ಮುಂಬೈ/ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಮತ್ತು ಬ್ಯಾಂಕ್‌ಗಳ ಮಧ್ಯೆ ಆಧಾರ್ ನೋಂದಣಿ ಹಾಗೂ ಲಿಂಕ್ ಮಾಡುವುದಕ್ಕೆ ಸಂಬಂಧಿಸಿದಂತೆ ಸಂಘರ್ಷ ಆರಂಭವಾಗಿದೆ. ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವುದು, ಬ್ಯಾಂಕ್ ಶಾಖೆಗಳಲ್ಲೇ ಆಧಾರ್ ನೋಂದಣಿ ಮಾಡಿಸಿಕೊಳ್ಳುವುದು ಸೇರಿದಂತೆ ಕಾಲಕಾಲಕ್ಕೆ ಬ್ಯಾಂಕ್‌ಗಳಿಗೆ ಯುಐಡಿಎಐ ನಿರ್ದೇಶನ ನೀಡುತ್ತಿದೆ. ಆದರೆ ಬ್ಯಾಂಕ್ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಬ್ಯಾಂಕ್‌ಗಳಿಗೆ ಹಣಕಾಸು ಸಚಿವಾಲಯ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಮಾತ್ರ ನಿರ್ದೇಶನ ನೀಡಬೇಕು. ಆದರೆ ಯುಐಡಿಎಐ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಭಾರತೀಯ ಬ್ಯಾಂಕ್‌ಗಳ ಸಂಘಟನೆ (ಐಬಿಎ) ಆಕ್ಷೇಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಹಣಕಾಸು ಸಚಿವಾಲಯ ಹಾಗೂ ಆರ್‌ಬಿಐಗೆ ಪತ್ರವನ್ನೂ ಐಬಿಎ ಬರೆದಿದೆ.
ಕಳೆದ ಜುಲೈನಲ್ಲಿ ಮೊದಲು ಆಧಾರ್ ನೋಂದಣಿ ಕೇಂದ್ರ ಹಾಗೂ ನವೀಕರಣ ಕೇಂದ್ರವನ್ನು ಬ್ಯಾಂಕ್‌ನ ಹತ್ತರಲ್ಲಿ ಒಂದರಷ್ಟು ಶಾಖೆಗಳಲ್ಲಿ ಆಗಸ್ಟ್ ಒಳಗಾಗಿ ಸ್ಥಾಪಿಸಬೇಕು ಎಂದು ಆದೇಶಿಸಿತ್ತು. ನಂತರ ಈ ಅವಧಿಯನ್ನು ಒಂದು ತಿಂಗಳು ಮುಂದುವರಿಸಲಾಯಿತು ಹಾಗೂ ಈ ನಿರ್ದೇಶನವನ್ನು ಅನುಸರಿಸದ ಬ್ಯಾಂಕ್‌ಗಳು ಪ್ರತಿ ಶಾಖೆಗೆ 20 ಸಾವಿರ ರೂ. ದಂಡ ನೀಡಬೇಕು ಎಂದು ಆದೇಶಿಸಿದೆ. ಇದಿಗ ಆಧಾರ್ ರಿಜಿಸ್ಟ್ರಾರ್ ಹಾಗೂ ಆಧಾರ್ ನೋಂದಣಿ ಏಜೆನ್ಸಿಯಾಗಿಯೂ ಕೆಲಸ ಮಾಡಬೇಕಿರುವುದು ಕಡ್ಡಾಯ ಎಂದು ಆದೇಶ ಹೊರಡಿಸಿದೆ. ಹೀಗಾಗಿ ಆಧಾರ್ ನೋಂದಣಿಗಾಗಿ ಖಾಸಗಿ ಏಜೆನ್ಸಿಗಳ ಜತೆಗೆ ಬ್ಯಾಂಕ್ ಸಹಭಾಗಿತ್ವ ಸಾಧಿಸಬಾರದು ಎಂದು ಹೇಳಿದೆ.
