇಷ ಅನುದಾನ: ದಿವ್ಯಾಂಗರ ಕಲ್ಯಾಣಕ್ಕಾಗಿ ಇದೇ ಮೊದಲ ಬಾರಿ ಅತಿಹೆಚ್ಚು ಅನುದಾನ ನೀಡಿದ್ದು, ಸ್ವಯಂ ಉದ್ಯೋಕ್ಕೆ ಆರ್ಥಿಕ ಸಹಾಯ, ಜೈಪುರ ಕಾಲು ಜೋಡಣೆ, ತ್ರಿಚಕ್ರ ವಾಹನಗಳು, ವಾಕರ್‌ಗಳು, ವೈದ್ಯಕೀಯ ಸಹಾಯ, ವಾಕಿಂಗ್ ಸ್ಟಿಕ್, ಶ್ರವಣ ಸಾಧನ, ಕ್ರೀಡಾ ಪ್ರೋತ್ಸಾಹ ಹೀಗೆ ವಿವಿಧ ಕಾರ್ಯಕ್ರಮಗಳಿಗೆ ಒಟ್ಟು
63 ಕೋಟಿ ರೂ. ನೀಡಲಾಗಿದೆ. ಜತೆಗೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಲಘುವಾಹನ ತರಬೇತಿ ಸೇರಿ ವಿವಿಧ ಸೌಲಭ್ಯಗಳಿಗೆ 1 ಕೋಟಿ ರೂ. ಮೀಸಲಿಡಲಾಗಿದೆ.
ಎಸ್‌ಸಿ-ಎಸ್‌ಟಿ ಕಾಲೊನಿ ಅಭಿವೃದ್ಧಿ: ಈ ಬಾರಿ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡವರು ವಾಸಿಸುವ ಪ್ರದೇಶಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲು 110 ಕೋಟಿ ರೂ., ಪೌರಕಾರ್ಮಿಕರು ಮತ್ತು ಡಿ.ಗ್ರೂಪ್ ಖಾಯಂ ಮತ್ತು ಗುತ್ತಿಗೆ ನೌಕರರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯಕ್ಕಾಗಿ 9 ಕೋಟಿ ರೂ., ಕೌಶಲ್ಯ ಅಭಿವೃದ್ಧಿ ತರಬೇತಿಗಾಗಿ 5 ಕೋಟಿ ರೂ. ನೀಡಲಾಗಿದ್ದು, ಒಟ್ಟು ಕಲ್ಯಾಣ ಕಾರ್ಯಕ್ರಮಗಳಿಗೆ 769 ಕೋಟಿ ರೂ. ಮೀಸಲು.