Advertisement

ಆಧಾರ್‌ ನಂಬರ್‌ ಕೊಟ್ಟರೆ ತಕ್ಷಣ ಎಪಿಎಲ್‌ ಕಾರ್ಡ್‌

03:45 AM Jan 06, 2017 | Harsha Rao |

ಬೆಂಗಳೂರು: ಜನವರಿ 9ರ ನಂತರ ಆನ್‌ ಲೈನ್‌ನಲ್ಲಿ ಆಧಾರ್‌ ಸಂಖ್ಯೆಯೊಂದಿಗೆ ಅರ್ಜಿ ಸಲ್ಲಿಸಿ ತಕ್ಷಣವೇ ಎಪಿಎಲ್‌
ಕಾರ್ಡ್‌ ಪಡೆದುಕೊಳ್ಳಿ. ಹೌದು, ದೇಶದಲ್ಲೇ ಮೊದಲ ಬಾರಿಗೆ ಆನ್‌ಲೈನ್‌ ಮೂಲಕ ಎಪಿಎಲ್‌ ಮತ್ತು ಬಿಪಿಎಲ್‌ ಕಾರ್ಡ್‌ ವಿತರಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತೀರ್ಮಾನಿಸಿದ್ದು, ಎಪಿಎಲ್‌ ಕಾರ್ಡ್‌ ವಿತರಣೆಗೆ ಇದೇ ತಿಂಗಳ 9ರಂದು ಚಾಲನೆ ನೀಡಲಾಗುತ್ತದೆ.

Advertisement

ವಿಕಾಸಸೌಧದಲ್ಲಿ ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್‌, ರಾಜ್ಯದ ಯಾವುದೇ ಭಾಗದಿಂದ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಿದರೆ ಅವರು ಆಧಾರ್‌ ಕಾರ್ಡ್‌ ಹೊಂದಿರುವ ವಿಳಾಸದ ಎಪಿಎಲ್‌ ಕಾರ್ಡ್‌ ವಿತರಿಸಲಾಗುವುದು ಎಂದರು.

ಅರ್ಜಿ ಸಲ್ಲಿಕೆ ಹೇಗೆ?: ಆಹಾರ ಇಲಾಖೆ ವೆಬ್‌ಸೈಟ್‌ //ahara.kar.nic.in/ಗೆ ಹೋಗಿ ಅಲ್ಲಿ ಹೊಸ ಕಾರ್ಡ್‌ ಅರ್ಜಿ ಸಲ್ಲಿಸುವ ಭಾಗವನ್ನು ಕ್ಲಿಕ್‌ ಮಾಡಬೇಕು. ಅಲ್ಲಿ ಆಧಾರ್‌ ಸಂಖ್ಯೆ ನಮೂದಿಸಿದರೆ ಆಧಾರ್‌ ಜತೆ ಜೋಡಿಸಿರುವ ಮೊಬೈಲ್‌ಗೆ ಒನ್‌ ಟೈಮ್‌ ಪಾಸ್‌ವರ್ಡ್‌ (ಓಟಿಪಿ ಸಂಖ್ಯೆ) ಬರುತ್ತದೆ. ಅದನ್ನು ಟೈಪ್‌ ಮಾಡಿದರೆ ಮುಂದಿನ ಪುಟ ತೆರೆದುಕೊಳ್ಳುತ್ತದೆ. ಇದಕ್ಕೆ ಕುಟುಂಬದ ಇನ್ನಷ್ಟು ಸದಸ್ಯರ ಹೆಸರು ನೋಂದಾಯಿಸಬೇಕಾದರೆ ಅವರ ಆಧಾರ್‌ ಕಾರ್ಡ್‌ ಸಂಖ್ಯೆ ನಮೂದಿಸಬೇಕು. ಬಳಿಕ ಆ ಆಧಾರ್‌ಗೆ ಜೋಡಿಸಿರುವ ಮೊಬೈಲ್‌ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿ
ಕ್ಲಿಕ್‌ ಮಾಡಿದರೆ ಅವರ ಹೆಸರು ಸೇರಿಕೊಳ್ಳುತ್ತದೆ. ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದರೂ ಆಧಾರ್‌ ಸಂಖ್ಯೆ ಮತ್ತು
ಒಟಿಪಿ ಸಂಖ್ಯೆ ಮೂಲಕ ಅವರ ಹೆಸರು ನೋಂದಾಯಿಸಬಹುದು.

