Advertisement

ಆರೋಗ್ಯ ವರದಿಗೆ ಆಧಾರ್‌ ಅಡ!

12:36 PM Oct 14, 2018 | Team Udayavani |

ಬೆಂಗಳೂರು: ಇಲ್ಲಿ ಆರೋಗ್ಯ ತಪಾಸಣೆ ವರದಿ ಬೇಕಿದ್ದರೆ, ಆಧಾರ್‌ ಕಾರ್ಡ್‌ ಅಥವಾ ಪಡಿತರಚೀಟಿ ಅಡಮಾನ ಇಡುವುದು ಕಡ್ಡಾಯ! ಅಷ್ಟೇ ಅಲ್ಲ, ಮೂಲ ದಾಖಲೆ ಸಲ್ಲಿಸಿದರೂ ತಪಾಸಣಾ ವರದಿ ನೋಡಲು ಮಾತ್ರ ಲಭ್ಯ. ತಮ್ಮೊಂದಿಗೆ ಕೊಂಡೊಯ್ಯುವುದು ನಿಷಿದ್ಧ. ಇಂತಹದೊಂದು ವಿಚಿತ್ರ ಷರತ್ತನ್ನು ಕೆ.ಸಿ.ಜನರಲ್‌ ಆಸ್ಪತ್ರೆ ವಿಧಿಸಿದೆ.

Advertisement

ಇದರಿಂದಾಗಿ ದೂರದ ಊರಿನಿಂದ ಬಂದವರು ಮೂಲ ದಾಖಲೆಗಳಿಲ್ಲದೇ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ತಪಾಸಣಾ ವರದಿ ಸಿಗದೇ ಅನೇಕ ರೋಗಿಗಳು ಅತ್ತ ವೈದ್ಯರ ಬಳಿಯೂ ಹೋಗುವುದಕ್ಕೆ ಆಗದೆ ಇತ್ತ ಮೂಲ ದಾಖಲೆಗಳನ್ನು ನೀಡಲಾಗದೇ ಪೇಚಾಡುತ್ತಿದ್ದ ಘಟನೆ ಆಸ್ಪತ್ರೆಯ ಕ್ಷ-ಕಿರಣ ವಿಭಾಗದ ಬಳಿ ಕಂಡುಬಂದವು.

ಪ್ರತಿನಿತ್ಯ 50ರಿಂದ 60 ರೋಗಿಗಳು ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಕ್ಷ-ಕಿರಣ ಪರೀಕ್ಷೆ ಮಾಡಿಸುತ್ತಾರೆ. ಕಳೆದ ನಾಲ್ಕು ದಿನದ ಈ ಹೊಸ ನಿಯಮದಿಂದ ಸಾಕಷ್ಟು ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಕೀಲು ಮೂಳೆ ಸಮಸ್ಯೆ ಎಂದು ಆಸ್ಪತ್ರೆಗೆ ಬಂದು ವೈದ್ಯರ ಬಳಿ ಹೋದಾ ಕೂಡಲೇ ಕ್ಷ-ಕಿರಣ ಪರೀಕ್ಷೆಗೆ ಬರೆಯುತ್ತಾರೆ. ಆನಂತರ ನೇರವಾಗಿ ಹೋಗಿ ಕ್ಷ ಕಿರಣ ಪರೀಕ್ಷೆ ಮಾಡಿಸಿದರೆ ಆ ವಿಭಾಗದ ಸಿಬ್ಬಂದಿ ಪರೀಕ್ಷೆಯ ವರದಿ ನೀಡಲು ಮೂಲ ಆಧಾರಕಾರ್ಡ್‌ ಅಥವಾ ಪಡಿತರ ಚೀಟಿ ಕೇಳುತ್ತಾರೆ.

ಆದನ್ನು ನೀಡಿದ ನಂತರ ಕ್ಷ-ಕಿರಣ ವರದಿ ಕೈಗೆ ಕೊಟ್ಟು, ವೈದ್ಯರ ಬಳಿ ಹೋಗಿ ತೋರಿಸಿಕೊಂಡು ಬಂದು ಮರಳಿಸಿ ನಿಮ್ಮ ಮೂಲ ದಾಖಲಾತಿಗಳನ್ನು ಹಿಂಪಡೆಯುವಂತೆ ತಿಳಿಸುತ್ತಾರೆ. ಒಂದು ವೇಳೆ ನಮ್ಮ ಬಳಿ ಮೂಲ ದಾಖಲೆಗಳು ಇಲ್ಲ ಎಂದರೆ ಕಡ್ಡಾಯವಾಗಿ ತೆಗೆದುಕೊಂಡು ಬರಬೇಕು ಎನ್ನುತ್ತಾರೆ ಎಂದು ಅಳಲು ತೋಡಿಕೊಂಡರು ರೋಗಿ ಮಂಜಪ್ಪ.

