Advertisement

ಯುವ ಪ್ರತಿಭೆಯ ಗಾಢ ಪ್ರದರ್ಶನ

03:49 PM Apr 07, 2017 | Team Udayavani |

ಅವರಲ್ಲಿ ಕೆಲವರು ಉಜಿರೆಯ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಪದವಿ ವಿದ್ಯಾರ್ಥಿಗಳು. ಇನ್ನು ಕೆಲವರು ನಿಟ್ಟೆಯಲ್ಲಿ ಎಂಜಿನಿಯರಿಂಗ್‌ ಓದುತ್ತಿರುವವರು. ಒಂದಿಬ್ಬರು ವಿವೇಕಾನಂದ ಕಾಲೇಜಿನಲ್ಲಿ ಪದವಿ ಕಲಿಯುತ್ತಿರುವವರು. ಹಾಗೆಯೇ ಕಾಸರ ಗೋಡಿನ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೂ ಕೆಲವರಿದ್ದರು. ಇವರೆಲ್ಲರೂ ಯಕ್ಷಗಾನ ನಾಟ್ಯಾಭ್ಯಾಸವಾಗಿದೆ. ಒಳ್ಳೆಯ ಅರ್ಥಗಾರಿಕೆಯ ಕೌಶಲ, ಹುಮ್ಮಸ್ಸಿನ ಪಾತ್ರ ಪೋಷಣೆಯ ಚಾತುರ್ಯ ಮೇಳವಿಸಿದೆ. ಇವರೆಲ್ಲ ಒಟ್ಟುಗೂಡಿ ಯುಗಾದಿಯ ದಿನ ಶಿವಳ್ಳಿ ಸಂಪದದ ನೆರಳಿನಲ್ಲಿ ಪ್ರದರ್ಶಿಸಿದ ಯಕ್ಷಗಾನ ಬಯಲಾಟ ಕಿರಾತಮೂರ್ತಿ ಮಹಾತ್ಮೆ. ಬೆಳ್ತಂಗಡಿ ತಾಲೂಕಿನ ಮದ್ದಡ್ಕದಲ್ಲಿರುವ ಪಿಲಿ ಚಾಮುಂಡಿ ದೈವದ ಕೋಲದ ದಿನ ಈ ನೂತನ ಪ್ರಸಂಗದ ಲೋಕಾರ್ಪಣೆಯೊಂದಿಗೆ ಅದರ ಮೊದಲ ಪ್ರದರ್ಶನ ವಿದ್ಯಾರ್ಥಿಗಳಿಂದಲೇ ಪ್ರಸ್ತುತಗೊಂಡಿತು.   

Advertisement

ಸ್ಥಳೀಯ ಶಿವ ಕ್ಷೇತ್ರವೊಂದರ ಉಗಮದ ಕಥೆಯೇ ಈ ಪ್ರಸಂಗದ ವಸ್ತು. ದ್ವಾಪರ ಯುಗದಲ್ಲಿ ನಡೆದ ಕಿರಾತಾರ್ಜುನ ಪ್ರಸಂಗದ ಜತೆಗೆ ಸ್ಥಳೀಯ ಶಿವ ಕ್ಷೇತ್ರದ ಸ್ಥಳ ಪುರಾಣವನ್ನೂ ಸೇರಿಸಿ ಈ ಪ್ರಸಂಗವನ್ನು ರಚಿಸಲಾಗಿದೆ. ಶಿವನ ಅನುಗ್ರಹಕ್ಕಾಗಿ ತಪಸ್ಸು ಮಾಡು ತ್ತಿದ್ದಾಗ ತನ್ನನ್ನು ಪರೀಕ್ಷಿಸಲೆಂದು ಎದುರಾಗುವ ಕಿರಾತನೇ ಶಿವ ಎಂಬ ಅರಿವಿಲ್ಲದ ಅರ್ಜುನನು ಕಿರಾತನೆದುರು ಸೋಲುತ್ತಾನೆ. ಬಳಿಕ ಶಿವನ ಕೃಪೆ ಗಳಿಸಲು ಮರಳಿನಿಂದ ಶಿವಲಿಂಗ ತಯಾರಿಸಿ ಹೂಗಳಿಂದ ಅರ್ಚಿಸಿದಾಗ ಆ ಹೂಗಳೆಲ್ಲವೂ ಕಿರಾತನ ಕೊರಳಿಗೆ ಸೇರುವುದನ್ನು ಕಂಡು ಕಿರಾತನೇ ಶಿವ ಎಂಬುದು ಅವನಿಗೆ ತಿಳಿಯುತ್ತದೆ. ಮಾತ್ರವಲ್ಲ, ಕಪಿಲ ಮುನಿಗೆ ಶಿವನನ್ನು ಕಿರಾತನಾಗಿ ಕಂಡಾಗ ಮೈ ಅರಳಿದ್ದು ಇದೇ ಜಾಗದಲ್ಲಿ ಎಂಬ ಐತಿಹ್ಯವಿದೆ. ಆ ಕಾರಣಕ್ಕೆ ಇಲ್ಲಿಗೆ ಮೈರಳಿಕೆ ಎಂಬ ಹೆಸರು ಬಂದಿದೆ. ಹೀಗೆ ಸ್ಥಳ ಪುರಾಣವನ್ನು ಒಗ್ಗೂಡಿಸಿ ಬರೆದ ಪ್ರಸಂಗ ರೋಚಕವಾಗಲೆಂದು ಭೀಮನು ಕಿಮ್ಮಿàರನನ್ನು ಕೊಲ್ಲುವ ಘಟ್ಟವನ್ನೂ ಸೇರಿಸಿಕೊಳ್ಳಳಾಗಿದೆ.

