ದೇಶದ ಪ್ರತಿಯೊಬ್ಬ ನಾಗರಿಕನಿಗೂ ಈಗಾಗಲೇ ವಿಶಿಷ್ಟ ಗುರುತಿನ ಚೀಟಿ ಆಧಾರ್ ಇದೆ. ಅದೇ ಮಾದರಿಯಲ್ಲಿ ಇನ್ನು ಮುಂದೆ ಉದ್ದಿಮೆ ಸಂಸ್ಥೆಗಳಿಗೂ ವಿಶಿಷ್ಟ ಗುರುತಿನ ಸಂಖ್ಯೆಯನ್ನು ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ನಕಲಿ ಕಂಪನಿಗಳು, ಬೇನಾಮಿ ಆಸ್ತಿಹೊಂದಿ ದೇಶದ ಬೊಕ್ಕಸಕ್ಕೆ ನಷ್ಟ ಮಾಡುತ್ತಿರುವವರ ವಿರುದ್ಧ ಸಮರ ಸಾರಲು ಆಧಾರ್ ಮಾದರಿಯಲ್ಲಿಯೇ ಈ ಸಂಖ್ಯೆ ನೀಡಲಾಗುತ್ತದೆ.
ದೇಶದ ಪ್ರತಿಯೊಬ್ಬ ನಾಗರಿಕನೂ ಈಗ ವಿಶಿಷ್ಟ ಗುರುತಿನ ಸಂಖ್ಯೆಯ ಮೂಲಕವೇ ಗುರುತಿಸ ಲ್ಪಡುತ್ತಿರುವುದು, ಪ್ರತಿ ಯೋಜನೆಗೂ ಆಧಾರ್ ಕಡ್ಡಾಯಗೊಳಿಸಿರುವುದು ಹಳೇ ವಿಷಯ. ಹೊಸ ದೇನೆಂದರೆ, ಭಾರತದಲ್ಲಿ ಈಗಾಗಲೇ ಅಸ್ತಿತ್ವದಲ್ಲಿ ರುವ ಹಾಗೂ ಇನ್ನು ಅಸ್ತಿತ್ವಕ್ಕೆ ಬರುವ ಪ್ರತಿ ಯೊಂದು ಉದ್ದಿಮೆಗೂ ಆಧಾರ್ ಮಾದರಿಯ ಹೊಸ ಗುರುತಿನ ಸಂಖ್ಯೆಯೊಂದು ಸಿಗಲಿದೆ.
ಸಣ್ಣ, ಮಧ್ಯಮ ಹಾಗೂ ದೊಡ್ಡ ಹೀಗೆ ಎಲ್ಲ ರೀತಿಯ ಉದ್ದಿಮೆಗಳಿಗೂ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ನಕಲಿ ಕಂಪನಿಗಳು, ಬೇನಾಮಿ ಆಸ್ತಿ ಗಳ ವಿರುದ್ಧ ಸಮರ ಸಾರಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ, ಇದೀಗ ಇಂಥ ಖೊಟ್ಟಿ ಕಂಪನಿಗಳನ್ನು ಮಟ್ಟ ಹಾಕುವ ಉದ್ದೇಶದಿಂದಲೇ “ಉದ್ದಿಮೆಗೂ ಆಧಾರ’ ಯೋಜನೆಯನ್ನು ಜಾರಿ ಮಾಡುತ್ತಿದೆ. ಅಲ್ಲದೆ, ಸಾರ್ವಜನಿಕರ ಹಣವನ್ನು ಸುಲಭವಾಗಿ ಪತ್ತೆ ಹಚ್ಚುವುದು ಕೂಡ ಇದರ ಮತ್ತೂಂದು ಉದ್ದೇಶ. ಈಗಾಗಲೇ ದೇಶದ 119 ಕೋಟಿ ಮಂದಿಗೆ ಆಧಾರ್ ಸಂಖ್ಯೆಯನ್ನು ನೀಡಲಾಗಿದೆ. ಅದು ಸೋರಿಕೆಯಾಗದಂತೆ 16 ಅಂಕಿಗಳ ವರ್ಚುವಲ್ ಐಡಿ ಸೌಲಭ್ಯವನ್ನೂ ಕಲ್ಪಿಸಿದೆ. ಇನ್ನು ಮುಂದೆ ಉದ್ದಿಮೆದಾರರು ಇಂಥ ಹೊಸ ಐಡಿಯನ್ನು ಪಡೆಯಲಿದ್ದಾರೆ.