ಸಂಘಟನೆಯ ಆಕ್ಷೇಪ: ಪ್ರತಿ ಹತ್ತು ಬ್ಯಾಂಕ್ ಶಾಖೆಗಳಿಗೆ ಒಂದರಂತೆ ಆಧಾರ್ ಮಾಹಿತಿ ಅಪ್‌ಡೇಟ್ ಕೇಂದ್ರ ತೆರೆಯಬೇಕು. ಅದಕ್ಕೆ ಆಯಾ ಬ್ಯಾಂಕ್ ಶಾಖೆಯ ಉದ್ಯೋಗಿಗಳನ್ನು ನಿಯೋಜಿಸಬೇಕು ಎಂಬ ಸಲಹೆಯ ಬಗ್ಗೆ ಅಖೀಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ (ಎಐಬಿಇಎ) ಆಕ್ಷೇಪ ವ್ಯಕ್ತಪಡಿಸಿದೆ. ಹೆಚ್ಚುವರಿ ಕೆಲಸ ದೈನಂದಿನ ಬ್ಯಾಂಕ್ ಕರ್ತವ್ಯಕ್ಕೆ ತೊಂದರೆಯಾಗಲಿದೆ. ಸದ್ಯ ಈ ಕೆಲಸವನ್ನು ಖಾಸಗಿ ಸಂಸ್ಥೆಯ ಉದ್ಯೋಗಿಗಳು ನಡೆಸುತ್ತಿದ್ದಾರೆ. ಆದರೆ ಹೊಸ ನಿಯಮ ಜಾರಿಯಾದರೆ ಕಷ್ಟ ಎಂದು ಭಾರತೀಯ ಬ್ಯಾಂಕ್‌ಗಳ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಎಐಬಿಇಎಯ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಗೊಂದಲ ಇನ್ನೂ ಮುಗಿದಿಲ್ಲ: ಸುಪ್ರೀಂಕೋರ್ಟ್ ಇತ್ತೀಚೆಗೆ ಆಧಾರ್ ಅಕ್ರಮವಲ್ಲ ಮತ್ತು ಈ ವಿಚಾರದಲ್ಲಿ ಗೌಪ್ಯತೆಯೇ ಮುಖ್ಯವಲ್ಲ ಎಂದು ಆದೇಶಿಸಿದೆ. ಆದರೆ ಸುಪ್ರೀಂಕೋರ್ಟ್‌ನ ಅಂತಿಮ ತೀರ್ಪು ಇನ್ನೂ ಬಾಕಿ ಇದೆ. ಒಂದೊಮ್ಮೆ ಆಧಾರ್ ಕಡ್ಡಾಯಗೊಳಿಸಿದರೆ ಸರ್ಕಾರದ ಈ ನಿರ್ಧಾರ ಮುಂದುವರಿಯಲಿದೆ. ಅಲ್ಲದೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವ ಸಂಬಂಧ ಗಡುವನ್ನು ಸದ್ಯದಲ್ಲಿ ಮುಂದುವರಿಸುವ ಸಾಧ್ಯತೆಯಿಲ್ಲ. ಆದರೆ ಆಧಾರ್ ಲಿಂಕಿಂಗ್ ವ್ಯಾಪ್ತಿಯಿಂದ ಸಣ್ಣ ಖಾತೆಗಳನ್ನು ಹೊರಗಿಡಲಾಗಿದೆ. ಅಂದರೆ ಹಣಕಾಸು ವರ್ಷದಲ್ಲಿ ಒಟ್ಟು ಠೇವಣಿ 1 ಲಕ್ಷ ರೂ.ಗಿಂತ ಕಡಿಮೆ ಇದ್ದರೆ ಮತ್ತು ಒಂದು ತಿಂಗಳಲ್ಲಿ ಎಲ್ಲ ಹಿಂಪಡೆಯುವಿಕೆ ಮತ್ತು ವರ್ಗಾವಣೆಗಳ ಮೊತ್ತವು ರೂ. 10,000ಕ್ಕಿಂತ ಕಡಿಮೆ ಇದ್ದರೆ ಮತ್ತು ಒಮ್ಮೆ 50 ಸಾವಿರ ರೂ.ಗಿಂತ ಕಡಿಮೆ ಬ್ಯಾಲೆನ್ಸ್ ಇದ್ದರೆ ಆಧಾರ್ ಲಿಂಕ್ ಮಾಡಬೇಕಿಲ್ಲ.
ಲಿಂಕ್ ಮಾಡುವುದು ಕಡ್ಡಾಯ
ಹಣ ದುರ್ಬಳಕೆ ತಡೆ ನಿಯಮಗಳ ಪ್ರಕಾರ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂದು ಆರ್‌ಬಿಐ ಹೇಳಿದೆ. ಇತ್ತೀಚೆಗೆ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ನೀಡಿದ ಪ್ರತಿಕ್ರಿಯೆಯಲ್ಲಿ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಲ್ಲ ಎಂದು ಆರ್‌ಬಿಐ ಹೇಳಿದೆ ಎನ್ನಲಾಗಿತ್ತು. ಆದರೆ ಕೆಲವು ಪ್ರಕರಣಗಳಲ್ಲಿ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂಬುದಾಗಿ 2017ರ ಜೂನ್‌ನಲ್ಲಿ ಹೊರಡಿಸಲಾದ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಹೀಗಾಗಿ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯವೇ? ಅಲ್ಲವೆ? ಎಂಬ ಗೊಂದಲ ನಿವಾರಣೆಯಾದಂತಾಗಿದೆ. ಸರ್ಕಾರ ಈಗಾಗಲೇ ಬ್ಯಾಂಕ್ ಖಾತೆಗಳೊಂದಿಗೆ ಆಧಾರ್ ಲಿಂಕ್ ಮಾಡುವಂತೆ ಆದೇಶಿಸಿದ್ದು, ಇದಕ್ಕೆ ಡಿಸೆಂಬರ್ 31ರ ಗಡುವನ್ನೂ ವಿಧಿಸಿದೆ.