ಪರೀಕ್ಷೆಯ ಮಧ್ಯೆ ಕೇವಲ ಒಂದೇ ರಿಹರ್ಸಲ್‌ ನಡೆಸಿದ್ದರೂ ಈ ಪ್ರಸಂಗವನ್ನು ಮನೋಜ್ಞವಾಗಿ ರಂಗಕ್ಕಿಳಿಸಿದ ವಿದ್ಯಾರ್ಥಿಗಳ ಪ್ರಯತ್ನವನ್ನು ಮೆಚ್ಚಲೇಬೇಕು. ಭಾಗವತರಾಗಿ ನಿಟ್ಟೆಯ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿ ವಿಷ್ಣುಪ್ರಸಾದ್‌ ಬಾಯಿತಾಳದಲ್ಲಿ ಕಿರಾತ ಪಡೆಯನ್ನು ಕುಣಿಸಿದ ಪರಿ, ಅರ್ಜುನನಿಗೆ ನಿಜವು ತಿಳಿದಾಗ ಮೂಡುವ ಪಶ್ಚಾತ್ತಾಪದ ಸಂದರ್ಭಗಳಲ್ಲಿ ಅವರ ರಾಗರಸ ಧಾರೆ ಮಂತ್ರಮುಗ್ಧಗೊಳಿಸಿತು. ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ರಾಮಪ್ರಕಾಶ ಅವರ ಚೆಂಡೆ ವಾದನ, ಅಮೋಘ ಕುಂಟಿನಿಯವರ ಮೃದಂಗ ತಕ್ಕ ಹಿಮ್ಮೇಳದ ಜತೆಯಾಗಿತ್ತು.

ಮೂಕಾಸುರನಾಗಿ ಎಸ್‌ಡಿಎಂ ಕಾಲೇಜಿನ ಪದವಿ ವಿದ್ಯಾರ್ಥಿ ಸುಹಾಸ್‌ ಕೆರ್ಮುಣ್ಣಾಯ ಅವರ ಪ್ರವೇಶ ಅಬ್ಬರದಿಂದ ಕೂಡಿದ್ದರೆ ಅದೇ ಕಾಲೇಜಿನ ಆದಿತ್ಯ ರಾವ್‌ ದೊಂಡೋಲೆ ಹಂದಿಯಾಗಿ ಸಮರ್ಥವಾಗಿ ನಿರ್ವಹಿಸಿದರು. ದೇವದೂತನಾಗಿ ಶ್ರೀವತ್ಸ ಭಟ್‌ ಮತ್ತು ಚಾರಕನಾಗಿ ಪುರುಷೋತ್ತಮ ಕಕ್ಕೆಪದವು ಅವರ ಹಾಸ್ಯ ಪಾತ್ರ ನಿರ್ವಹಣೆ ಚೆನ್ನಾಗಿತ್ತು. ದ್ವಿತೀಯ ಪಿಯು ವಿದ್ಯಾರ್ಥಿನಿ ಪದ್ಮಪ್ರಿಯಾ ದ್ರೌಪದಿ ಮತ್ತು ಪಾರ್ವತಿ ಎರಡೂ ಪಾತ್ರಗಳಲ್ಲೂ ಸಮರ್ಥಳೆನಿಸಿಕೊಂಡರೆ ಮತ್ತೋರ್ವ ವಿದ್ಯಾರ್ಥಿನಿ ಸುಷ್ಮಾ ಬ್ರಹ್ಮನ ಪಾತ್ರವನ್ನು ಸೊಗಸಾಗಿ ನಿರ್ವಹಿಸಿದಳು.

