Advertisement

ದುಬಾೖ ಎಂಬ ವಿಸ್ಮಯ ಲೋಕ

01:55 PM Nov 28, 2020 | Adarsha |

ಮನುಷ್ಯರು ವಾಸಿಸಲು ದುಸ್ತರವಾದಂತಹ ನೈಸರ್ಗಿಕ ಕಾರ್ಪಣ್ಯವಿರುವ ನಾಡಿದು. ಆದರೆ ಜಗತ್ತಿನಲ್ಲೇ ಅತೀ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿರುವ ಬೀಡಿದು. ಒಂದೇ ಒಂದು ಮರವೂ ಬೆಳೆಯದಂತಹ ಬಂಜರು ಭೂಮಿಯ ನಾಡಿದು. ಆದರೆ ಗಗನಚುಂಬಿ ಕಟ್ಟಡಗಳೊಂದಿಗೆ ಜಗತ್ತೇ ತನ್ನತ್ತ ನೋಡುವಂತೆ ಮಾಡಿದ ಬೀಡಿದು.

Advertisement

ಒಂದೋ ಎರಡೋ ಅಪರೂಪಕ್ಕೆ ಮಳೆ ಯಾಗುವ ದಟ್ಟ ಬರಗಾಲವಿರುವ ನಾಡಿದು. ಆದರೆ ಮುಗಿಲೆತ್ತರಕ್ಕೆ ಚಿಮ್ಮುವ ನೀರಿನ ಕೃತಕ ಕಾರಂಜಿಯನ್ನು ನಿರ್ಮಿಸಿರುವ ಬೀಡಿದು. ಒಂದೇ ಒಂದು ನೈಸರ್ಗಿಕ ನದಿಯೂ ಇರದ ಸಮುದ್ರ ತಟದಲ್ಲಿರುವ ನಾಡಿದು. ಆದರೆ ಉಪ್ಪು ನೀರನ್ನೇ ಸಿಹಿನೀರನ್ನಾಗಿ ಪರಿವರ್ತಿಸಿ ನದಿಯನೀರಿನಂತೆ ಯಥೇತ್ಛವಾಗಿ ಬಳಸುವಬೀಡಿದು. ಒಂದು ಕಾಲದಲ್ಲಿ ಕೇವಲ ಒಂಟೆಯ ಮೇಲೆ ಮಾತ್ರ ಪ್ರಯಾಣ ಸಾಧ್ಯವೆಂಬಂತಿದ್ದ ನಾಡಿದು.

ಇಂದು ಜಗತ್ತಿನಲ್ಲೇ ಅತೀ ದುಬಾರಿ ಕಾರುಗಳನ್ನು, ಅತ್ಯಾಧುನಿಕ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ಬೀಡಿದು. ಒಂದೇ ಒಂದು ಪ್ರಖರ ಗ್ರೀಷ್ಮ ಋತುವನ್ನು ಮಾತ್ರ ಹೊಂದಿರುವ ನಾಡಿದು. ಆದರೆ ಕೃತಕ ಹವಾನಿಯಂತ್ರಣದಿಂದ ಶಿಶಿರವನ್ನು ಕೂಡ ನಿರ್ಮಿಸಿಕೊಂಡ ಬೀಡಿದು.

ಕೊತ್ತಂಬರಿ ಸೊಪ್ಪು ಕೂಡ ಬೆಳೆಯಲಾಗದಂತಹ ಮರಳುಗಾಡಿನ ಬಂಜರು ನಾಡಿದು. ಆದರೆ ಜಗತ್ತಿನ ಎಲ್ಲ ಬಗೆಯ ಸೊಪ್ಪು ತರಕಾರಿಗಳನ್ನು ತಾಜಾ ಗುಣಮಟ್ಟದಲ್ಲಿ ತರಿಸಿಕೊಳ್ಳುವ ಬೀಡಿದು. ಹೀಗೆ… ನೈಸರ್ಗಿಕವಾಗಿ ಇಷ್ಟೆಲ್ಲ ತೊಂದರೆಗಳಿ ದ್ದರೂ ಮಾನವ ನಿರ್ಮಿತ ಅಚ್ಚರಿಗಳೊಂದಿಗೆ ತನ್ನ ಶ್ರೀಮಂತಿಕೆಯೊಂದಿಗೆ ತೆರೆದುಕೊಳ್ಳುತ್ತಾ ಹೋಗುತ್ತದೆ ಈ ದುಬಾೖ ನಗರಿ. ಕೆಲವು ವರ್ಷಗಳ ಹಿಂದೆ ಕೆಲಸದ ನಿಮಿತ್ತ ದುಬಾೖಗೆ ಬರುವ ಅವಕಾಶ ಸಿಕ್ಕಿತು. ಅದಕ್ಕೆ ಮೊದಲು ಲಂಡನ್‌ ನಗರದಲ್ಲಿ ಒಂದೆರಡು ವರ್ಷವಿದ್ದ ಅನುಭವವಿತ್ತು.

