Advertisement

ಆಧಾರ್‌, ಕಿಸಾನ್‌ ಸಮ್ಮಾನ್‌ ಅರ್ಜಿಗಾಗಿ ಪರದಾಟ

01:00 AM Mar 07, 2019 | Team Udayavani |

ಕುಂದಾಪುರ: ತಾಲೂಕು ಕಚೇರಿಯಲ್ಲಿ ಪ್ರತಿದಿನ ಜನರ ನೂಕುನುಗ್ಗಲು. ಆಧಾರ್‌ ತಿದ್ದುಪಡಿಗೆ ಒಂದಷ್ಟು ಮಂದಿ ಪ್ರತಿದಿನ ಎಂಬಂತೆ ಬಂದು ಹೋಗುತ್ತಿದ್ದಾರೆ. ಇದರ ಜತೆಗೆ ಪ್ರಧಾನಮಂತ್ರಿ ಕೃಷಿ ಅನುದಾನಕ್ಕಾಗಿ ತಾಲೂಕು ಕಚೇರಿ ಹಾಗೂ ವಿವಿಧ ಜನಸ್ನೇಹಿ ಕೇಂದ್ರಗಳಲ್ಲಿ ಜನಸಂದಣಿ ಕಂಡು ಬರುತ್ತಿದೆ. ವಂಡ್ಸೆ ಜನಸ್ನೇಹಿ ಕೇಂದ್ರದಲ್ಲೂ ವಾತಾವರಣ ಹೀಗೇ ಇದೆ. ಕಿಸಾನ್‌ ಸಮ್ಮಾನ್‌ಗೆ ಆರ್‌ಟಿಸಿ ಅಗತ್ಯವಿಲ್ಲ ಎಂದಿದ್ದರೂ ಜನರಿಗೆ ಮನದಟ್ಟಾಗದಿರುವದರಿಂದ ಇನ್ನೂ ಕಚೇರಿಗಳಿಗೆ ಬರುತ್ತಲೇ ಇದ್ದಾರೆ. 

Advertisement

ಕೃಷಿ ಇಲಾಖೆ ಸುತ್ತೋಲೆ ಪ್ರಕಾರ ಆರ್‌ಟಿಸಿ ಕಡ್ಡಾಯವಲ್ಲ.  ಕೇವಲ ಸರ್ವೇ ನಂಬರ್‌, ಹಿಸ್ಸಾನಂಬರ್‌ ನೀಡಿದರೆ ಸಾಕಾಗುತ್ತದೆ. ಸ್ವಯಂ ಘೋಷಣೆ ಜತೆಗೆ ಆಧಾರ್‌ ಕಾರ್ಡ್‌, ಬ್ಯಾಂಕ್‌ಪಾಸ್‌ ಪುಸ್ತಕಪ್ರತಿ, ಭಾವಚಿತ್ರ ನೀಡಬೇಕು. ಆದರೆ ಆರ್‌ಟಿಸಿ ಕಡ್ಡಾಯ ಎಂದು ಕೆಲವರು ಹೇಳುತ್ತಿರುವುದೇ ಈ ಅನಗತ್ಯ ಗೊಂದಲಕ್ಕೆ ಕಾರಣ.

ಆಧಾರ್‌ ದುರಸ್ತಿ
ಆಧಾರ್‌ ತಿದ್ದುಪಡಿಗಾಗಿ ಅಥವಾ ಹೊಸ ಆಧಾರ್‌ ಕಾರ್ಡ್‌ ಪಡೆಯಲು ತಾಲೂಕು ಕಚೇರಿ, ಅಂಚೆ ಕಚೇರಿ, ಗ್ರಾಮ ಪಂಚಾಯತ್‌ಗಳಲ್ಲಿ ಜನರು ಟೋಕನ್‌ ಪಡೆಯಲು ಬೆಳಗ್ಗೆಯೇ ಧಾವಿಸುತ್ತಾರೆ. ದಿನಂಪ್ರತಿ ಸುಮಾರು 20 ಮಂದಿಗೆ ಟೋಕನ್‌ ನೀಡಲಾಗುತ್ತಿದೆ. ಟೋಕನ್‌ ಪಡೆದು 2 ತಿಂಗಳು ಕಳೆದು ಕೇಂದ್ರಕ್ಕೆ ಆಗಮಿಸಿದಾಗ ಆಧಾರ್‌ ಸರಿಪಡಿಸುವ ಸಿಬಂದಿ ಸರ್ವರ್‌ ಸರಿ ಇಲ್ಲ ಎಂಬ ಸಿದ್ಧ ಉತ್ತರ ನೀಡುತ್ತಾರೆ. ಹೀಗಾಗಿ ಕಷ್ಟಪಟ್ಟು ಟೋಕನ್‌ ಪಡೆದರೂ ಆಧಾರ್‌ ಕಾರ್ಡ್‌ ಸರಿಯಾಗುತ್ತದೆ ಎಂಬ ಭರವಸೆ ಉಳಿದಿಲ್ಲ. ಇದೀಗ ರಾಜ್ಯಾದ್ಯಂತ ಆಧಾರ್‌ ಸರ್ವರ್‌ನಲ್ಲಿ ದೋಷ ಉಂಟಾಗಿದ್ದು, ಸರಿಪಡಿಸುವ ಕೆಲಸ ನಡೆದಿಲ್ಲ. ಆದ್ದರಿಂದ ಜನ ಪಂಚಾಯತ್‌ ಹಾಗೂ ತಾಲೂಕು ಕಚೇರಿಗೆ ಎಡತಾಕುವುದು ತಪ್ಪಿಲ್ಲ.  

