ಒಂದು ಭಾನುವಾರ ಸಂಜೆಗತ್ತಲಿನಲ್ಲಿ ಜೋರಾಗಿ ಮಳೆ ಸುರಿಯುತ್ತಿತ್ತು. ಅಂಗಳದಲ್ಲಿ ಆಡವಾಡಲು ಆಗದೆ ಚಡಪಡಿಸುತ್ತಿದ್ದ ಭೂಮಿಗೆ ಚಿತ್ರದ ಪುಸ್ತಕ ಕಣ್ಣಿಗೆ ಬಿತ್ತು. ಅದನ್ನು ಎತ್ತಿಕೊಳ್ಳಲು ಹೋದಾಗ ಮನೆಯೇ ನಡುಗಿ ಅವಳು “ಅಮ್ಮಾ…’ ಎಂದು ಚೀರಿದಳು. ನೋಡ ನೋಡುತ್ತಿದ್ದಂತೆಯೇ ಪುಸ್ತಕದೊಳಗಿಂದ ತಿಮಿಂಗಿಲವೊಂದು ಹೊರಬಂದಿತು!
ಮೂರನೇ ತರಗತಿಯಲ್ಲಿ ಓದುತ್ತಿರುವ ಭೂಮಿಯ ತಲೆಯ ತುಂಬಾ ಸಾವಿರ ಪ್ರಶ್ನೆಗಳು! ಅವಳ ಪ್ರಶ್ನೆಗಳಿಗೆ ಎಷ್ಟೋ ಬಾರಿ ಉತ್ತರಗಳೇ ಇರುತ್ತಿರಲಿಲ್ಲ. “ನಿಮ್ಮ ಹೆಸರಿನ ಅರ್ಥವೇನು?’ ಎಂಬ ಸರಳ ಪ್ರಶ್ನೆಯಿಂದ ಹಿಡಿದು “ಬೆಕ್ಕು ಯಾಕೆ ನಮ್ಮ ಹಾಗೆ ಮಾತನಾಡುವುದಿಲ್ಲ?’ “ಕ್ರೇಯಾನ್ ಬಣ್ಣಗಳಿಗೆ ಹೊಸದಾಗಿ ಹೆಸರಿಟ್ಟರೆ ಹಸಿರು ಬಣ್ಣವನ್ನು ಏನೆಂದು ಕರೆಯುತ್ತೀರಿ?’ “ಅಂಧರು ಕಾಣುವ ಕನಸಿನಲ್ಲಿ ನಾವೆಲ್ಲ ಹೇಗೆ ತೋರುತ್ತೇವೆ?’… ಹೀಗೆ, ಅವಳ ಪ್ರಶ್ನೆಗಳಿಗೆ ಕೊನೆಯೇ ಇರುತ್ತಿರಲಿಲ್ಲ.
ಮನೆಯಲ್ಲಿ ಅವಳ ಅಪ್ಪ, ಅಮ್ಮ, ಅಣ್ಣ ಮತ್ತು ಶಾಲೆಯಲ್ಲಿ ಟೀಚರು ಅವಳ ಪ್ರಶ್ನೆಗಳಿಗೆ ಉತ್ತರಿಸಲು ಸದಾ ಕೈಯಲ್ಲಿ ಎನ್‌ಸೈಕ್ಲೋಪೀಡಿಯಾ ಹಿಡಿದು ಓಡಾಡಬೇಕಾದ ಪರಿಸ್ಥಿತಿ ಇತ್ತು. ಇಂತಹ ಚೂಟಿ ಹುಡುಗಿ ಭೂಮಿಗೆ ತನ್ನ ಮನೆಯವರ ಮೇಲಿದ್ದಷ್ಟೇ ಪ್ರೀತಿ, ಪುಸ್ತಕಗಳ ಮೇಲೆ. ಒಂದು ಭಾನುವಾರ ಜೋರಾಗಿ ಮಳೆ ಸುರಿಯುತ್ತಿತ್ತು. ಆಟವಾಡಲು ಸಾಧ್ಯವಾಗದೆ ಭೂಮಿ ಚಡಪಡಿಸಿದಳು. ಸೋಫಾ ಮೇಲೆ ಕೂತವಳಿಗೆ ನಿದ್ದೆಯ ಜೋಂಪು ಹತ್ತಿತು. ನಿದ್ದೆಯಿಂದ ಕಣ್ಣು ಬಿಟ್ಟಾಗ ಮನೆಯಲ್ಲಿ ಯಾರೂ ಇರಲಿಲ್ಲ. ಮಳೆ ಸುರಿಯುತ್ತಲೇ ಇತ್ತು. ಹೊರಗಡೆ ಕತ್ತಲು ಕವಿಯುತ್ತಿತ್ತು. ಈಗೇನು ಮಾಡುವುದು ಎಂದು ಯೋಚಿಸುವಷ್ಟರಲ್ಲಿ ಅವಳು ಚಿತ್ರ ಬಿಡಿಸುತ್ತಿದ್ದ ಪುಸ್ತಕ ಕಣ್ಣಿಗೆ ಬಿತ್ತು. ಅದನ್ನು ಎತ್ತಿಕೊಳ್ಳಲು ಹೋಗುವಷ್ಟರಲ್ಲಿ ಮನೆಯೇ ನಡುಗಿದಂತಾಯಿತು. “ಅಮ್ಮಾ…’ ಎಂದು ಚೀರಿದಳು ಭೂಮಿ. ನೋಡ ನೋಡುತ್ತಿದ್ದಂತೆಯೇ ಪುಸ್ತಕದೊಳಗಿಂದ ತಿಮಿಂಗಿಲವೊಂದು ಹೊರಬಂದಿತು!