ಹೆಚ್ಚಿನ ವಿವರ ನೀಡಿಲ್ಲ: ಉದ್ದಿಮೆಗೆ ವಿಶಿಷ್ಟ ಗುರುತಿನ ಸಂಖ್ಯೆ ಒದಗಿಸುವಂಥ ಯೋಜನೆ ಯನ್ನು ಹೇಗೆ ಅನುಷ್ಠಾನ ಮಾಡಲಾಗುವುದು ಅಥವಾ ಅದಕ್ಕೆ ಯಾವ ಅಪ್ಲಿಕೇಷನ್‌ಗಳನ್ನು ಬಳಸಲಾಗುವುದು ಎಂಬ ಬಗ್ಗೆ ಸಚಿವ ಜೇಟಿÉ ಯಾವುದೇ ವಿವರಣೆ ನೀಡಿಲ್ಲ. ಇದೇ ವೇಳೆ, “ಪ್ರವರ್ತಕರು ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡದಂತೆ ತಡೆಯಲು ಇದೊಂದು ಉತ್ತಮ ಕ್ರಮ’ ಎಂದು ಕೆಪಿಎಂಜಿ ಸಂಸ್ಥೆಯ ಆರ್ಥಿಕ ಮತ್ತು ನೀತಿ ಸಲಹಾ ವಿಭಾಗದ ಮುಖ್ಯಸ್ಥ ಜೈಜೀತ್ ಭಟ್ಟಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ.
ಗೊಂದಲವೂ ಇದೆ: ಸಣ್ಣ, ಮಧ್ಯಮ ಮತ್ತು ಬೃಹತ್ ಉದ್ದಿಮೆ ಸಚಿವಾಲಯವು ಈ ಹಿಂದೆ ಅಂದರೆ 2015ರ ಸೆಪ್ಟೆಂಬರ್‌ನಲ್ಲೇ “ಉದ್ಯೋಗ್ ಆಧಾರ್’ ಎಂಬ ಯೋಜನೆ ಆರಂಭಿಸಿದೆ. ಅದರಂತೆ, 30 ಲಕ್ಷ ಉದ್ಯಮ ಸಂಸ್ಥೆಗಳಿಗೆ ಆಧಾರ್ ಸಂಖ್ಯೆ ವಿತರಿಸಲಾಗಿದೆ. ಈ ಸಂಖ್ಯೆಯನ್ನು ಸಚಿವಾಲಯವೇ ವಿತರಿಸುತ್ತಿದ್ದು, ಇದಕ್ಕೂ ಆಧಾರ್ ಪ್ರಾಧಿಕಾರಕ್ಕೂ ಯಾವುದೇ ಸಂಬಂಧವಿಲ್ಲ. ಇದೀಗ ಬಜೆಟ್‌ನಲ್ಲಿ ಘೋಷಿಸಲಾಗಿರುವ “ಉದ್ಯೋಗಕ್ಕೂ ಆಧಾರ’ ಯೋಜನೆಯಲ್ಲಿ ವಿಶಿಷ್ಟ ಸಂಖ್ಯೆಯನ್ನು ನೀಡುವುದು ಆಧಾರ್ ಪ್ರಾಧಿಕಾರವೇ, ಸಚಿವಾಲಯವೋ ಎಂಬ ಗೊಂದಲವಿದೆ ಎಂದು ಕೆಲವು ಅಧಿಕಾರಿಗಳು ಹೇಳಿದ್ದಾರೆ.
