ಉಡುಪಿ: ಆಧಾರ್ ಕಾರ್ಡ್ ನೋಂದಣಿ ಮತ್ತು ತಿದ್ದುಪಡಿಗಾಗಿ ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ವಾಜಪೇಯಿ ಸಭಾಂಗಣದಲ್ಲಿ ಡಿ.26ರಂದು ಆರಂಭಿಸಲಾಗಿರುವ “ಆಧಾರ್ ಅದಾಲತ್’ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ ಹಲವು ಮಂದಿ ಆಧಾರ್ ತಿದ್ದುಪಡಿ, ನೋಂದಣಿ ಮಾಡಿಕೊಳ್ಳಲಾಗದೆ ವಾಪಸಾಗಿದ್ದಾರೆ.
5 ದಿನಗಳ ಕಾಲ ನಡೆಯಲಿರುವ ಈ ಅದಾಲತ್‌ನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಎರಡು ಕಂಪ್ಯೂಟರ್‌ಗಳನ್ನು ಅಳವಡಿಸಿ ದಿನಕ್ಕೆ 70 ಮಂದಿ ನೋಂದಣಿ/ತಿದ್ದುಪಡಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಮೊದಲ ದಿನ ಮತ್ತು ಡಿ.27ರಂದು ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು. ಡಿ.27ರಂದು 300ಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಕಂಪ್ಯೂಟರ್‌ಗಳ ಸಂಖ್ಯೆಯನ್ನು ನಾಲ್ಕಕ್ಕೆ ಹೆಚ್ಚಿಸಲಾಯಿತಾದರೂ ಆಗಮಿಸಿದವರೆಲ್ಲರಿಗೂ ಅವಕಾಶ ದೊರೆಯಲಿಲ್ಲ. ಹಾಗಾಗಿ ಬಾಕಿ ಉಳಿದವರಿಗೆ ಟೋಕನ್
ಸಂಖ್ಯೆ ನೀಡಿ ವಾಪಸ್ಸು ಕಳುಹಿಸಲಾಯಿತು.
ತಾಂತ್ರಿಕ ತೊಡಕು: ನಿಗದಿತವಾದ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ತಿದ್ದುಪಡಿ/ನೋಂದಣಿ ಮಾಡಿದ್ದೇವೆ. ಡಿ.27ರಂದು 175 ತಿದ್ದುಪಡಿ ಮತ್ತು 48 ಹೊಸ ನೋಂದಣಿ ಆಗಿದೆ. ಮಕ್ಕಳು ಮತ್ತು ಹಿರಿಯರ ಬೆರಳಚ್ಚು ಪಡೆಯುವಾಗ ವಿಳಂಬ ಆಗು ವುದರಿಂದ ಸ್ವಲ್ಪ ತೊಂದರೆಯಾಗಿದೆ. ಕೆಲವು ಮಂದಿ ಪೂರಕವಾದ ದಾಖಲೆಗಳನ್ನು ಒದಗಿಸದೆ ಇದ್ದುದರಿಂದಲೂ ಪ್ರಕ್ರಿಯೆ ವಿಳಂಬವಾಗಿದೆ. 180 ಮಂದಿಗೆ ಟೋಕನ್ ನೀಡಲಾಗಿದೆ. ಅವರು ಮುಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ “ಸ್ಪಂದನ’ ಕೇಂದ್ರದಲ್ಲಿ ಆಧಾರ್ ತಿದ್ದುಪಡಿ/ ನೋಂದಣಿ ಮಾಡಿಕೊಳ್ಳಬಹುದು. ಇಲ್ಲಿ ದೊರೆ ತಿರುವ ಪ್ರತಿಕ್ರಿಯೆ ಕುರಿತು ಬೆಂಗಳೂರಿನ ಇ-ಆಡಳಿತ ಕೇಂದ್ರಕ್ಕೆ ಮಾಹಿತಿ ನೀಡಲಾಗುವುದು. ತಾಲೂಕು ಮಟ್ಟದಲ್ಲಿ ಆಧಾರ್ ಅದಾಲತ್ ನಡೆಸಲು ಪ್ರಸ್ತಾವನೆ ಸಲ್ಲಿಸ ಲಾಗುವುದು ಎಂದು ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
“ಆಧಾರ್ ನೋಂದಣಿ/ತಿದ್ದುಪಡಿಗೆ ಅವಕಾಶವಿದೆ ಎಂದು ಸಾರ್ವಜನಿಕರನ್ನು ಆಹ್ವಾನಿಸಿ ಅನಂತರ ಅವಕಾಶ ನೀಡದೆ ಇರುವುದು ಸರಿಯಲ್ಲ. ಅಗತ್ಯವಿರುವಷ್ಟು ಸಿಸ್ಟಂ ಮತ್ತು ಸಿಬಂದಿಯನ್ನು ನೇಮಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.