Advertisement

Share Investment: ಷೇರು ಹೂಡಿಕೆ ಲಾಭದ ಆಸೆಗೆ 52.30 ಲಕ್ಷ ಕಳೆದುಕೊಂಡ ಮಹಿಳೆ  

11:39 AM Jan 22, 2024 | Team Udayavani |

ಬೆಂಗಳೂರು: ಷೇರಿನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಸೈಬರ್‌ ಕಳ್ಳರು 52.30 ಲಕ್ಷ ರೂ. ವಂಚಿಸಿದ್ದಾರೆ.

Advertisement

ಕೆಂಗೇರಿಯ ನಿವಾಸಿ ಲೀನಾ (41) ವಂಚನೆಗೊಳಗಾದವರು. ‌

ಲೀನಾ ಅವರು ವಾಟ್ಸ್ ಆ್ಯಪ್‌ಗೆ ಇತ್ತೀಚೆಗೆ ಅಪರಿಚಿತ ನಂಬರ್‌ನಿಂದ ಸಂದೇಶವೊಂದು ಬಂದಿತ್ತು. ಆ ಸಂದೇಶದಲ್ಲಿ ಷೇರು ಮಾರುಕಟ್ಟೆಯ ತರಬೇತಿ ಬಗ್ಗೆ ಮಾಹಿತಿ ಇತ್ತು. ಈ ಬಗ್ಗೆ ವಿಚಾರಿಸಿ ಷೇರು ತರಬೇತಿ ಪಡೆದುಕೊಳ್ಳುವುದಾಗಿ ಲೀನಾ ಒಪ್ಪಿದ ಬಳಿಕ ಅವರಿಗೆ 1 ತಿಂಗಳ ಆನ್‌ಲೈನ್‌ ತರಬೇತಿ ಕೊಡಲಾಗಿತ್ತು. ನಂತರ ಇನ್ನೊಂದು ಗ್ರೂಪ್‌ಗೆ ಸೇರಿಸಿ ಅಲ್ಲಿರುವ ಲಿಂಕ್‌ ಕ್ಲಿಕ್‌ ಮಾಡುವಂತೆ ಸೂಚಿಸಿ ಅದರಲ್ಲಿ ಬರುವ ಬ್ಯಾಂಕ್‌ ಖಾತೆಗೆ 50 ಸಾವಿರ ರೂ. ಜಮೆ ಮಾಡುವಂತೆ ಸೂಚಿಸಿದ್ದರು. ಅದರಂತೆ ಲೀನಾ 50 ಸಾವಿರ ರೂ. ವರ್ಗಾವಣೆ ಮಾಡುತ್ತಿದ್ದಂತೆ ಲೀನಾ ಅವರ ವ್ಯಾಲೆಟ್‌ನಲ್ಲಿ 80 ಸಾವಿರ ರೂ. ಲಾಭದ ಹಣ ತೋರಿಸುತ್ತಿತ್ತು. ಇತ್ತ ಲೀನಾಗೆ ಕರೆ ಮಾಡಿದ ಅಪರಿಚಿತರು ಕಂಪನಿಯವರು 1 ಲಕ್ಷ ಷೇರುಗಳನ್ನು ನಿಮಗೆ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ನೀವು ದುಡ್ಡು ಪಾವತಿಸಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಕಂಪನಿ ಕೇಸ್‌ ದಾಖಲಿಸಲಿದೆ ಎಂದು ಬೆದರಿಸಿದ್ದರು.

ಕಂಪನಿಯವರು 1 ಲಕ್ಷ ರೂ. ಷೇರು ಕೊಡಬಹುದು ಎಂದು ನಂಬಿದ ಲೀನಾ ಹಂತವಾಗಿ ಅಪರಿಚಿತರ ಬ್ಯಾಂಕ್‌ ಖಾತೆಗೆ 52.30 ಲಕ್ಷ ರೂ. ವರ್ಗಾವಣೆ ಮಾಡಿದ್ದರು. ಆದರೆ, ಇದಾದ ಬಳಿಕ ಲೀನಾ ಅವರಿಗೆ ಅಪರಿಚಿತರು ಯಾವುದೇ ಷೇರನ್ನು ನೀಡದೇ, 52.30 ಲಕ್ಷ ರೂ. ದುಡ್ಡನ್ನು ಹಿಂತಿರುಗಿಸಿರಲಿಲ್ಲ. 52.30 ಲಕ್ಷ ರೂ. ಹಿಂತಿರುಗಿಸಬೇಕಾದರೆ ಇನ್ನಷ್ಟು ದುಡ್ಡು ನೀಡಬೇಕೆಂದು ಅಪರಿಚಿತರು ಸೂಚಿಸಿದ್ದರು. ಅನುಮಾನ ಬಂದು ಲೀನಾ ಪರಿಶೀಲಿಸಿದಾಗ ಇದು ಸೈಬರ್‌ ಕಳ್ಳರ ಕೈಚಳಕ ಎಂಬುದು ಗೊತ್ತಾಗಿದೆ. ಲೀನಾ ಪಶ್ಚಿಮ ವಿಭಾಗದ ಸಿಇಎನ್‌ ಠಾಣೆಗೆ ದೂರು ನೀಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next