ಬೆಳ್ತಂಗಡಿ: ಉಜಿರೆಯಲ್ಲಿ ಟೈಲರಿಂಗ್ ಅಂಗಡಿಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಸಿಸಿ ಕೆಮರಾ ದೃಶ್ಯಗಳು ಎಲ್ಲೆಡೆ ಹರಿದಾಡಲಾರಂಭಿಸಿದ ಬೆನ್ನಲ್ಲೇ ಹಲ್ಲೆ ನಡೆಸಿದ ವ್ಯಕ್ತಿ ನವೀನ್ ಕನ್ಯಾಡಿ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಲ್ಲೆ ನಡೆಸಿದ್ದ ನವೀನ್ ಕನ್ಯಾಡಿ ಮತ್ತು ಟೈಲರಿಂಗ್ ಅಂಗಡಿ ನಡೆಸುವ ಮಹಿಳೆಯ ನಡುವೆ ಕಳೆದ ಹಲವು ವರ್ಷಗಳಿಂದ ಪರಿಚಯವಿತ್ತು. ಇವರ ನಡುವೆ ಹಣಕಾಸಿನ ವ್ಯವಹಾರವೂ ಇತ್ತು ಎನ್ನಲಾಗಿದೆ. ಇದರ ಮುಂದುವರಿದ ಭಾಗವಾಗಿ ಈತ ಅಂಗಡಿಗೆ ನುಗ್ಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಎರಡು ದಿನಗಳ ಹಿಂದೆ ಹಲ್ಲೆ ಪ್ರಕರಣ ನಡೆದಿದ್ದರೂ, ಯುವತಿ ಯಾವುದೇ ದೂರನ್ನು ದಾಖಲಿಸಿರಲಿಲ್ಲ. ಇದಾದ ಬಳಿಕ ಹಲ್ಲೆ ಯ ದೃಶ್ಯಗಳು ಬಹಿರಂಗಗೊಂಡಿತ್ತು. ಇದೀಗ ಮಹಿಳೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು, ತನ್ನಿಂದ ಏಳು ಲಕ್ಷ ರೂ. ಹಣವನ್ನು ಪಡೆದು ನವೀನ್ ವಂಚಿಸಿದ್ದಾನೆ. ಹಣ ಕೇಳಿದ್ದಕ್ಕೆ ಹಲ್ಲೆ ನಡೆಸಿದ್ದಾನೆ ಎಂದು ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ನವೀನ್ ಕನ್ಯಾಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.