ಇತ್ತೀಚೆಗೆ “ತಲಾಕ್’ ಎಂಬ ಪದ ಭಾರೀ ಸುದ್ದಿಯಾಗಿದ್ದು ಗೊತ್ತೇ ಇದೆ. ಈಗ “ತಲಾಕ್ ತಲಾಕ್ ತಲಾಕ್’ ಹೆಸರಲ್ಲೇ ಒಂದು ಸಿನಿಮಾ ರೆಡಿಯಾಗಿದ್ದು, ಸದ್ದಿಲ್ಲದೆಯೇ ಬಿಡುಗಡೆಗೂ ಪೂರ್ವ ತಯಾರಿ ಮಾಡಿಕೊಳ್ಳುತ್ತಿದೆ. ಈ ಚಿತ್ರದ ಶೀರ್ಷಿಕೆ ಕೇಳಿದೊಡನೆ ಚಿತ್ರದ ಸಾರಾಂಶ ಮತ್ತು ಅದರ ಆಶಯ ಗೊತ್ತಾಗುತ್ತದೆ. ಈ ಸಿನಿಮಾದ ಇನ್ನೊಂದು ವಿಶೇಷವೆಂದರೆ, 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮಾ.3 ರ ಮಂಗಳವಾರ 1.30ಕ್ಕೆ ಕಲಾವಿದರ ಸಂಘದ ಡಾ.ರಾಜಕುಮಾರ್ ಭವನದಲ್ಲಿ ಪ್ರದರ್ಶನಗೊಳ್ಳಲಿದೆ.
ಇನ್ನು, ಈ ಚಿತ್ರದ ಮುಖ್ಯ ಆಕರ್ಷಣೆ ರೇಡಿಯೋ ಜಾಕಿ ನೇತ್ರಾ. ಹೌದು, ನೇತ್ರಾ ಇಲ್ಲಿ ನೂರ್‌ಜಹಾನ್ ಎಂಬ ಪಾತ್ರ ಮಾಡಿದ್ದಾರೆ. ಇಡೀ ಸಿನಿಮಾ ಕಥೆ ಅವರ ಸುತ್ತವೇ ಸಾಗುತ್ತದೆ. ಆ ಕುರಿತು
“ಉದಯವಾಣಿ’ ಜೊತೆ ಮಾತನಾಡಿದ ನೇತ್ರಾ, “ಕಳೆದ ನವೆಂಬರ್‌ನಲ್ಲಿ ಚಿತ್ರ ಶುರುವಾಗಿ, ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇದೊಂದು ಮುಸ್ಲಿಂ ಕುಟುಂಬವೊಂದರ ಕಥೆ ಮತ್ತು ವ್ಯಥೆ ಒಳಗೊಂಡ ಚಿತ್ರ. ಆಗುಂಬೆ, ತೀರ್ಥಹಳ್ಳಿ ಸಮೀಪ ಚಿತ್ರೀಕರಣ ನಡೆದಿದೆ. ಆ ಭಾಗದ ಒಂದು ಮುಸ್ಲಿಂ ಕುಟುಂಬದಲ್ಲಿ ನಡೆಯುವ ಸ್ಟೋರಿ ಇಲ್ಲಿದೆ.
