Advertisement

ಕಾರ್ಕಳದಲ್ಲಿ ಆಧಾರ್‌ ಕಾರ್ಡ್‌ ತಿದ್ದುಪಡಿ ಸ್ಥಗಿತಗೊಂಡು 4 ತಿಂಗಳು

12:30 AM Feb 23, 2019 | Team Udayavani |

ಕಾರ್ಕಳ: ಸರಕಾರದ ಪ್ರತಿಯೊಂದು ಸೌಲಭ್ಯ ಪಡೆಯಲೂ ಇಂದು ಆಧಾರ್‌ ಕಾರ್ಡ್‌ ಅತ್ಯಗತ್ಯ. ಪ್ರತಿಯೊಬ್ಬರೂ ವಿಶಿಷ್ಟ ಗುರುತಿನ ಚೀಟಿ (ಆಧಾರ್‌ ಕಾರ್ಡ್‌) ಹೊಂದುವುದು  ಕೂಡ ಕಡ್ಡಾಯ. ಹೀಗಿದ್ದರೂ ಹೊಸ ಆಧಾರ್‌ ಕಾರ್ಡ್‌ ಮಾಡಿಸಲು ಅಥವಾ ತಿದ್ದುಪಡಿಗೊಳಿಸಲು ಕಾರ್ಕಳದಲ್ಲಿ ಸಾಧ್ಯವಾಗುತ್ತಿಲ್ಲ ಎಂಬ ಕೂಗು ಕಳೆದ ನಾಲ್ಕು ತಿಂಗಳಿನಿಂದ ಕೇಳಿಬರುತ್ತಿದೆ.

Advertisement

ವೋಟರ್‌ ಐಡಿ, ಆರ್‌ಟಿಸಿ ನೋಂದಣಿ, ಪಾಸ್‌ ಪೋರ್ಟ್‌ ಪಡೆಯುವಿಕೆ,  ಅಡುಗೆ ಅನಿಲ ಸಂಪರ್ಕಕ್ಕಾಗಿ, ಶಾಲಾ ದಾಖ ಲಾತಿ, ವಿವಿಧ ಪರವಾನಿಗೆ, ಪಿಎಫ್ ಪಡೆಯಲು, ವಸತಿ ಯೋಜನೆ ಗಳಿಗಾಗಿ ಅಲ್ಲದೇ ಅನೇಕ ಕಾರ್ಯಗಳಿಗೆ ಆಧಾರ್‌ ಒದಗಿಸುವುದು ಕಡ್ಡಾಯ. ಆದರೆ, ಕಾರ್ಕಳ ತಾಲೂಕಿನಲ್ಲಿ ಹೊಸ ಆಧಾರ್‌ ಕಾರ್ಡ್‌ ಪಡೆಯಲು ಅಥವಾ ತಿದ್ದುಪಡಿಗೊಳಿಸಲು ಜನತೆ ಸಾಕಷ್ಟು ತ್ರಾಸಪಡುವಂತಾಗಿದೆ. ಕಾರಣ ಸರ್ವರ್‌ ಸಮಸ್ಯೆ.

ನಸುಕಿನ ವೇಳೆ ಕ್ಯೂಆಧಾರ್‌ ತಿದ್ದುಪಡಿಗಾಗಿ ಅಥವಾ ಹೊಸ ಆಧಾರ್‌ ಕಾರ್ಡ್‌ ಪಡೆಯಲು ತಾಲೂಕು ಕಚೇರಿ, ಅಂಚೆ ಕಚೇರಿ, ಗ್ರಾಮ ಪಂಚಾಯತ್‌ಗಳಲ್ಲಿ ಜನರು ಟೋಕನ್‌ ಪಡೆಯಲು ಬೆಳ್ಳಂ ಬೆಳಗ್ಗೆಯೇ ಧಾವಿಸುತ್ತಾರೆ. ದಿನಂಪ್ರತಿ ಕೇವಲ 10-15 ಮಂದಿಗೆ ಟೋಕನ್‌ ನೀಡಲಾಗುತ್ತಿದೆ. ಟೋಕನ್‌ ಪಡೆದು ಎರಡು ತಿಂಗಳು ಕಾದ ಬಳಿಕ ಕೇಂದ್ರಕ್ಕೆ ಆಗಮಿಸಿದಾಗ ಆಧಾರ್‌ ಸರಿಪಡಿಸುವ ಸಿಬ್ಬಂದಿ ಕೊಡುವ ಸಿದ್ಧ ಉತ್ತರ ಸರ್ವರ್‌ ಪ್ರಾಬ್ಲಿಂ. ಹೀಗಾಗಿ ಕಷ್ಟಪಟ್ಟು ಟೋಕನ್‌ ಪಡೆದಾಗ್ಯೂ ಆಧಾರ್‌ ಕಾರ್ಡ್‌ ಸರಿಪಡಿಸುವ  ಖಾತ್ರಿಯಿಲ್ಲ.

