Advertisement

ಮಂಗಳೂರಲ್ಲೂ ನಡೆದಿತ್ತು ಮಹಿಳೆಯ ಕೊಲೆಗೈದು ಕತ್ತರಿಸಿ ಎಸೆದ ಘಟನೆ !

01:29 AM Jul 22, 2023 | Team Udayavani |

ಮಂಗಳೂರು: ದೇಶದ ವಿವಿಧೆಡೆ ವಿವಿಧ ಕಾರಣಗಳಿಗಾಗಿ ಮಹಿಳೆಯರ ಕೊಲೆ ಮಾಡಿ ದೇಹವನ್ನು ಕತ್ತರಿಸಿ ಎಸೆಯುವ ಕೃತ್ಯ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ವರದಿಯಾಗುತ್ತಿದೆ. ಇಂಥದ್ದೇ ಕೃತ್ಯ ವೊಂದು 2019ರಲ್ಲಿ ಮಂಗಳೂರಿನಲ್ಲೂ ನಡೆದಿತ್ತು. ಪ್ರಸ್ತುತ ವಿಚಾರಣೆ ಹಂತದಲ್ಲಿದೆ.

Advertisement

ತನ್ನಿಂದ ಪಡೆದ ಸಾಲವನ್ನು ಮರುಪಾವತಿಸುವಂತೆ ಕೇಳಿದ ಮಹಿಳೆಯನ್ನು ಕೊಂದು ದೇಹವನ್ನು ಕತ್ತರಿಸಿ ವಿವಿಧೆಡೆ ಎಸೆದ ಪ್ರಕರಣವಿದು. ತನಿಖೆ ಸಾಕಷ್ಟು ಸವಾಲಿನದೆನಿಸಿದ್ದರೂ ಆರೋಪಿ ದಂಪತಿಯನ್ನು ವಾರದೊಳಗೆ ಬಂಧಿಸುವಲ್ಲಿ ಪೊಲೀಸರು ಯಶ ಸಾಧಿಸಿದ್ದರು.

2019ರ ಮೇ 12ರಂದು ಕದ್ರಿ ಪಾರ್ಕ್‌ ಬಳಿ ಮಹಿಳೆಯ ರುಂಡ ಪತ್ತೆಯಾಗಿರುವ ಬಗ್ಗೆ ನಾಗರಿಕರಿಂದ ಪೊಲೀಸರಿಗೆ ಮಾಹಿತಿ ಬಂದಿತ್ತು. ಅದೇ ವೇಳೆಗೆ ನಂದಿಗುಡ್ಡೆ ಮೋರ್ಗನ್ಸ್‌ ಗೇಟ್‌ ಬಳಿ ರುಂಡರಹಿತ ನಗ್ನದೇಹ ಗೋಣಿಚೀಲದೊಳಗೆ ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಇದು ಅತ್ತಾವರದಲ್ಲಿ ಎಲೆಕ್ಟ್ರಿಕಲ್‌ ಅಂಗಡಿ ನಡೆಸುತ್ತಿದ್ದ ಶ್ರೀಮತಿ ಶೆಟ್ಟಿ (35) ಅವರದು ಎನ್ನುವುದು ಬಹಿರಂಗಗೊಂಡಿತ್ತು. ಆರೋಪಿಗಳ ಬಂಧನದ ಬಳಿಕ ಶ್ರೀಮತಿಯವರ ಕಾಲಿನ ತುಂಡನ್ನು ಕದ್ರಿ ಪಾರ್ಕ್‌ ಬಳಿಯಿಂದ ವಶಪಡಿಸಿ ಕೊಳ್ಳಲಾಯಿತು.

ಶ್ರೀಮತಿ ಹಲವು ವರ್ಷಗಳಿಂದಲೇ ಅತ್ತಾವರದಲ್ಲಿ ಎಲೆಕ್ಟ್ರಿಕಲ್ಸ್‌ ಅಂಗಡಿ ಹೊಂದಿದ್ದು, ವಿದ್ಯುತ್‌ ಉಪಕರಣಗಳ ದುರಸ್ತಿ ನಡೆಸಲಾಗುತ್ತಿತ್ತು. ಉತ್ತಮ ಆದಾಯವೂ ಇದ್ದು ಪಾಂಡೇಶ್ವರ ಬಳಿಯ ಅಮರ ಆಳ್ವ ಲೇನ್‌ನಲ್ಲಿ ಸ್ವಂತ ಮನೆ ಹೊಂದಿದ್ದರು. ಕಾರು, ಸ್ಕೂಟರ್‌ ಕೂಡ ಇತ್ತು. ಶ್ರೀಮತಿ ತನ್ನ ತಂದೆಯ ಸಹೋದರಿ (ಅತ್ತೆ)ಯೊಂದಿಗೆ ವಾಸವಾಗಿದ್ದರು.

