ನವದೆಹಲಿ: ಭಾರತೀಯ ನೌಕಾಪಡೆ ಮೊದಲ ಬಾರಿಗೆ ನೌಕಾಸೇನೆಯ ಹಡಗೊಂದಕ್ಕೆ ಮಹಿಳಾ ಕಮಾಂಡಿಂಗ್ ಆಫೀಸರ್ ಅವರನ್ನು ನೇಮಿಸಿದೆ.
ಎಲ್ಲ ಜವಾಬ್ದಾರಿಗಳು, ಶ್ರೇಣಿಗಳಲ್ಲೂ ಮಹಿಳೆಯರಿಗೆ ಸಮಾನ ಆದ್ಯತೆ ಎಂಬ ನೌಕಾಪಡೆಯ ತಣ್ತೀದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಸ್ತುತ ನೌಕಾಪಡೆಯಲ್ಲಿ ಮಹಿಳಾ ಅಗ್ನಿವೀರರ ಸಂಖ್ಯೆ 1000 ದಾಟಿದೆ. ಈ ಸಂಖ್ಯೆ ನಮ್ಮ ಉದ್ದೇಶವನ್ನು ಸ್ಪಷ್ಟವಾಗಿಸುತ್ತದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್ ಹೇಳಿದ್ದಾರೆ.
ನಮ್ಮ ಹಡಗುಗಳು, ಸಬ್‌ಮರಿನ್‌ಗಳು, ಯದ್ಧವಿಮಾನಗಳು ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ ಸ್ಥಳಗಳಲ್ಲಿ ಉತ್ಸಾಹದಿಂದ ಕಾರ್ಯಾಚರಣೆ ನಡೆಸುತ್ತಿವೆ. ಮುಖ್ಯವಾಗಿ ಚೀನಾದ ಹಸ್ತಕ್ಷೇಪ ಹೆಚ್ಚಾಗಿರುವ ಹಿಂದೂ ಮಹಾಸಾಗರ ಮತ್ತು ಅದರಾಚೆಗೆ ನಮ್ಮ ತುಕಡಿಗಳನ್ನು ನಿಯೋಜಿಸಲಾಗಿದೆ. ದೇಶವನ್ನು ರಕ್ಷಿಸುವುದು, ರಾಷ್ಟ್ರೀಯ ಹಿತವನ್ನು ಕಾಯುವುದು ನಮ್ಮ ಗುರಿ ಎಂದಿದ್ದಾರೆ.
ತನಿಖೆಗೆ ಆದೇಶ: ಇತ್ತೀಚೆಗಷ್ಟೇ ಮುಂಬೈನಲ್ಲಿ ತರಬೇತಿ ಪಡೆಯುತ್ತಿದ್ದ ಮಹಿಳಾ ಅಗ್ನಿವೀರಳ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಲು ಅಡ್ಮಿರಲ್ ಹರಿಕುಮಾರ್ ಆದೇಶಿಸಿದ್ದಾರೆ. ಮುಂಬೈನ ಐಎನ್‌ಎಸ್ ಹಮ್ಲಾ ನೌಕಾಕೇಂದ್ರದಲ್ಲಿ 20 ವರ್ಷದ ಕೇರಳ ಮಹಿಳೆಯೊಬ್ಬರು ತರಬೇತಿ ಪಡೆಯುತ್ತಿದ್ದರು.