ಭೀಮ ಹಾಗೂ ಕಪಿಲ ಮುನಿಯಾಗಿ ಅನುರಾಗ್‌, ಧರ್ಮರಾಯ ಮತ್ತು ಕುಂಭಾಸುರ ಪಾತ್ರಗಳನ್ನು ನಿರ್ವಹಿಸಿದ ಸುದರ್ಶನ ಆಚಾರ್ಯ, ಅರ್ಜುನ ಮತ್ತು ಚಂಡಾಸುರನಾಗಿ ಸಚಿತ್‌, ದೇವೇಂದ್ರ ನಾಗಿ ಅವಿನಾಶ್‌, ಕಾಕಾಸುರನಾಗಿ ಪುರುಷೋತ್ತಮ್‌, ಪ್ರಖರಾಸುರನಾಗಿ ಅಭಿಷೇಕ್‌ ಇವರೆಲ್ಲರೂ ಪ್ರಬುದ್ಧವಾಗಿ ಕಥೆಯನ್ನು ನಿರೂಪಿಸಲು ನೆರವಾದರು. ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ ಪ್ರಹ್ಲಾದನು ಮೂರು ಪಾತ್ರಗಳನ್ನು ನಿರ್ವಹಿಸಿದರೂ ಆಯಾಸಗೊಳ್ಳದೆ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದ. ಅವನಂತೆಯೇ ನಕುಲ, ಷಣ್ಮುಖ, ಅಗ್ನಿಯಾಗಿ ಪ್ರದುಮ್ನ ಮೂರ್ತಿ, ವೇದವ್ಯಾಸನಾಗಿ ಹರಿ ಇರ್ವತ್ರಾಯ, ನಂದಿಯಾಗಿ ಕಾರ್ತಿಕ್‌ ತಂತ್ರಿ, ಕೃಷ್ಣ ಮತ್ತು ಕಿರಾತರೂಪೀ ಶಿವನಾಗಿ ಉದಯಕುಮಾರ್‌ ಅವರ ಅಭಿನಯ ಮನಮುಟ್ಟುವಂತಿತ್ತು. 

Advertisement

ಹಿರಿಯರಾದ ಮೋಹನ ಬೈಪಾಡಿತ್ತಾಯರು ಕೂಡ ಮೃದಂಗ ನುಡಿಸಿದರು. ಪ್ರಸಂಗವನ್ನು ಕೆಲವೇ ದಿನಗಳಲ್ಲಿ ರಚಿಸಿ ಧೌಮ್ಯ ಮತ್ತು ಅರ್ಜುನನ ಪಾತ್ರದಲ್ಲಿ ತಮ್ಮ ಅಮೋಘ ಪ್ರತಿಭೆಯನ್ನು ಪ್ರಕಟಿಸಿದ ಪ್ರೊ| ಮೋಹನ ಕಲ್ಲೂರಾಯರು ಬಯಲಾಟದ ಯಶಸ್ಸಿನಲ್ಲಿ ಸಿಂಹಪಾಲು ಪಡೆದರು. ಹಲವು ಯಕ್ಷಗಾನ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯ ಪ್ರದರ್ಶನ ನೀಡಿ ಬಹುಮಾನಗಳನ್ನು ಗಳಿಸಿರುವ ಈ ವಿದ್ಯಾರ್ಥಿ ಕಲಾವಿದರ ನಿರ್ವಹಣೆ ಇವರು ಹವ್ಯಾಸಿ ಯಕ್ಷಕಲಾವಿದರು ಎಂದು ಅನ್ನಿಸದಷ್ಟು ಒಪ್ಪವಾಗಿ ಮೂಡಿಬಂದಿತು.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next