ಅಲೆದಾಟ
ದೂರದೂರದ ಊರುಗಳಿಂದ ಇಲ್ಲಿನ ತಾಲೂಕು ಕಚೇರಿಗೆ ಆಧಾರ್‌ಗಾಗಿ ಜನ ಬರುತ್ತಿದ್ದಾರೆ. ಪಂಚಾಯತ್‌ಗಳಲ್ಲಿ ತಿದ್ದುಪಡಿಗೆ ಅವಕಾಶವಿದ್ದರೂ ಅಲ್ಲಿ ಸಮಸ್ಯೆ ಇದೆ. ತಾಲೂಕು ಕಚೇರಿಗೆ ಬಂದಾಗ ಗ್ರಾ.ಪಂ.ನಲ್ಲಿ ಮಾಡಿಕೊಡುತ್ತಾರೆ ಎಂದು ಸಿಬಂದಿ ತಿಳಿಸಿದರೆ, ಗ್ರಾ.ಪಂ.ನಲ್ಲಿ ಅಂಚೆ ಕಚೇರಿಗೆ ಹೋಗಲು ಹೇಳುತ್ತಾರೆ. ಹೀಗೆ ಗೊಂದಲದಿಂದಾಗಿ ಕಾರ್ಯವಾಗದೇ ಹಿಂತಿರುಗುವ ಪರಿಸ್ಥಿತಿ ಜನಸಾಮಾನ್ಯರದ್ದು.  

ಕಿಸಾನ್‌ ಸಮ್ಮಾನ್‌ಗೆ ಸರತಿ
ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಗೆ ಅರ್ಜಿ ಸಲ್ಲಿಸಲು ಎಲ್ಲೆಡೆ ಸರದಿ ಸಾಲು ಕಂಡು ಬರುತ್ತಿದೆ. ಕುಂದಾಪುರ ತಾಲೂಕಿನ 75 ಗ್ರಾಮಗಳ 35 ಗ್ರಾ.ಪಂ. ವ್ಯಾಪ್ತಿಯ ಕೃಷಿಕರು ಈ ಸೌಲಭ್ಯಕ್ಕಾಗಿ ತಾಲೂಕು ಕಚೇರಿಯಲ್ಲಿ ಅರ್ಜಿಗಾಗಿ ಸರದಿ ಸಾಲಿನಲ್ಲಿ ನಿಲ್ಲುವ ದೃಶ್ಯ ಸಮಾನ್ಯವಾಗಿದೆ. ಪಂಚಾಯತ್‌ಗಳಲ್ಲಿ ಆಧಾರ್‌ ಸರ್ವರ್‌ ಸಮಸ್ಯೆ ಜತೆಗೆ ಆರ್‌ಟಿಸಿ ಸರ್ವರ್‌ ಸಮಸ್ಯೆ ಕೂಡಾ ಇದ್ದು ಹಳ್ಳಿ ಜನ ಆರ್‌ಟಿಸಿಗಾಗಿ ತಾಲೂಕು ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ. ಸಿಬಂದಿ ಇಲ್ಲದೆ ಸಮಸ್ಯೆಯಿದ್ದು ಕೌಂಟರ್‌ಗೆ ಹೆಚ್ಚುವರಿ ಸಿಬಂದಿ ನಿಯೋಜಿಸಿದರೂ ಒತ್ತಡ ಕಡಿಮೆಯಾಗಿಲ್ಲ.  

Advertisement

ಸಮಸ್ಯೆ ಇದೆ
ಆಧಾರ್‌ ಸರ್ವರ್‌ ಸಮಸ್ಯೆ ಇಲ್ಲಿನದ್ದಲ್ಲ. ರಾಜ್ಯದಲ್ಲಿಯೇ ಸಮಸ್ಯೆ ಇದೆ. ದುರಸ್ತಿ ಪ್ರಕ್ರಿಯೆ ನಡೆಯುತ್ತಿದೆ. ಇತರ ಅರ್ಜಿ ಸಲ್ಲಿಸುವ ಕೌಂಟರ್‌ಗೆ ಹೆಚ್ಚುವರು ಜನ ನಿಯೋಜಿಸಲಾಗಿದೆ. 
-ತಿಪ್ಪೆಸ್ವಾಮಿ,  ತಹಶೀಲ್ದಾರ್‌, ಕುಂದಾಪುರ

ಕಾಯುವಿಕೆ ಮಾತ್ರ
ಬೆಳಗ್ಗಿನಿಂದ ಕಾಯುತ್ತಿದ್ದೇವೆ. ಇನ್ನೂ ಬಂದ ಕೆಲಸ ಕೈಗೂಡಿಲ್ಲ. ಕಾಯುವಿಕೆಯೇ ಶಾಪವಾಗಿದೆ.
-ಸಂಜೀವ ಮೊಗವೀರ,  ವಂಡ್ಸೆ

Advertisement

Udayavani is now on Telegram. Click here to join our channel and stay updated with the latest news.

Next