ಬೆಳ್ತಂಗಡಿ: ಪ್ರಸ್ತುತ ಅಮೆರಿಕಾದಲ್ಲಿ ವಿಜ್ಞಾನಿಯಾಗಿರುವ ಇಲ್ಲಿನ ನಿಟ್ಟಡೆ ಗ್ರಾಮದ ಫಂಡಿಜೆ ನಿವಾಸಿ ಚೈತನ್ಯ ಸಾಠೆ ಎಂಬವರು ಪರ್ವತಾರೋಹಣಾ ಸಂದರ್ಭದಲ್ಲಿ ಪ್ರಪಾತಕ್ಕೆ ಜಾರಿಬಿದ್ದು ಸಾವನ್ನಪ್ಪಿದ್ದಾರೆ.
ಅಮೆರಿಕಾದ ಹಿಲ್ಸ್ ಬೊರೋದಲ್ಲಿ ಯುವ ವಿಜ್ಞಾನಿಯಾಗಿದ್ದ ಸಾಠೆ ಅವರು ಹವ್ಯಾಸಿ ಪರ್ವತಾರೋಹಿಯಾಗಿದ್ದರು ಮತ್ತು ಇವರು ಅಮೆರಿಕಾದಲ್ಲಿರುವ ಮಝಾಮಾಸ್ ಪರ್ವತಾರೋಹಿ ತಂಡದ ಓರ್ವ ಸದಸ್ಯರಾಗಿದ್ದರು.
35 ವರ್ಷ ಪ್ರಾಯದವರಾಗಿದ್ದ ಸಾಠೆ ಅವರು ಇಲ್ಲಿನ ಸ್ಮಿತ್ ರಾಕ್ ಸ್ಟೇಟ್ ಪಾರ್ಕ್ ನಲ್ಲಿ ಕಡಿದಾದ ಬೆಟ್ಟದಿಂದ ಇಳಿಯುವ ಪ್ರಯತ್ನದಲ್ಲಿದ್ದಾಗ ಸುಮಾರು 100 ಅಡಿ ಎತ್ತರದಿಂದ ಪ್ರಪಾತಕ್ಕೆ ಉರುಳಿ ಮೃತಪಟ್ಟರು ಎಂದು ತಿಳಿದುಬಂದಿದೆ.
ಮಝಾಮಾಸ್ ಎಂಬ ಪೋರ್ಟ್ ಲ್ಯಾಂಡ್ ಮೂಲದ ಲಾಭರಹಿತ ಪರ್ವತಾರೋಹಿಗಳ ತಂಡದ ಸದಸ್ಯರಾಗಿದ್ದ ಸಾಠೆ ಅವರು ಈ ತಂಡದೊಂದಿಗೆ ಹಲವಾರು ಪರ್ವತಾರೋಹಣಗಳಲ್ಲಿ ಭಾಗವಹಿಸಿದ್ದರು.
ಚೈತನ್ಯ ಅವರು ಹಿರಿಯ ವಿಜ್ಞಾನಿ ರಮೇಶ್ ಸಾಠೆ ಅವರು ಪುತ್ರರಾಗಿದ್ದಾರೆ. ರಮೇಶ್ ಅವರು ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಚೈತನ್ಯ ಅವರು ಧಾರ್ಮಿಕ ಮತ್ತು ವಿಜ್ಞಾನದ ಸಂಶೋಧಕರಾಗಿದ್ದರು. ಬೆಂಗಳೂರಿನಲ್ಲಿ ಉನ್ನತ ಶಿಕ್ಷಣವನ್ನು ಪೂರೈಸಿದ ಬಳಿಕ ಚೈತನ್ಯ ಅವರು ಅಮೆರಿಕಾದ ಇಲ್ಲಿನೋಯ್ಸ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಚೈತನ್ಯ ಅವರು ತಂದೆ, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.