ಇದಾದ ಬಳಿಕ ಬರುವ ಪುಟದಲ್ಲಿ ನಿಮಗೆ ಶಾಶ್ವತ ಕಾರ್ಡ್‌ ಬೇಕೇ? ಆಹಾರ ಧಾನ್ಯ ಬೇಕೇ ಎಂಬ ಆಪ್ಷನ್‌ಗಳನ್ನು ಕೇಳುತ್ತದೆ. ಶಾಶ್ವತ ಕಾರ್ಡ್‌ ಬೇಕಾದರೆ ಹೌದು ಎಂದು ಕ್ಲಿಕ್‌ ಮಾಡಬೇಕು. 15 ದಿನಗಳಲ್ಲಿ ಮನೆ ಬಾಗಿಲಿಗೆ ಕಾರ್ಡ್‌ ಬರುತ್ತದೆ. 100 ರೂ. ಪಾವತಿಸಿ ಪಡೆದುಕೊಳ್ಳಬಹುದು. ಬೇಡ ಎಂದಾದರೆ ತಕ್ಷಣವೇ ಆನ್‌ ಲೈನ್‌ನಲ್ಲಿ ಎಪಿಎಲ್‌ ಕಾರ್ಡ್‌ನ ಪ್ರಿಂಟ್‌ ಔಟ್‌ ಪಡೆದುಕೊಳ್ಳಬಹುದು. ಇದು ಆಹಾರ ಧಾನ್ಯ ಪಡೆಯಲು ಮಾತ್ರ ಬಳಕೆಯಾಗುತ್ತದೆ ಎಂದು ಹೇಳಿದರು.

20ರೊಳಗೆ ಬಿಪಿಎಲ್‌ ಕಾರ್ಡ್‌ ಅರ್ಜಿ
ಎಪಿಎಲ್‌ ಕಾರ್ಡ್‌ ಜತೆಗೆ ಜ.20ರೊಳಗೆ ಬಿಪಿಎಲ್‌ ಕಾರ್ಡ್‌ಗಳಿಗೂ ಅರ್ಜಿ ಸ್ವೀಕಾರ ಆರಂಭಿಸಿ ಕಾರ್ಡ್‌ ವಿತರಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಸಚಿವ ಯು.ಟಿ.ಖಾದರ್‌ ಹೇಳಿದ್ದಾರೆ. ಎಪಿಎಲ್‌ ಕಾರ್ಡ್‌ ಜತೆಗೇ ಬಿಪಿಎಲ್‌ ಕಾರ್ಡ್‌ ವಿತರಣೆ ಆರಂಭಿಸಬೇಕು ಎಂಬ ಉದ್ದೇಶ ಇತ್ತಾದರೂ ಅರ್ಜಿದಾರರ ಮಾಹಿತಿ ಪರಿಶೀಲನೆ
ಕಾರ್ಯಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಸಹಕಾರ ಬೇಕಾಗಿರುವುದರಿಂದ ಈ ಕುರಿತು ಒಪ್ಪಂದ ಮಾಡಿಕೊಳ್ಳಲು ವಿಳಂಬವಾಗಿದೆ. ಹೀಗಾಗಿ ಜ.20ರೊಳಗೆ ಬಿಪಿಎಲ್‌ ಕಾರ್ಡ್‌ ವಿತರಣೆಗೆ ಚಾಲನೆ ನೀಡಲಾಗುತ್ತಿದೆ ಎಂದರು. ಬಿಪಿಎಲ್‌ ಕಾರ್ಡ್‌ಗಳಿಗಾಗಿ ಈ ಹಿಂದೆ ಇದ್ದ 14 ನಿರ್ಬಂಧಗಳ ಬದಲಾಗಿ ನಾಲ್ಕು ನಿರ್ಬಂಧಗಳನ್ನು ಮಾತ್ರ ವಿಧಿಸಲಾಗಿದೆ. ಸರ್ಕಾರಿ ಇಲಾಖೆ ಸಿಬ್ಬಂದಿ ಮತ್ತು ಆದಾಯ ತೆರಿಗೆ ಪಾವತಿಸುವವರು,
ಏಳು ಎಕರೆ ಜಮೀನು ಹೊಂದಿದವರು ಮತ್ತು ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತ ಹೆಚ್ಚು ಅಳತೆಯ ಮನೆ ಹೊಂದಿರುವವರು, ಸ್ವಂತ ನಾಲ್ಕು ಚಕ್ರದ ವಾಹನ ಹೊಂದಿರುವವರು, ತಿಂಗಳಿಗೆ 150 ಯೂನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಕೆ ಮಾಡುವವರು ಬಿಪಿಎಲ್‌ ಕಾರ್ಡ್‌ ಪಡೆಯಲು ಅರ್ಹರಲ್ಲ ಎಂದು ವಿವರಿಸಿದರು.

Advertisement

ಮತ್ತೆ ಅರ್ಜಿ ಸಲ್ಲಿಸಬೇಕು: ಬಿಪಿಎಲ್‌ ಕಾಡ್‌ìಗಳಿಗೂ ಆಧಾರ್‌ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಈಗಾಗಲೇ ಬಿಪಿಎಲ್‌ ಕಾಡ್‌ìಗೆ ಅರ್ಜಿ ಸಲ್ಲಿಸಿರುವ ಸುಮಾರು 10 ಲಕ್ಷ ಮಂದಿ ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಆದರೆ, ಅರ್ಜಿ ಶುಲ್ಕ ಪಾವತಿಸಿದ್ದರೆ ಮತ್ತೆ ಶುಲ್ಕ ಪಾವತಿಸಬೇಕಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next