3 ವಿಮಾ ಕಂಪನಿಗಳು ವಿಲೀನ
ವಿಮಾ ವಲಯದಲ್ಲಿ ಹಿಂದೆಂದೂ ಕಾಣದಂಥ ಅತಿದೊಡ್ಡ ವಿಲೀನ ಪ್ರಕ್ರಿಯೆಯೊಂದಕ್ಕೆ ದೇಶ ಸಾಕ್ಷಿಯಾಗಲಿದೆ. ಸರ್ಕಾರಿ ಸ್ವಾಮ್ಯದ 3 ವಿಮಾ ಕಂಪನಿಗಳನ್ನು ವಿಲೀನಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅದರಂತೆ, ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿ., ಯುನೈಟೆಡ್ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿ. ಮತ್ತು ಒರಿಯಂಟಲ್ ಇಂಡಿಯಾ ಇನ್ಶೂರೆನ್ಸ್ ಕಂಪನಿಗಳು ವಿಲೀನಗೊಳ್ಳಲಿವೆ. ನಂತರ ಅವುಗಳ ಷೇರುಗಳನ್ನು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. 2017ರ ಆರಂಭದಲ್ಲೇ ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳನ್ನು ಪಟ್ಟಿ ಮಾಡಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿತ್ತು.
ಬಜೆಟ್ ಬುಲೆಟ್…
– ಪ್ರತಿ ಉದ್ಯಮ ಸಂಸ್ಥೆಗೂ ವಿಶಿಷ್ಟ ಗುರುತಿನ ಸಂಖ್ಯೆ ನೀಡಲು ನಿರ್ಧಾರ
– ನಕಲಿ ಕಂಪನಿಗಳ ಮಟ್ಟಹಾಕುವ ಉದ್ದೇಶ
– ಸರ್ಕಾರಿ ಸ್ವಾಮ್ಯದ ಮೂರು ವಿಮಾ ಕಂಪನಿಗಳ ವಿಲೀನಕ್ಕೆ ಸಿದ್ಧತೆ
– ಈಗಾಗಲೇ ದೇಶದ 119 ಕೋಟಿ ಮಂದಿಗೆ ಆಧಾರ್ ನೀಡಿದ್ದು, ಸೋರಿಕೆ ತಡೆಗೆ ವರ್ಚುವಲ್ ಸಂಖ್ಯೆ ನೀಡಿದೆ.
– ಸಾರ್ವಜನಿಕರ ಹಣವನ್ನು ಸುಲಭವಾಗಿ ಪತ್ತೆ ಹಚ್ಚುವುದು ಕೂಡ ಇದರ ಮತ್ತೂಂದು ಉದ್ದೇಶ.
– ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡದಂತೆ ತಡೆಯಲು ಇದೊಂದು ಉತ್ತಮ ಕ್ರಮ
– ಆಧಾರ್, ಕಂಪನಿಗಳಿಗೆ ಒದಗಿಸುತ್ತಿರುವ ಉದ್ಯೋಗ ಆಧಾರ್ ಮತ್ತು ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಆಧಾರ್ ಮಾದರಿ – – ಗುರುತಿನ ಚೀಟಿಗೂ ಯಾವುದೇ ಸಂಬಂಧವಿಲ್ಲ.
– ಆಧಾರ್ ವಿವಾದ ಸುಪ್ರೀಂನಲ್ಲಿರುವಾಗ, ಹೊಸ ಆಧಾರ್‌ಗೆ ಉದ್ದಿಮೆದಾರರು ಹೇಗೆ ಪ್ರತಿಕ್ರಿಯಿಸುತ್ತಾರೆ ನೋಡಬೇಕಿದೆ.