ವರದಿ ಅಲಭ್ಯ: ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ಕ್ಷ-ಕಿರಣ ವಿಭಾಗದಲ್ಲಿ ಅಡ ಇಟ್ಟುಕೊಳ್ಳುವ ಪದ್ಧತಿ ಇರುವುದರಿಂದ ತಪಾಸಣಾ ವರದಿಯನ್ನು ರೋಗಿಗಳು ಮನೆಗೆ ಕೊಂಡೋಯ್ಯಲು ನೀಡುವುದಿಲ್ಲ. ಹೀಗಾಗಿ, ಇಲ್ಲಿ ಮಾಡಿಸಿದ ತಪಾಸಣೆ ಮುಂದಿನ ಹಂತದ ಚಿಕಿತ್ಸೆಗೂ ಅಥವಾ ವೈದ್ಯರ ಬಳಿ ಎರಡನೇ ಅಭಿಪ್ರಾಯ ಪಡೆಯಲು ಸಾಧ್ಯವಾಗುವುದಿಲ್ಲ.

Advertisement

ಈ ಕುರಿತು ಪ್ರಶ್ನಿಸಿದರೆ ನಿಮ್ಮ ಸ್ವಂತಕ್ಕೆ ತಪಾಸಣಾ ವರದಿ ಬೇಕಾದರೆ ಖಾಸಗಿ ಆಸ್ಪತ್ರೆ ಅಥವಾ ಪ್ರಯೋಗಾಲಯಗಳಿಗೆ ಹೋಗಿ ಎಂದು ಸಿಬ್ಬಂದಿ ರೇಗಾಡುತ್ತಾರೆ ಎಂದು ಪರೀಕ್ಷೆಗೆ ಬಂದಿದ್ದ ಶೇಷಾದ್ರಿಪುರಂ ನಿವಾಸಿ ಮನೋಜ್‌ ದೂರಿದರು.

ಅಂಕಿ ಸಂಖ್ಯೆ ದಾಖಲೆಗಾಗಿ ಸಂಗ್ರಹ: ಎನ್‌ಎಚ್‌ಎಂ ಯೋಜನೆಯ ರಾಷ್ಟೀಯ ಉಚಿತ ರೋಗಪತ್ತೆ ಸೇವೆಗಳು ಕಾರ್ಯಕ್ರಮದಡಿಯಲ್ಲಿ ಆಸ್ಪತೆಯಲ್ಲಿ 58 ರೋಗಪತ್ತೆ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತಿದೆ. ಈ ಯೋಜನೆ ಅನ್ವಯ ಈ ಹಿಂದೆ 50 ರೂ. ಶುಲ್ಕ ಕಟ್ಟಬೇಕಿದ್ದ  ಕ್ಷ-ಕಿರಣ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ಈ ಹಿಂದೆ 50 ರೂ. ಕಟ್ಟಿದರೆ ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ರೋಗಿಗಳ ತಪಾಸಣಾ ವರದಿ ಬಿಟ್ಟು ಇನ್ನೆಲ್ಲಾ ವರದಿಗಳನ್ನು ರೋಗಿಗಳಿಗೆ ನೀಡುತ್ತಿದ್ದೆವು.

ಆದರೆ, ಈಗ ಉಚಿತ ಸೇವೆಯಾಗಿರುವುದರಿಂದ ನಮ್ಮ ವಿಭಾಗದಲ್ಲಿ ನಾವು ಮಾಡಿರುವ ಪರೀಕ್ಷೆಗಳ ಅಂಕಿ ಸಂಖ್ಯೆ ದಾಖಲೆ ಮಾಡಿಟ್ಟುಕೊಳ್ಳಲು ರೋಗಿಗಳ ಕ್ಷ-ಕಿರಣ ಫಿಲ್ಮ್ಗಳನ್ನು ಹಿಂದಿರುಗಿಸದೇ ನಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದೇವೆ. ಮೇಲಿನವರು ಆದೇಶ ನೀಡಿದರೆ ರೋಗಿಗಳಿಗೆ ವಿತರಣೆ ಮಾಡುತ್ತೇವೆ ಎಂದು ಹೆಸರು ಹೇಳಲಿಚ್ಛಿಸದ ವಿಭಾಗದ ಸಿಬ್ಬಂದಿ ತಿಳಿಸಿದ್ದಾರೆ.

