ಬೆಳಗಾವಿ: ಏಕದಿನ ಸರಣಿ ಗೆದ್ದು ಬೀಗುತ್ತಿರುವ ಭಾರತ ಎ ಕ್ರಿಕೆಟ್ ತಂಡದ ಆಟಗಾರ್ತಿಯರು ಬೆಳಗಾವಿಯಲ್ಲೂ ಕಮಾಲ್ ತೋರಿಸಿದ್ದು, ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾ ಎ ತಂಡವನ್ನು ಸೋಲಿಸಿದ್ದಾರೆ.
ಇಲ್ಲಿನ ಕೆಎಸ್‌ಸಿಎ ಮೈದಾನದಲ್ಲಿ ಮಂಗಳವಾರ ನಡೆದ ಟಿ20 ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು 17 ಓವರ್‌ಗಳಲ್ಲಿ ಕೇವಲ 57 ರನ್‌ಗಳಿಗೆ ಆಲೌಟ್ ಮಾಡಿದ ಭಾರತ ತಂಡ 10 ಓವರ್‌ಗಳಲ್ಲಿಯೇ ರನ್ ಬೆನ್ನಟ್ಟಿ ಗೆಲುವಿನ ನಗೆ ಬೀರಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾ ತಂಡ ಮೈದಾನದಲ್ಲಿ ಬಹಳ ಹೊತ್ತು ನಿಲ್ಲಲು ಮನಸು ಮಾಡಿದಂತೆ ಕಾಣಲಿಲ್ಲ. ಮೊದಲ ಓವರ್‌ನಲ್ಲಿಯೇ ಸರ್ಮಿನ್ ಸುಲ್ತಾನ್ ರನೌಟ್ ಆದರು. ಅನಂತರ ಒಬ್ಬರ ಹಿಂದೊಬ್ಬರು ಔಟಾಗಿ ಹೊರ ನಡೆದರು. ಕೇವಲ ಮೂವರು
ಆಟಗಾರ್ತಿಯರಷ್ಟೇ ಎರಡಂಕಿಯ ರನ್ ಗಳಿಸಿದರು.
ಬಾಂಗ್ಲಾ ನೀರಸ ಪ್ರದರ್ಶನ: ಭಾರತ ಎ ತಂಡದ ನಾಯಕಿ ಎ.ಎ.ಪಾಟೀಲ್ ಹಾಗೂ ರಾಧಾ ಯಾದವ್ ತಲಾ ಎರಡು ವಿಕೆಟ್ ಕಬಳಿಸಿ ಬಾಂಗ್ಲಾಕ್ಕೆ ಆಘಾತ ನೀಡಿದರು. ಇವರ ಮಾರಕ ಬೌಲಿಂಗ್‌ಗೆ ಮಕಾಡೆ ಮಲಗಿದ ಶೈಲಾ ಶರ್ಮಿನ್, ನಿಗ ಸುಲ್ತಾನಾ, ನಾಯಕಿ ಸಲ್ಮಾ ಖಾತುನ್ ಹಾಗೂ ಪನ್ನಾ ಘೋಷ್ ಶೂನ್ಯ ಸಂಪಾದನೆ ಮಾಡಿ ತಂಡದ ಸೋಲಿಗೆ ಕಾರಣರಾದರು. ರುಮಾನಾ ಅಹ್ಮದ್ 24 ರನ್ ಪೇರಿಸಿದ್ದು ಬಿಟ್ಟರೆ ಬೇರೆ ಯಾವುದೇ ಆಟಗಾರ್ತಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಾಗಲಿಲ್ಲ.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾ ಎ 17 ಓವರ್, 57ಕ್ಕೆ ಆಲೌಟ್ (ರುಮಾನಾ ಅಹ್ಮದ್ 24, ರಾಧಾ ಯಾದವ್ 4ಕ್ಕೆ 2). ಭಾರತ ಎ 10.4 ಓವರ್ 60/2 (ಮೇಘನಾ 30, ಖದೀಜಾ 16ಕ್ಕೆ1).
ಭೈರೋಬಾ ಕಾಂಬಳೆ