Advertisement

ಸಾಲ ಕೊಟ್ಟು ಕೊಲೆಯಾದರು!
ಕೊಲೆಯಾದ 4 ದಿನಗಳಲ್ಲಿ ಆಗಿನ ಕಮಿಷನರ್‌ ಸಂದೀಪ್‌ ಪಾಟೀಲ್‌ ಮಾರ್ಗದರ್ಶನದಲ್ಲಿ ಪೊಲೀಸರು ಆರೋಪಿಗಳಾದ ಸ್ಯಾಮ್ಸನ್‌ ಹಾಗೂ ಪತ್ನಿ ವಿಕ್ಟೋರಿಯಾ ಮಥಾಯಸ್‌ ಅವರನ್ನು ವೆಲೆನ್ಸಿಯಾದಿಂದ ಬಂಧಿಸಿದ್ದರು.

ನಂದಿಗುಡ್ಡದಲ್ಲಿ ಫಾಸ್ಟ್‌ಫುಡ್‌ ಅಂಗಡಿ ನಡೆಸುತ್ತಿದ್ದ ಸ್ಯಾಮ್ಸನ್‌ ನಷ್ಟ ದಲ್ಲಿದ್ದು, 1 ಲಕ್ಷ ರೂ.ಗಳನ್ನು ಶ್ರೀಮತಿ ಅವರಿಂದ ಪಡೆದಿದ್ದ. ಅದರಲ್ಲಿ 40 ಸಾವಿರ ರೂ. ಮಾತ್ರ ಹಿಂದಿರುಗಿಸಿದ್ದ, ಉಳಿದ ಮೊತ್ತವನ್ನು ಕೇಳಲು ಹೋಗಿದ್ದ ಶ್ರೀಮತಿಯನ್ನು ದಂಪತಿ ಸೇರಿ ಹತ್ಯೆ ಮಾಡಿ ಇಡೀ ದಿನ ಮೃತದೇಹವನ್ನು ಮನೆಯಲ್ಲಿ ಇರಿಸಿಕೊಂಡು ರಾತ್ರಿ ಯಾದ ಬಳಿಕ ಕತ್ತರಿಸಿ ಗೋಣಿಯಲ್ಲಿ ತುಂಬಿಸಿ 3 ಕಡೆ ಎಸೆದು ಬಂದಿದ್ದರು.

ಸ್ಯಾಮ್ಸನ್‌ ಬಳಿ ದ್ವಿಚಕ್ರ ವಾಹನ ವಷ್ಟೇ ಇದ್ದು, ಅದರಲ್ಲಿ ಇಡೀ ಮೃತ ದೇಹವನ್ನು ಸಾಗಿಸಲು ಸಾಧ್ಯವಾಗದ ಕಾರಣ ಕಂಡುಕೊಂಡ ಉಪಾಯವೇ ದೇಹವನ್ನು ಕತ್ತರಿಸಿ ಪ್ರತ್ಯೇಕಿಸುವುದು. ಕತ್ತಿಯಿಂದ ಶ್ರೀಮತಿಯ ರುಂಡ – ಮುಂಡ, ಕೈಕಾಲುಗಳನ್ನು ಪ್ರತ್ಯೇಕಿಸಿ ಗೋಣಿಯಲ್ಲಿ ತುಂಬಿಸಿ ಕೊಂಡೊಯ್ದು ಎಸೆದು ಸಾಕ್ಷ é ನಾಶ ಮಾಡಲು ಯತ್ನಿಸಿದ್ದರು.

ವಿಚಾರಣೆ ಹಂತದಲ್ಲಿ
ಈ ಪ್ರಕರಣ ಸದ್ಯ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದ್ದು ವಾದ-ಪ್ರತಿವಾದ ನಡೆಯಬೇಕಿದೆ. ಬಳಿಕ ಅಂತಿಮ ತೀರ್ಪು ಬರುವ ನಿರೀಕ್ಷೆ ಇದೆ.

 ವೇಣುವಿನೋದ್‌ ಕೆ.ಎಸ್‌.

 

Advertisement

Udayavani is now on Telegram. Click here to join our channel and stay updated with the latest news.

Next