Advertisement
ಇವರಿಬ್ಬರ ಕಥೆ, ಹಲವರ ವ್ಯಥೆಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಜಾಲ್ಪಣೆಯ ಕೊರಗ ಸಮುದಾಯದ ವಯೋವೃದ್ಧ ಅಣ್ಣ- ತಂಗಿಯ ಕಥೆ ಈ ಸಮುದಾಯದ ಹಲವರ ವ್ಯಥೆಯೂ ಹೌದು. ಬಟ್ಯ ಹಾಗೂ ಹುಕ್ರು ಇಬ್ಬರು ವಯೋವೃದ್ಧ ಅಣ್ಣ-ತಂಗಿಗೆ ಸರಕಾರದ ಪಡಿತರ ಸಾಮಗ್ರಿ ಸಿಗದೆ ಒಂದು ವರ್ಷವೇ ಕಳೆದಿದೆ. ಈಗೀಗ ಅನಾರೋಗ್ಯದಿಂದ ಬುಟ್ಟಿ ಹೆಣೆಯಲಾಗುತ್ತಿಲ್ಲ. ಹಾಗಾಗಿ ನಿತ್ಯ ಬದುಕು ನೇಯುವುದೇ ಇವರಿಗೆ ಕಠಿನ.
ಬಟ್ಯ ಮತ್ತು ಹುಕ್ರು ಅವರದ್ದು ಏಕಾಂಗಿ ಜೀವನ. ಹೀಗಾಗಿ ಅಣ್ಣ ಬಟ್ಯನಿಗೂ ತಂಗಿ ಹುಕ್ರು ಮನೆಯಲ್ಲೇ ವಾಸ. ಬಟ್ಯನಿಗೆ ಆರೋಗ್ಯ ಸಮಸ್ಯೆಯಿದ್ದು, ಮಾತಿನಲ್ಲೂ ಸ್ಪಷ್ಟತೆ ಇಲ್ಲ. ಹುಕ್ರುವಿಗೂ ಆಗಾಗ್ಗೆ ಆರೋಗ್ಯ ಕೈ ಕೊಡುತ್ತಿದೆ. ಬಟ್ಯನಿಗೆ ಅಂತ್ಯೋದಯ ಕಾರ್ಡ್, ಹುಕ್ರುವಿಗೆ ಬಿಪಿಎಲ್ ಕಾರ್ಡ್ ಇದ್ದರೂ, ಇಬ್ಬರಿಗೂ ಒಂದು ವರ್ಷದಿಂದ ಪಡಿತರ ಸಿಗುತಿಲ್ಲ. ಕೋವಿಡ್ 19 ಭೀತಿಯ ಹೊತ್ತಲ್ಲಿ ದಾನಿಗಳು ನೀಡಿದ ಆಹಾರವೇ ಉದರ ತುಂಬಲು ಇರುವ ದಾರಿ ಎನ್ನುತ್ತಾರೆ ಹುಕ್ರು. ತಂಬಿಂಗ್ ಸಮಸ್ಯೆ
ಪಡಿತರ ಸಾಮಗ್ರಿ ಪಡೆಯಲು ಅರ್ಹತೆ ಹೊಂದಿರುವ ಪಟ್ಟಿಯಲ್ಲಿ ಇವರಿಬ್ಬರ ಹೆಸರೇ ಇಲ್ಲ. ಹಳೆ ಕಾರ್ಡ್ ಬದಲಾಯಿಸದ ಕಾರಣ ಹೆಸರನ್ನೇ ಕೈಬಿಡಲಾಗಿದೆ. ಕೆಲ ಸಮಯಗಳ ಹಿಂದೆ ತಾಲೂಕು ಕಚೇರಿಗೆ ಕಾರ್ಡ್ ಸರಿಪಡಿಸಲು ಹೋದ ಸಂದರ್ಭ ಹುಕ್ರುವಿನ ಬೆರಳಚ್ಚು ದಾಖಲಾಗಲಿಲ್ಲ. ಬಟ್ಯನಿಗೆ ಹೊಸ ಕಾರ್ಡ್‌ನ ಕಥೆಯೇ ಗೊತ್ತಿಲ್ಲ. ಆತ ಹಳೆ ಕಾರ್ಡನ್ನೇ ನಂಬಿ ಕುಳಿತಿದ್ದಾನೆ. ಸೊಸೈಟಿಗೆ ಹೋಗುವುದನ್ನು ಬಿಟ್ಟು ಮನೆ ಮನೆ ತೆರಳಿ ಹಸಿವು ನೀಗಿಸುತ್ತಿದ್ದಾನೆ.