ಸಮುದ್ರದಡಿ ಇರಬೇಕಾದ ತಿಮಿಂಗಿಲ ಗಾಳಿಯಲ್ಲಿ ತೇಲುತ್ತಿರುವುದು ಕಂಡು ಅವಳಿಗೆ ಅಚ್ಚರಿಯೂ, ಹೆದರಿಕೆಯೂ ಆಯಿತು. ಅದು ಮನೆ ತುಂಬಾ ಹರಿದಾಡಿತು. ಏನು ಮಾಡುವುದೆಂದು ತೋಚದೆ ಧೈರ್ಯ ಮಾಡಿ “ಸಮುದ್ರದಲ್ಲಿರುವುದು ಬಿಟ್ಟು ಇಲ್ಲೇನು ಮಾಡುತ್ತಿದ್ದಿ? ಎಂದು ಕೇಳಿಯೇ ಬಿಟ್ಟಳು. ಅದು ತನ್ನ ಕಣ್ಣು ಮಿಟುಕಿಸಿ, ಈಜುರೆಕ್ಕೆಯನ್ನು ಬಡಿಯುತ್ತಾ ಶಬ್ದ ಮಾಡಿತು. ನಂತರ ಅವಳ ಬಳಿ ತೆವಳುತ್ತ ಬಂದು ಹೇಳಿತು, “ನನ್ನ ಮಕ್ಕಳು ಇದ್ದಕ್ಕಿದ್ದ ಹಾಗೆ ಚಂದಿರ ಬೇಕು ಎಂದು ಹಠ ಹಿಡಿದಿವೆ. ಆಯ್ತು ತಂದು ಕೊಡುತ್ತೇನೆ ಎಂದು ನಾನೂ ಮಾತು ಕೊಟ್ಟು ಬಂದಿದ್ದೇನೆ. ಅವನನ್ನು ಕರೆದೊಯ್ಯಲು ಸಹಾಯ ಮಾಡುತ್ತೀಯಾ?’.
ಭೂಮಿ ಕುಳಿತು ಯೋಚಿಸಿದಳು- “ಹೇಗೂ ಇಂದು ಭಾನುವಾರ. ಮಳೆ ಹೇಗೂ ನಿಂತ ಹಾಗಿದೆ. ಅಲ್ಲದೆ, ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಸಂಜೆ ಕಳೆದು ರಾತ್ರಿ ಆಗಲಿದೆ. ಚಂದಿರನನ್ನು ತಿಮಿಂಗಿಲಕ್ಕೆ ತೋರಿಸುತ್ತೇನೆ. ಅದು ಹೇಗಾದರೂ ಮಾಡಿ ಅವನನ್ನು ಪುಸಲಾಯಿಸಿ ಮನೆಗೆ ಕರೆದುಕೊಂಡು ಹೋಗಲಿ, ಪಾಪ’ ಅಂದುಕೊಂಡಳು. “ಸಂಜೆಯಾದ ಮೇಲೆ ಚಂದಿರ ಬರುತ್ತಾನೆ. ನಮ್ಮ ಮಹಡಿಯಲ್ಲಿ ನಿಂತರೆ ಕಾಣುತ್ತಾನೆ. ಅವಾಗ ಹೋಗೋಣ’ ಎಂದಳು ಭೂಮಿ. ತಿಮಿಂಗಿಲಕ್ಕೆ ಬಹಳ ಖುಷಿಯಾಗಿ ಆಯ್ತು ಎಂದು ತಲೆಯಲ್ಲಾಡಿಸಿತು.