Advertisement

ಆದರೆ ಅಲ್ಲಿಯ ಶಾಂತ ಥೇಮ್ಸ… ನದಿಯ ಹರಿಯುವಿಕೆಯಲ್ಲಿ ಕಾವೇರಿಯನ್ನು, ಲಂಡನ್‌ ನಗರದ ಹೊರವಲಯದಲ್ಲಿರುವ ಕೃಷಿಭೂಮಿಯಲ್ಲಿ ಮಂಡ್ಯದ ಗದ್ದೆಗಳನ್ನು, ಸಹಜವಾಗಿ ಹಬ್ಬಿರುವ ಕಾಡುಗಳಲ್ಲಿ ನಮ್ಮ ಮಲೆನಾಡಿನ ಕಾನನವನ್ನು ಊಹಿಸಿಕೊಂಡು ನಾನು ಪರದೇಶದಲ್ಲಿದ್ದೇನೆ ಎಂಬ ಭಾವವನ್ನು ಸ್ವಲ್ಪ ಶಮನ ಮಾಡಿಕೊಂಡಿದ್ದೆ.

ಆದರೆ ಅಂಥ ಯಾವ ಪ್ರಕೃತಿ ರಮ್ಯತೆಯೂ ಇರದ ಈ ದುಬಾೖ ನನಗೆ ಇಷ್ಟವಾಗಲಿಕ್ಕಿಲ್ಲ ಎಂಬ ನಂಬಿಕೆಯೊಂದಿಗೆ ಇಲ್ಲಿಗೆ ಬಂದೆ. ಆದರೆ ಪ್ರಕೃತಿಯ ಉಗ್ರ ರೂಪದ ದರ್ಶನದ ಪ್ರತೀಕದಂತಿರುವ ಬರಡು ಮರುಭೂಮಿಯ ಸೂರ್ಯಾಸ್ತಕ್ಕೂ ತನ್ನದೇ ಆದ ಸೌಂದರ್ಯವಿದೆ ಎಂಬ ಸತ್ಯದ ಅನುಭವವಾಯಿತು.

ಅಷ್ಟೇ ಅಲ್ಲ; ಮನುಷ್ಯ ತಂತ್ರಜ್ಞಾನದ ಉಚ್ಛ್ರಯ ಸ್ಥಿತಿಗೆ ಸಾಕ್ಷಿಯಾಗಿರುವ (ಬುರ್ಜ್‌ ಖಲೀಫಾ) ಜಗತ್ತಿನ ಅತೀ ಎತ್ತರದ ಕಟ್ಟಡಗಳು, ಸಾಹಸದ ಕುರುಹಿನಂತಿರುವ, ಸಮುದ್ರದ ನಡುವೆ ಮಾನವನೇ ನಿರ್ಮಿಸಿದ ಕೃತಕ ದ್ವೀಪಗಳು, ಶ್ರೀಮಂತಿಕೆಗೆ ತಕ್ಕ ವ್ಯಾಖ್ಯಾನದಂತಿರುವ ಐಷಾರಾಮಿ ಹೊಟೇಲ್‌ – ಬಂಗಲೆಗಳು, ಹಳೆ ವಿಜಯನಗರ ಸಾಮ್ರಾಜ್ಯವನ್ನುನೆನಪಿಸುವ ಚಿನ್ನ, ಬೆಳ್ಳಿ, ಮುತ್ತು, ರತ್ನಗಳ ಬಜಾರುಗಳು, ಮಸಾಲೆ ಪದಾರ್ಥಗಳ ಸಂತೆಗಳು, ದೃಷ್ಟಿ ಹಾಯಿಸಿದಷ್ಟುದೂರಕ್ಕೆ ಕಾಣಸಿಗುವ ಅಗಲ- ನೇರ ರಸ್ತೆಗಳು, ಕನ್ನಡ, ತುಳು, ಮಲಯಾಳಂ, ಹಿಂದಿ ಹೀಗೆ ನಿರಂತರ ಕಿವಿಯ ಮೇಲೆ ಬೀಳುತ್ತಿರುವ ಭಾರತೀಯ ಭಾಷೆಗಳು- ಈಎಲ್ಲವೂಪ್ರವಾಸಿಗರನ್ನು ಆಕರ್ಷಿಸುತ್ತಲೇ ಇವೆ.

ಒಂದೇ ಮಾತಿನಲ್ಲಿ ಹೇಳಬೇಕೆಂದರೆ “ದುಬಾೖ, ಮರುಭೂಮಿಯಲ್ಲಿ ತೈಲದ ಸಿಂಚನಕ್ಕೆ ಅರಳಿದ ಅಚ್ಚರಿಯ ಕಾಂಕ್ರೀಟ್‌ ಉದ್ಯಾನವನ’.

ಈ ಅಂಕಣದ ವಿಶೇಷತೆಯೆಂದರೆ ವಿದೇಶಗಳಿಗೆ ತೆರಳಿ ಅಲ್ಲೊಂದಿಷ್ಟು ವರ್ಷ ಇದ್ದು ವಾಪಸು ತಾಯ್ನೆಲಕ್ಕೆ ಮರಳಿದವರ ನೆನಪಿನಂಗಳದ ಚಿತ್ರಗಳು. ಪ್ರಶಾಂತ್‌ ಭಟ್‌ ಅವರು ಲಂಡನ್‌, ದುಬಾಯಿಗೆ ತೆರಳಿ ಈಗ ವಾಪಸಾಗಿ ಊರಿನಲ್ಲಿದ್ದಾರೆ.

ಪ್ರಶಾಂತ್‌ ಭಟ್‌,ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next