ಇಂಗ್ಲೀಷ್ ನಾವೆಲ್‌ವೊಂದನ್ನು ಕನ್ನಡಕ್ಕೆ ಅಬ್ದುಲ್ ರೆಹಮಾನ್ ಅವರು ಅನುವಾದಿಸಿದ “ಅಲ್ಲಾನಿಂದ ನಿರಾಕೃತರು’ ಎಂಬ ಪುಸ್ತಕದಲ್ಲಿ ಮುಸ್ಲಿಂ ಧರ್ಮದ ಅಸಾಹಯಕ ಮಹಿಳೆಯರ ಕಥೆಗಳು ದಾಖಲಾಗಿವೆ. ಅದರಲ್ಲಿ ಒಂದು ಕಥೆ ಆಯ್ಕೆ ಮಾಡಿಕೊಂಡು ಮಾಡಿದ ಚಿತ್ರವಿದು. ಮನಸ್ತಾಪದಿಂದಾಗಿ ಧರ್ಮವನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಸಂದರ್ಭದಲ್ಲಿ ಏನೆಲ್ಲಾ ಘಟನೆ ನಡೆಯುತ್ತೆ ಎಂಬುದರ ಮೇಲೆ ಚಿತ್ರ ಸಾಗುತ್ತದೆ. ನಾನು ನೂರ್‌ಜಹಾನ್ ಎಂಬ ಪಾತ್ರ ನಿರ್ವಹಿಸಿದ್ದು, ಇಡೀ ಕಥೆ ನನ್ನ ಮೇಲೆಯೇ ನಡೆಯುತ್ತಿದೆ. ಗಂಡ ತಲಾಕ್ ಕೊಟ್ಟಿರುತ್ತಾನೆ.
ಆ ನಂತರ ಆಕೆಯನ್ನು ಸಮಾಜ ಯಾವ ದೃಷ್ಟಿಯಲ್ಲಿ ನೋಡುತ್ತೆ, ಆಕೆ ಹೇಗೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾಳೆ. ಕೊನೆಗೆ ತನ್ನ ತಪ್ಪಿನ ಅರಿವಾಗಿ ಅವನು ತಲಾಕ್ ವಾಪಸ್ ತೆಗೆದುಕೊಳ್ಳಲು ಬಂದಾಗ, ಅವಳು ವಾಪಸ್ ಹೋಗಲು ಎಷ್ಟೆಲ್ಲಾ ಒದ್ದಾಡುತ್ತಾಳೆ ಎಂಬುದು ಕಥೆಯ ಸಾರಾಂಶ. ಇಲ್ಲಿ ಪ್ರೀತಿ ಇದೆ, ಸಂಬಂಧಗಳ ಮೌಲ್ಯವಿದೆ. ಎಮೋಷನ್ಸ್ ಕೂಡ ಇದೆ’ ಎಂದು ವಿವರ ಕೊಡುತ್ತಾರೆ ನೇತ್ರಾ. ಚಿತ್ರವನ್ನು ವೈದ್ಯನಾಥ್ ನಿರ್ದೇಶಿಸಿದ್ದಾರೆ. ನಿರ್ಮಾಣ ಕೂಡ ಅವರದೇ.
“ತಲಾಕ್ ತಲಾಕ್ ತಲಾಕ್’ ಸಿನಿಮಾ ಕಲಾತ್ಮಕ ಅಂತ ಹೇಳುವುದು ತಪ್ಪು. ಇದೊಂದು ಯುನಿರ್ವಸಲ್ ಸಬ್ಜೆಕ್ಟ್ ಹೊಂದಿರುವ ಕಥೆ. ಹಾಗಾಗಿ, ಇಲ್ಲಿ ಎಲ್ಲಾ ಅಂಶಗಳೂ ಇವೆ. ಈಗಿನ ಕಾಲಕ್ಕೆ ಪ್ರಸ್ತುತ ಎನಿಸುವ ಚಿತ್ರ ಮಾಡಿರುವುದು ಖುಷಿ ಕೊಟ್ಟಿದೆ ಎನ್ನುವ ನೇತ್ರಾ, ಇದು ನನ್ನ ನಾಲ್ಕನೆ ಚಿತ್ರ. ಆದರೂ, ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದೇನೆ. ಚಿತ್ರದಲ್ಲಿ ಶ್ರೀನಿವಾಸ ಮೂರ್ತಿ, ವೀಣಾಸುಂದರ್, ರವಿಭಟ್ ಇತರರು ನಟಿಸಿದ್ದಾರೆ. ಅಶೋಕ್ ಕಶ್ಯಪ್ ಛಾಯಾಗ್ರಹಣವಿದೆ. ಸುರೇಶ್ ಅರಸ್ ಅವರ ಸಂಕಲನವಿದೆ. ಪ್ರವೀಣ್ ಗೋಡ್ಖಿಂಡಿ ಅವರ ಸಂಗೀತವಿದೆ.