ಮಂಗಳೂರು: ಪುತ್ರಿಯ ಹೆರಿಗೆ ಪ್ರಯುಕ್ತ ಆರೈಕೆಗೆಂದು ಆಸ್ಪತ್ರೆಗೆ ಬಂದಿದ್ದ ಮಹಿಳೆ, ಕಾರ್ಕಳದ ಇಂದಿರಾ (45) ಅವರು ಕಾಣೆಯಾದ ಘಟನೆ ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸಂಭವಿಸಿದೆ.
ಇವರ ಪುತ್ರಿ ಸುಪ್ರಿಯಾ ಅವರ ಹೆರಿಗೆಗೆ ಕಾರ್ಕಳದ ವೈದ್ಯರು ದಿನಾಂಕ ಸೂಚಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ತಾಯಿ ಇಂದಿರಾ ಮತ್ತು ಅಳಿಯ ಕಾರ್ತಿಕ್ ಅವರು ಮೇ 4ರಂದು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಿದ್ದರು. ಅತ್ತೆ ಇಂದಿರಾರನ್ನು ಆಸ್ಪತ್ರೆಯಲ್ಲಿ ನಿಲ್ಲಿಸಿ ಕಾರ್ತಿಕ್ ಅದೇ ದಿನ ಊರಿಗೆ ವಾಪಸಾಗಿದ್ದರು. ಮೇ 6ರಂದು ಸಂಜೆ ಇಂದಿರಾ ಅವರು ಆಸ್ಪತ್ರೆಯಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದಾಗ ಆಸ್ಪತ್ರೆಯ ಸಿಬಂದಿ ಬಂದು ಆಕೆಯನ್ನು ವಾರ್ಡ್‌ನಿಂದ ಹೊರಗೆ ನಿಲ್ಲುವಂತೆ ಸೂಚಿಸಿದ್ದರು.
ಮೇ 7ರಂದು ಬೆಳಗ್ಗೆ ಸುಪ್ರಿಯಾರಿಗೆ ಹೆರಿಗೆ ಆಗಿದ್ದು, ಮಗುವನ್ನು ನೋಡಲು ಬನ್ನಿ ಎಂದು ಹೊರಗಿದ್ದ ತಾಯಿಯನ್ನು ಕರೆದಿದ್ದರು. ಆದರೆ ಮಗುವನ್ನು ನೋಡಲು ಆಕೆ ಹೋಗಿರಲಿಲ್ಲ. 10 ಗಂಟೆ ವೇಳೆಗೆ ಕಾರ್ತಿಕ್ ಬಂದಿದ್ದು, ಅವರು ಅತ್ತೆಯನ್ನು ಆಸ್ಪತ್ರೆ ಇಡೀ ಹುಡುಕಾಡಿದ್ದು, ಎಲ್ಲೂ ಪತ್ತೆಯಾಗಿಲ್ಲ. ಈ ಬಗ್ಗೆ ಆಕೆಯ ಪತಿ ವಸಂತ ಮುಗೇರ ಅವರು ಬಂದರು ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ.
ಇಂದಿರಾ 5 ಅಡಿ 1 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಕಪ್ಪು ಬಿಳಿ ಮಿಶ್ರಿತ ತಲೆಗೂದಲು, ಕಂದು ಹಾಗೂ ಕಪ್ಪು ಚುಕ್ಕೆಗಳಿರುವ ನೈಟಿ ಧರಿಸಿದ್ದಾರೆ.
ಪತ್ತೆಯಾದಲ್ಲಿ ಬಂದರು ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.