ದುರುಪಯೋಗ ತಡೆಯಲು ಈ ಕ್ರಮ: ಪರೀಕ್ಷೆಗಳು ಉಚಿತವಾಗಿರುವುದರಿಂದ ಖಾಸಗಿ ಆಸ್ಪತ್ರೆ ರೋಗಿಗಳು ಹಾಗೂ ಕ್ಷ-ಕಿರಣ ಪರೀಕ್ಷಾ ವಿಭಾಗದ ಸಿಬ್ಬಂದಿಗಳು ದುರುಪಯೋಗ ಮಾಡಿಕೊಳ್ಳಬಾರದು ಎಂದು ಈ ವಿಭಾಗದಲ್ಲಿ ಮಾತ್ರ ವರದಿಯನ್ನು ರೋಗಿಗಳಿಗೆ ನೀಡದೇ ದಾಖಲೆಯಾಗಿ ಸಂಗ್ರಹಿಸಿಟ್ಟುಕೊಳ್ಳುವಂತೆ ಸೂಚಿಸಿದ್ದೆವು. ಆದರೆ, ಸಮಸ್ಯೆಯಾಗುತ್ತಿರುವ ಕುರಿತು ಗಮನಕ್ಕೆ ಬಂದಿದ್ದು, ಕೂಡಲೇ ಅಗತ್ಯಕ್ರಮ ಕೈಗೊಳ್ಳುವೆ ಎಂದು ಕೆ.ಸಿ.ಜನರಲ್‌ ಆಸ್ಪತ್ರೆ ಮೇಲ್ವಿಚಾರಕ ಡಾ.ಭಾನುಮೂರ್ತಿ ತಿಳಿಸಿದ್ದಾರೆ. 

ಮಗಳು ಎದೆನೋವಿನಿಂದ ಬಳಲುತ್ತಿದ್ದು, ಪರೀಕ್ಷೆಗೆ ಬಂದಿದ್ದೇವೆ. ನಮಗೆ ಎಕ್ಸ್‌ರೇ ವರದಿ ನೀಡಲು ಮೂಲ ಆಧಾರ ಕಾರ್ಡ್‌ ಅಥವಾ ಪಡಿತರ ಚೀಟಿ ಕೇಳುತ್ತಿದ್ದಾರೆ. ನಮಗೆ ಈ ಬಗ್ಗೆ ಮಾಹಿತಿ ಇಲ್ಲ. ಪರೀಕ್ಷೆ ಮಾಡಿದ್ದಕ್ಕೆ ಹಣ ಪಾವತಿಸುತ್ತೇನೆ ಎಂದರೂ ವರದಿ ನೀಡುತ್ತಿಲ್ಲ.
-ದಿವ್ಯಾ. ಕುಣಿಗಲ್‌ ನಿವಾಸಿ

ಹೆಚ್ಚುವರಿ ಚಿಕಿತ್ಸೆಗೆ ಅಥವಾ ಎರಡನೇ ಅಭಿಪ್ರಾಯಕ್ಕೆ ಎಕ್ಸ್‌ರೇ ವರದಿ ಕೇಳಿದರೆ ಕೊಡುತ್ತಿಲ್ಲ. ಸೇವೆ ಉಚಿತವಾಗಿ ಇನ್ನಷ್ಟು ಸಮಸ್ಯೆಯಾಗಿದೆ. ನಮ್ಮ ವರದಿ ಇಟ್ಟುಕೊಂಡು ಏನು ಮಾಡುತ್ತಾರೆ ಎಂಬುದು ತಿಳಿಯುತ್ತಿಲ್ಲ. ಪ್ರಶ್ನೆ ಮಾಡಿದರೆ ಸಬೂಬು ನೀಡುತ್ತಾರೆ.
-ಓಬಳೇಶ್‌, ಮಲ್ಲೇಶ್ವರ ನಿವಾಸಿ

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next