ಕಾರ್ಕಳ: ಪೆನ್ಸಿಲ್ ಮೊನೆ, ಸೋಪು, ಸುಣ್ಣದ ಕಡ್ಡಿಯಲ್ಲಿ ವಿವಿಧ ಬಗೆಯ ಕಲಾಕೃತಿಗಳನ್ನು ರಚಿಸುವ ಮೂಲಕ ಕಾರ್ಕಳದ ಯುವಕನೋರ್ವ ಗಿನ್ನೆಸ್ ದಾಖಲೆ ಬರೆಯಲು ಮುಂದಾಗಿದ್ದಾನೆ.
ಈದು ಗ್ರಾಮದ ನೂರಾಳ್‌ಬೆಟ್ಟು ನಿವಾಸಿ, ಕಾರ್ಕಳ ಮೆಸ್ಕಾಂನ ಅರೆಕಾಲಿಕ ನೌಕರ ಸುರೇಂದ್ರ ಆಚಾರ್ಯ ಅವರೇ ದಾಖಲೆ ನಿರ್ಮಿಸಲು ಮುಂದಾಗಿರುವ ಯುವಕ.
ಡಿಪ್ಲೋಮ ಪದವಿ ಪಡೆದಿರುವ ಸುರೇಂದ್ರ ಅವರು ಪೆನ್ಸಿಲ್ ಆರ್ಟ್‌ನಲ್ಲಿ ಮದರ್ ಥೆರೆಸಾ, ವಿಶ್ವಕಪ್ ಟ್ರೋಫಿ, ಬಾಹುಬಲಿ, ವೀಣೆ, ಏಸುಕ್ರಿಸ್ತ, ಕುದುರೆಯ ಪ್ರತಿಮೆ, ಭರತನಾಟ್ಯದ ಭಂಗಿಗಳು, ಗಿಟಾರ್, ಮಾನವ ಅಸ್ಥಿಪಂಜರ, ಚೆಂಡೆ, ಧ್ವಜಾಕಟ್ಟೆಗಳು, ಜಲವರ್ಣದಲ್ಲಿ ನೀರೆಯರ ಕ್ರೀಡಾ ದೃಶ್ಯ, ಸಾಕೊಪೋನ್, ಜಿಂಕೆ, ಕಾಳಿಂಗನ ಹೆಡೆ ಮೆಟ್ಟಿ ಕುಣಿಯುವ ಕೃಷ್ಣ, ಅಕ್ಕಮಹಾದೇವಿ, ಸತ್ಯ ಸಾಯಿ ಬಾಬಾ, ಬಂದೂಕು, ಕೃಷ್ಣ , ಗಿಳಿಯ ಪಂಜರ, ದೇಶದ ಪ್ರಧಾನಿಯ ಚಿತ್ರಗಳು ಸುರೇಂದ್ರ ಆಚಾರ್ಯ ನಿರ್ಮಿಸಿದ ಕಲಾಕೃತಿಗಳಲ್ಲಿ ಪ್ರಮುಖವಾದವು.
ಸುರೇಂದ್ರದ ಸಾಧನೆಯನ್ನು ಮೆಚ್ಚಿ ಸಾಕಷ್ಟು ಪ್ರಶಸ್ತಿಗಳು ದೊರೆತಿದ್ದು, ಕಲಾಕೃತಿಗಾಗಿ ಗಿನ್ನೆಸ್ ದಾಖಲೆ ಬರೆಯುವ ಬಯಕೆ ಅವರದ್ದು. ಈ ಮೂಲಕ ಪಾಕಿಸ್ಥಾನದ ಹೆಸರಲ್ಲಿರುವ ದಾಖಲೆಯನ್ನು ಅಳಿಸಿ, ಭಾರತದ ಹೆಸರಿಗೆ ಬರೆಸುವ ನಿಟ್ಟಿನಲ್ಲಿ ಕಾಯೊìನ್ಮುಖರಾಗಿದ್ದಾರೆ.
ದಾಖಲೆ ಸೇರುವ ಗುರಿ
ಪಾಕಿಸ್ಥಾನದವರು ಪೆನ್ಸಿಲ್ ಮೊನೆಯಿಂದ ಸರಪಳಿ ನಿರ್ಮಿಸಿ ಮಾಡಿರುವ ಗಿನ್ನೆಸ್ ದಾಖಲೆ ಮುರಿಯಬೇಕೆನ್ನುವ ನಿಟ್ಟಿನಲ್ಲಿ ಕಳೆದ 2 ವರ್ಷಗಳಿಂದ ತಯಾರಿ ನಡೆಸಿರುತ್ತೇನೆ. ಎ. 7ರಂದು ಕಾರ್ಕಳ ಅನಂತಶಯನದ ರೋಟರಿ ಬಾಲಭವನದಲ್ಲಿ ಪೆನ್ಸಿಲ್ ಲೆಡ್ ನಿಂದ ನಿರಂತರವಾಗಿ ಸರಪಳಿ ರಚಿಸಿ, ದಾಖಲೆ ನಿರ್ಮಾಣ ಮಾಡಬೇಕೆಂದಿದ್ದೇನೆ.
-ಸುರೇಂದ್ರ ಆಚಾರ್ಯ,
ನೂರಾಳ್‌ಬೆಟ್ಟು