ಮಂಗಳೂರು: ಆರು ವರ್ಷಗಳಿಂದ ತಪ್ಪಿಸಿಕೊಂಡಿದ್ದ ಮಾನಸಿಕ ಅಸ್ವಸ್ಥ ಯುವಕನೊಬ್ಬ “ಆಧಾರ್’ ಕಾರ್ಡ್‌ನ ಸಹಾಯದಿಂದ ಮನೆ ಸೇರುವಂತಾಗಿದೆ.
2019 ನ.19ರಂದು ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆ ಭಾಗದಲ್ಲಿ ಮಾನಸಿಕ ಅಸ್ವಸ್ಥನಾಗಿದ್ದ ಯುವಕನನ್ನು ಮಂಜೇಶ್ವರದ ಸ್ನೇಹಾಲಯ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರವು ಸ್ನೇಹಾಲಯದಲ್ಲಿ ಸೇರಿಸ ಲಾಗಿತ್ತು.
ದಾಖಲಾತಿ ಸಮಯದಲ್ಲಿ ಆತನ ಮಾನಸಿಕವಾಗಿ ಅತೀ ರೇಗಾಟದ ಸ್ಥಿತಿಯಲ್ಲಿ ಇದ್ದುದರಿಂದ ಅವನ ಗುರುತನ್ನು ತಿಳಿಯಲು ಸಾಧ್ಯವಾಗದೆ ಅವನಿಗೆ “ಬಬ್ಲು’ ಎಂದು ಹೆಸರಿಸಲಾಯಿತು. ಬಳಿಕ ಆರೈಕೆಯನ್ನು ಕೇಂದ್ರವು ನಡೆಸಿತ್ತು.
ಯುವಕನ ಅಧಿಕೃತ ದಾಖಲೆ ಗಳನ್ನು ಪಡೆಯುವ ಪ್ರಯತ್ನದಲ್ಲಿ ಆಧಾರ್ ಸೇವಾ ಕೇಂದ್ರದಲ್ಲಿ ಆಧಾರ್ ಕಾರ್ಡ್‌ಗಾಗಿ “ಬಬ್ಲು ‘ ಅವರ ಅರ್ಜಿಯನ್ನು ಇತ್ತೀಚೆಗೆ ಸಲ್ಲಿಸಲಾಗಿತ್ತು. ಆರಂಭದಲ್ಲಿ ಆಧಾರ್ ಸೇವಾ ಕೇಂದ್ರವು ಅದನ್ನು ತಿರಸ್ಕರಿಸಿತು. ಆದರೆ ಸ್ವಲ್ಪ ಸಮಯದ ಬಳಿಕ ಅವರ ಹಳೆಯ ಆಧಾರ್ ವಿವರ ಪರಿಶೀಲಿಸಿದಾಗ ಬಬ್ಲೂ ನಿಜವಾದ ಗುರುತು ವಿವರಗಳನ್ನು ಪಡೆಯಲು ಸಾಧ್ಯವಾಯಿತು.
ಅವರ ನಿಜವಾದ ಹೆಸರು “ದಾವಲ್ಸಾಬ್ ದಾರುಬಾಯಿ’ ಎಂಬ ಮಾಹಿತಿ ದೊರಕಿತು. ಆಧಾರ್ ಕಾರ್ಡ್ ನಲ್ಲಿರುವ ಸಂಪರ್ಕ ಸಂಖ್ಯೆ ಬ್ಲಾಕ್ ಆಗಿದ್ದರೂ ಹುಬ್ಬಳ್ಳಿ ಪೊಲೀಸರು ಆತನ ತಂದೆಯ ಸಂಪರ್ಕ ಸಂಖ್ಯೆ ಪಡೆಯಲು ಸಹಕರಿಸಿದರು ಹಾಗೂ ಆತನ ವಿಳಾಸವನ್ನು ಪತ್ತೆ ಹಚ್ಚಲು ಸಾಧ್ಯವಾಯಿತು.