ಜನಸಾಮಾನ್ಯರ ಅಲೆದಾಟ
ತಾಲೂಕು ಕಚೇರಿಗೆ ಆಗಮಿಸಿದಲ್ಲಿ ಗ್ರಾಮ ಪಂಚಾಯತ್‌ನಲ್ಲಿ ಆಧಾರ್‌ ಮಾಡಿಕೊಡುತ್ತಾರೆ ಎಂದು ಅಲ್ಲಿನ ಸಿಬ್ಬಂದಿ ತಿಳಿಸುತ್ತಾರೆ. ಗ್ರಾಮ ಪಂಚಾಯತ್‌ನವರು ಅಂಚೆ ಕಚೇರಿಯಲ್ಲಿ ಸರಿಪಡಿಸಿಕೊಡುತ್ತಾರೆ ಎಂದು ಕಳುಹಿಸುತ್ತಾರೆ. ಅತ್ತಿಂದ ಇತ್ತ, ಇತ್ತಿಂದ ಅತ್ತ ಅಂಥ ಎಲ್ಲೆಡೆ  ಎಡತಾಕಿದರೂ ಕೊನೆಗೆ ತಮ್ಮ ಕಾರ್ಯವಾಗದೇ ಬರಿ ಕೈಯಲ್ಲಿ ಹಿಂತಿರುಗುತ್ತಾರೆ. ಜನಸಾಮ್ಯಾನರ ಈ ಅಲೆದಾಟ ನಿತ್ಯ ನಿರಂತರವಾಗಿದೆ.

ಅವ್ಯವಸ್ಥೆಯ ಆಗರ
ಇಂಗ್ಲಿಷ್‌ನಲ್ಲಿ  ಹೆಸರು ನಮೂದಿಸಿದಾಗ ಒಂದು ಅಕ್ಷರ ತಪ್ಪಿದರೂ ಫ‌ಲಾನುಭವಿಗಳಿಗೆ ಸರಕಾರದ ಸೌಲಭ್ಯ ದೊರೆಯುವುದಿಲ್ಲ. ತಾಳೆ ಹೊಂದುತ್ತಿಲ್ಲ ಎನ್ನುವ ಕಾರಣಕ್ಕೆ ಅರ್ಜಿ ತಿರಸ್ಕರಿಸ್ಪಡುತ್ತದೆ. ಕೆಲವೊಮ್ಮೆ ತಿದ್ದುಪಡಿಗೆ ಕಳಿಸಿ, ಹೊಸ ಆಧಾರ್‌ ಬಂದಾಗ ಅದರಲ್ಲಿ ಇನ್ನೊಂದು ತಪ್ಪು, ಸಮಸ್ಯೆಯಿರುವುದೂ ಸಾಮಾನ್ಯ. ಇಷ್ಟೆಲ್ಲ ಆವಾಂತರಗಳು ನಡೆಯುತ್ತಿದ್ದರೂ ಕೇಳುವವರೇ ಇಲ್ಲ ಎಂಬಂತಾಗಿದೆ.

Advertisement

ಬೆಕ್ಕಿಗೆ ಚೆ‌ಲ್ಲಾಟ ಇಲಿಗೆ ಪ್ರಾಣಸಂಕಟ
ಜನಸಾಮಾನ್ಯರಿಗೆ ಇದೊಂದು ಗಂಭೀರ ಸಮಸ್ಯೆಯಾಗಿ ಕಂಡುಬಂದರೂ ಅಧಿಕಾರಿ ವರ್ಗದವರಿಗೆ ಇದೊಂದು ಸಾಮಾನ್ಯ ಸಮಸ್ಯೆ. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ ಎಂಬ ಸನ್ನಿವೇಶವಿರುವುದು ಸತ್ಯ.

ಪ್ರೈವೇಟ್‌ ಬ್ರಾಂಚ್‌
ಆಧಾರ್‌ಗೆ ಸಂಬಂಧಿಸಿದಂತೆ ಯಾವೆಲ್ಲ ಸಮಸ್ಯೆಗಳು ಕಂಡುಬರುತ್ತಿವೆ ಎಂಬುದನ್ನ ತಿಳಿದುಕೊಂಡು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಂಚೆ ಕಚೇರಿ, ತಾಲೂಕು ಕಚೇರಿಯಲ್ಲದೇ ಪ್ರೈವೇಟ್‌ ಬ್ರಾಂಚ್‌ ತೆರೆದು ಸರ್ವಿಸ್‌ ನೀಡಲಾಗುವುದು.
– ಡಾ| ಎಸ್‌. ಎಸ್‌. ಮಧುಕೇಶ್ವರ್‌,
ಸಹಾಯಕ ಆಯುಕ್ತರು

ಅಧಿಕಾರಿಗಳು ಗಮನ ಹರಿಸಲಿ 
ಆಧಾರ್‌ ತಿದ್ದುಪಡಿ ಅಥವಾ ಹೊಸ ಆಧಾರ್‌ ಕಾರ್ಡ್‌ ಮಾಡಿಸುವವರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಆಧಾರ್‌ನಲ್ಲಿ ಜನ್ಮ ದಿನಾಂಕ ವ್ಯತ್ಯಾಸ ಕಂಡುಬಂದಲ್ಲಿ ತಾಲೂಕು ಖಜಾನಾಧಿಕಾರಿಯವರ ಸಹಿಯ ಅಗತ್ಯವಿದ್ದು, ಅವರು ಒಂದು ಸಹಿಗಾಗಿ 100 ರೂ. ಪಡೆಯುತ್ತಿದ್ದಾರೆ. ಗ್ರಾಮಸ್ಥರು ಪಂಚಾಯತ್‌ಗೆ ಬಂದು ತಮ್ಮ ಅಳಲು ತೊಡಿಕೊಳ್ಳುತ್ತಿದ್ದು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಲಿ.
– ರಾಜೇಶ್‌ ರಾವ್‌,
ಉಪಾಧ್ಯಕ್ಷರು,ಗ್ರಾ.ಪಂ.ಕುಕ್ಕುಂದೂರು

– ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next