Related Articles
Advertisement
ವಿದ್ಯುತ್, ಶೌಚಾಲಯ ಇಲ್ಲ!ವಿವಾಹವಾಗಿದ್ದರೂ ಈಗ ಇಬ್ಬರೂ ಒಂಟಿಯಾಗಿದ್ದಾರೆ. ಹುಕ್ರುವಿಗೆ ಐದು ಸೆಂಟ್ಸ್ ಖಾಲಿ ಜಾಗ ಇದೆ. ಮನೆಗೆ ವಿದ್ಯುತ್ ಸಂಪರ್ಕ ಇತ್ತಾದರೂ ಬಿಲ್ ಕಟ್ಟಿಲ್ಲ ಎಂದು ಕೆಲವು ವರ್ಷಗಳ ಹಿಂದೆ ಸಂಪರ್ಕ ಕಡಿತ ಗೊಳಿಸಿದ್ದಾರೆ. ಹೀಗಾಗಿ ಚಿಮಿಣಿ ಬೆಳಕೇ ಈ ಕುಟುಂಬಕ್ಕೆ ಆಧಾರ. ಶೌಚಾಲಯ ಕೂಡ ಇಲ್ಲ. ಜಾತಿ ಪ್ರಮಾಣಪತ್ರದಲ್ಲಿ ಹೆಸರಿನ ಲೋಪ ಇರುವ ಕಾರಣ ಹೊಸ ಮನೆ ಕೂಡ ಮಂಜೂರಾಗುತ್ತಿಲ್ಲ. ಈ ಕುಟುಂಬಕ್ಕೆ ಕೊರಗ ಸಮುದಾಯದ ಐಟಿಡಿಪಿ ವತಿಯಿಂದ ವರ್ಷದಲ್ಲಿ ಆರು ತಿಂಗಳಿಗಷ್ಟೇ ದೊರೆಯುವ ಅಲ್ಪ ಆಹಾರ ಸಾಮಗ್ರಿ ಬಿಟ್ಟು ಉಳಿದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. 269 ಕುಟುಂಬಗಳು
ತಾಲೂಕಿನಲ್ಲಿ 32 ಕೊರಗರ ಹಾಗೂ 237 ಮಲೆಕುಡಿಯ ಕುಟುಂಬಗಳಿವೆ. ಸರಕಾರದ ಕೊರಗರ ಐಟಿಡಿಪಿಯಲ್ಲಿ ನೀಡಲಾಗುವ ಸೌಲಭ್ಯ ವಿತರಿಸಲಾಗುತ್ತಿದೆ. ಗುರುತಿನ ಚೀಟಿಯೂ ಇದೆ ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖಾಧಿಕಾರಿ ಲಕ್ಷ್ಮೀದೇವಿ. ಶೇ.65ಕ್ಕೂ ಅಧಿಕ ಮಂದಿಗೆ ಕಾಡಿನಲ್ಲಿ ಸಿಗುವ ಬಳ್ಳಿ ಬಳಸಿ ಹೆಣೆಯುವ ಬುಟ್ಟಿಯೇ ಜೀವನಾಧಾರ. ಆದರೆ ಈಗ ಕಾಡಿಗೂ ಪ್ರವೇಶ ಮಾಡುತ್ತಿಲ್ಲ. ಬಳ್ಳಿ ಸಿಕ್ಕಿ ಬುಟ್ಟಿ ಹೆಣೆದರೂ ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಇಲ್ಲ. ಹೀಗಾಗಿ ಅಗತ್ಯ ವಸ್ತುಗಳ ಜತೆಗೆ ಆರ್ಥಿಕ ಸಹಕಾರದ ಅಗತ್ಯವೂ ಇದೆ ಎನ್ನುವುದು ಸಮುದಾಯದ ಹಲವರ ಅಭಿಪ್ರಾಯ. ಆಧಾರ್ ನೀಡದ ಕಾರಣ ರದ್ದಾಗಿದೆ
ಆಧಾರ್ ನೀಡದಿರುವ ಕಾರಣ ಹುಕ್ರು ಅವರ ಪಡಿತರ ಕಾರ್ಡ್ ರದ್ದುಗೊಂಡಿದೆ. ಕೋವಿಡ್ 19 ಲಾಕ್‌ಡೌನ್ ಮುಗಿದ ತತ್‌ಕ್ಷಣ ಪಡಿತರ ಚೀಟಿಗೆ ಹೊಸ ಅರ್ಜಿ ಸಲ್ಲಿಸಬೇಕಿದೆ. ಬಟ್ಯ ಅವರ ಕಾರ್ಡ್ ಸಂಖ್ಯೆ ಪಡೆದು ರೇಷನ್ ದೊರೆಯದಿರಲು ಕಾರಣವಾದ ಅಂಶಗಳ ಬಗ್ಗೆ ಪರಿಶೀಲಿಸಲಾಗುವುದು.
- ಎಂ.ಕೆ. ಮಂಜುನಾಥನ್
ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ದ.ಕ.