ನವದೆಹಲಿ: ವಿವಾಹಿತ ಮಹಿಳೆಗೆ ತಾಯಿಯ ಮನೆಯಲ್ಲಿ ಮತ್ತು ಅತ್ತೆಯ ಮನೆಯಲ್ಲಿ (ಪತಿಯ ಮನೆ) ವಾಸಿಸುವ ಹಕ್ಕು ಇದೆ. ಆಕೆ ಇರುವುದು ಇಷ್ಟವಿಲ್ಲ ಎಂಬ ಕಾರಣಕ್ಕಾಗಿ ಹೊರಗಟ್ಟಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾ.ಅಜಯ ರಸ್ತೋಗಿ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರನ್ನೊಳಗೊಂಡ ರಜಾಕಾಲದ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದೆ. ಆದರೆ, ಈ ವಿಚಾರ ಮಹಿಳೆಯ ಪರಿಪೂರ್ಣ ಹಕ್ಕು ಅಲ್ಲ ಎಂದೂ ನ್ಯಾಯಪೀಠ ಹೇಳಿದೆ.
“ವಿವಾಹಿತ ಮಹಿಳೆ ಇದ್ದರೆ ಆಗದು ಎಂಬ ಕಾರಣಕ್ಕೆ ಆಕೆಯನ್ನು ತಾಯಿಯ ಮನೆಯಿಂದ ಮತ್ತು ಪತಿಯ ಮನೆಯಿಂದ ಹೊರಗೆ ಕಳುಹಿಸುವ ನಿಲುವನ್ನು ನ್ಯಾಯಪೀಠ ಒಪ್ಪುವುದಿಲ್ಲ. ಮದುವೆಗೆ ಸಂಬಂಧಿಸಿದಂತೆ ಯಾವುದೋ ಒಂದು ಸಣ್ಣ ಕಾರಣಕ್ಕೆ ಇಂಥ ಘಟನೆಗಳು ನಡೆದರೆ ಕುಟುಂಬ ವ್ಯವಸ್ಥೆಯ ಮೇಲೆಯೇ ಅದು ಪ್ರತಿಕೂಲ ಪರಿಣಾಮ ಬೀರುತ್ತದೆ. ಆದರೆ, ನ್ಯಾಯಪೀಠ ವ್ಯಕ್ತಪಡಿಸಿದ ಅಭಿಪ್ರಾಯದಿಂದಾಗಿ ಮಹಿಳೆಗೆ ಮನೆಯಲ್ಲಿ ಇರಲು ಸಂಪೂರ್ಣ ಹಕ್ಕಿನ ಅವಕಾಶ ಕೊಟ್ಟಂತೆ ಆಗುವುದಿಲ್ಲ. ಒಂದು ವೇಳೆ ಮಹಿಳೆ,
ಮನೆಯಲ್ಲಿನ ಹಿರಿಯರ ಜತೆಗೆ ಅನುಚಿತವಾಗಿ ವರ್ತಿಸಿದಲ್ಲಿ ಆಕೆಯ ವಿರುದ್ಧ ಕೋರ್ಟ್ ಕಠಿಣ ಎಚ್ಚರಿಕೆಯನ್ನು ನೀಡಲು ಅವಕಾಶ ಇರುತ್ತದೆ’ ಎಂದು ನ್ಯಾಯಪೀಠ ಹೇಳಿದೆ.
ಮಹಾರಾಷ್ಟ್ರದ ಮಹಿಳೆ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಹಾಲಿ ಪ್ರಕರಣದಲ್ಲಿ ಮಹಿಳೆ ಮತ್ತು ಆಕೆಯ ಪತಿಯನ್ನು ಮನೆ ಬಿಟ್ಟು ತೆರಳುವಂತೆ ಅತ್ತೆ ಮತ್ತು ಮಾವ ಒತ್ತಾಯಿಸಿದ್ದರು. ಜತೆಗೆ ಬಾಂಬೆ ಹೈಕೋರ್ಟ್‌ನಲ್ಲಿ ದಾವೆ ಹೂಡಿ, ಹಿರಿಯ ನಾಗರಿಕರ ರಕ್ಷಣೆಯ ಕಾಯ್ದೆಯ ಅನ್ವಯ ಮಹಿಳೆಯ ಪತಿ ಪ್ರತಿ ತಿಂಗಳಿಗೆ 25 ಸಾವಿರ ರೂ. ಪಾಲನಾ ವೆಚ್ಚ ನೀಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಪುರಸ್ಕರಿಸಿ ಹೈಕೋರ್ಟ್ ಆದೇಶ ನೀಡಿತ್ತು.