ಇಬ್ಬರೂ ಕುಳಿತು ರಾತ್ರಿಯಾಗುವುದನ್ನೇ ಕಾದರು. ತಿಮಿಂಗಿಲ ತನ್ನ ಮಕ್ಕಳಿಗೆ ಚಂದಿರನನ್ನು ಕಂಡರೆ ಯಾಕೆ ತುಂಬಾ ಪ್ರೀತಿ ಎಂದು ವಿವರಿಸಿತು. ನಿತ್ಯವೂ ಊಟದ ಸಂದರ್ಭದಲ್ಲಿ ಚಂದಿರನ ಕತೆಯನ್ನು ತಾನು ಮಕ್ಕಳಿಗೆ ಹೇಳುತ್ತೇನೆ ಎಂದು ತಿಮಿಂಗಿಲ ಹೇಳಿದಾಗ, ಭೂಮಿಯಿ, “ಅರೆ! ನನ್ನ ಅಮ್ಮನೂ ನನಗೆ ಚಂದಮಾಮನ ಕತೆ ಹೇಳುತ್ತಾಳೆ’ ಎಂದು ಆಶ್ಚರ್ಯ ವ್ಯಕ್ತಪಡಿಸಿದಳು.
ಬೆಳದಿಂಗಳು ಮನೆಯಂಗಳದಲ್ಲಿ ಚೆಲ್ಲುತ್ತಿದ್ದಂತೆಯೇ ಭೂಮಿ ತಿಮಿಂಗಿಲವನ್ನು ಕರೆದುಕೊಂಡು ಮಹಡಿ ಮೇಲೆ ಬಂದಳು. ಆಗಸದಲ್ಲಿ ಪೂರ್ಣ ಚಂದಿರ ಹೊಳೆಯುತ್ತಿದ್ದ, ನಕ್ಷತ್ರಗಳು ಮಿನುಗುತ್ತಿದ್ದವು. ಭೂಮಿ “ಅದೋ ನೋಡು ಚಂದಿರ’ ಎಂದು ಕೈ ತೋರಿದಳು. ತಿಮಿಂಗಿಲ “ಭೂಮಿ, ನೀನೂ ಬಾ… ಇಬ್ಬರೂ ಜೊತೆಯಾಗಿ ಚಂದಿರನ ಬಳಿಗೆ ಹೋಗೋಣ’ ಎಂದಿತು. ಭೂಮಿ “ಹೂಂ’ ಎಂದು ತಿಮಿಂಗಿಲದ ಬೆನ್ನೇರಿದಳು. ತಿಮಿಂಗಿಲ, ನಿಧಾನವಾಗಿ ಗಾಳಿಯಲ್ಲಿ ಮೇಲೇರುತ್ತಾ ಚಂದಿರನತ್ತ ಸಾಗಿತು. ಚಂದಿರ ತುಂಬಾ ದೊಡ್ಡದಾಗಿ ಕಾಣುತ್ತಿದ್ದ. ಅಷ್ಟು ಹತ್ತಿರದಿಂದ ನೋಡುತ್ತೇನೆ ಎಂದು ಭೂಮಿ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಕೈಗೆ ಎಟುಕುವಷ್ಟು ಹತ್ತಿರದಲ್ಲಿದ್ದ ಚಂದ್ರ. ಭೂಮಿ ಚಂದಿರನನ್ನು ಮುಟ್ಟಲು ಕೈ ಮುಂದೆ ಮಾಡಿದಳು. ಇನ್ನೇನು ಅವಳ ಬೆರಳುಗಳಿಗೆ ಚಂದಿರ ಸಿಗಬೇಕು ಎನ್ನುವಷ್ಟರಲ್ಲಿ ಅಮ್ಮನ ದನಿ ಕೇಳಿತು. ಕಣ್ಣು ತಿಕ್ಕುತ್ತಾ ಸುತ್ತ ನೋಡಿದರೆ ಭೂಮಿ ಸೋಫಾದ ಮೇಲಿದ್ದಳು. ಅಡುಗೆ ಮನೆಯಿಂದ ಅಮ್ಮ “ದೋಸೆ ತಯಾರಾಗಿದೆ ಬಾ ತಿನ್ನು’ ಎಂದು ಕರೆಯುತ್ತಿದ್ದರು. ತಾನು ಇಷ್ಟು ಹೊತ್ತು ಕಂಡಿದ್ದು ಕನಸು ಎಂದು ಅವಳಿಗೆ ಅರಿವಾಗಿ ನಗು ಬಂದಿತು. “ಅಮ್ಮಾ! ನನಗೆ ಸಮುದ್ರದಲ್ಲಿರುವ ಜೀವಿಗಳ ಬಗ್ಗೆ ಇನ್ನಷ್ಟು ಕಲಿಯಬೇಕು!’ ಎನ್ನುತ್ತಾ ಭೂಮಿ ಅಡುಗೆ ಮನೆಗೆ ಓಡಿದಳು.
– ಸ್ನೇಹಜಯಾ ಕಾರಂತ