Advertisement

ಮೂರ್‍ನಾಲ್ಕು ತಿಂಗಳಲ್ಲಿ ಸುಸಜ್ಜಿತ ಆಸ್ಪತ್ರೆ ಜನಸೇವೆಗೆ ಲಭ್ಯ

06:09 AM Feb 25, 2019 | Team Udayavani |

ದಾವಣಗೆರೆ: ಹಳೇ ಭಾಗದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕೇಂದ್ರ ಸರ್ಕಾರದ ನ್ಯಾಷನಲ್‌ ಹೆಲ್ತ್‌ ಮಿಷನ್‌ನಡಿ ಬಿಡುಗಡೆಯಾದ ಸುಮಾರು 11 ಕೋಟಿ ರೂ. ವೆಚ್ಚದಲ್ಲಿ 120 ಹಾಸಿಗೆ ಸಾಮರ್ಥ್ಯದ ಮೇಲ್ದರ್ಜೆಗೇರಿಸುವ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಮುರ್‍ನಾಲ್ಕು ತಿಂಗಳಲ್ಲಿ
ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಹೇಳಿದರು.

Advertisement

ನಗರದ ಹಳೇಭಾಗದ ಚಾಮರಾಜಪೇಟೆಯ ಮಹಿಳಾ ಮತ್ತು ಮಕ್ಕಳ ಆರೋಗ್ಯ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿ ಸಂಸದರು, ನೂತನವಾಗಿ ನಿರ್ಮಾಣವಾಗುತ್ತಿರುವ ಕೊಠಡಿಗಳನ್ನು ವೀಕ್ಷಿಸಿ ನಂತರ ಮಾತನಾಡಿದರು.
 
ಕೇಂದ್ರದ ಆರೋಗ್ಯ ಇಲಾಖೆ ಸಚಿವ ಕೆ.ಪಿ. ನಡ್ಡಾ ಅವರು 11 ಕೋಟಿ ಬಿಡುಗಡೆ ಮಾಡಿದ್ದರು. ಈಗಾಗಲೇ ಆಪರೇಷನ್‌ ಥೇಟರ್‌, ಐಸಿಯು ವಾರ್ಡ್‌, ಸ್ಟಾಫ್‌ ವಾರ್ಡ್‌ ಮತ್ತು 10 ಸ್ಪೇಷಲ್‌ ವಾರ್ಡ್‌ ಸೇರಿದಂತೆ ಒಟ್ಟು 120 ಬೇಡ್‌ಗಳ ಸಾಮರ್ಥ್ಯವನ್ನು ಮುಂದಿನ ದಿನಗಳಲ್ಲಿ ಆಸ್ಪತ್ರೆ ಒಳಗೊಂಡು ಮೂರ್‍ನಾಲ್ಕು ತಿಂಗಳಲ್ಲಿ ಜನತೆಗೆ ಸೌಲಭ್ಯ ದೊರೆಯಲಿದೆ ಎಂದರು.

ದಾವಣಗೆರೆ ಹಳೇ ಭಾಗದ ಮಹಿಳಾ ಮತ್ತು ಮಕ್ಕಳ ಈ ಆಸ್ಪತ್ರೆಯು ಸುಮಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿತ್ತು. ಇದೀಗ ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಹಣದಲ್ಲಿ ನಿರ್ಮಿಸುತ್ತಿರುವ ನೂತನ ಕೊಠಡಿಗಳು ಸಾಕಷ್ಟು ಸುಸಜ್ಜಿತವಾಗಿರುವ ನಿಟ್ಟಿನಲ್ಲಿ ಎಲ್ಲಾ ರೀತಿ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಜಿಲ್ಲೆಯ ಎಲ್ಲಾ ಬಡ ಜನರಿಗೆ ಉತ್ತಮ ಸೌಲಭ್ಯ ಆಸ್ಪತ್ರೆಯಲ್ಲಿ ಸಿಗಲಿದೆ ಎಂದರು. 

ಜಿಲ್ಲಾಸ್ಪತ್ರೆಗೆ ಹಣ ಬಿಡುಗಡೆ: ನಗರದ ಚಿಗಟೇರಿ ಜಿಲ್ಲಾಸ್ಪತ್ರೆಗೆ 20.90 ಕೋಟಿ ರೂ. ಮಂಜೂರಾತಿ ಮಾಡಿಸಲಾಗಿದೆ. ಲೋಕಸಭಾ ಚುನಾವಣೆ ಪೂರ್ವದಲ್ಲಿಯೇ ಟೆಂಡರ್‌ ಕರೆದು ಕಾಮಗಾರಿ ಆರಂಭ ಮಾಡಲಾಗುವುದು ಎಂದು ಹೇಳಿದರು.

ಚಿಗಟೇರಿ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಹಳಷ್ಟು ಗರ್ಭಿಣಿಯರನ್ನು ನೆಲದ ಮೇಲೆಯೇ ಮಲಗಿಸಲಾಗುತ್ತಿತ್ತು. ಈ ಪರಿಸ್ಥಿತಿಯನ್ನು ಮನಗಂಡು ಕೇಂದ್ರದಿಂದ ಅನುದಾನ ತರಲಾಗಿದೆ. ಈ ಆಸ್ಪತ್ರೆಯಲ್ಲೂ ಕೂಡ ಮುಂದಿನ ಒಂದೂವರೆ ವರ್ಷದಲ್ಲಿ 100 ಬೇಡ್‌ಗಳ ಮೇಲ್ದರ್ಜೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರಲ್ಲದೇ, ಒಟ್ಟಾರೆ ಕೇಂದ್ರ ಸರಕಾರ ದಿಂದ ದಾವಣಗೆರೆ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ 31.90 ಕೋಟಿ ರೂ. ಮಂಜೂರು ಆಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಬಡ ಜನರಿಗೂ ಅನುಕೂಲ ಆಗಲಿದೆ ಎಂದರು.

Advertisement

ನೀರು ಪೂರೈಕೆಗೆ ಕ್ರಮ: ಹೆರಿಗೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ಕುಡಿಯಲು ಹಾಗೂ ಬಳಕೆ ನೀರು ವ್ಯವಸ್ಥೆ ಮಾಡಲಾಗುತ್ತಿದೆ. ಎಂದು ಹೇಳಿದರು.
 
ಸೌಲಭ್ಯ ಒದಗಿಸಲು ಬದ್ಧ: ಆಸ್ಪತ್ರೆಯಲ್ಲಿನ ನೂತನ ಕಟ್ಟಡಗಳ ಕೊಠಡಿ ನಿರ್ಮಾಣದ ಕೆಲಸ ಮುಗಿಯಲಿ. ಆ ನಂತರ ಆಸ್ಪತ್ರೆಗೆ ಅಗತ್ಯವಿರುವ ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳಿಗೆ ಎಷ್ಟೇ ಖರ್ಚಾದರೂ ಕೂಡ ಕೇಂದ್ರದಿಂದ ಹಣ ತಂದು ಸೌಲಭ್ಯ ಕೊಡಿಸುತ್ತೇನೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌, ಹೆರಿಗೆ ಆಸ್ಪತ್ರೆಯ ಅಧೀಕ್ಷಕ ಡಾ| ಬಿ.ಕೆ.ಪ್ರಕಾಶ್‌, ರಾಜನಹಳ್ಳಿ ಶಿವಕುಮಾರ್‌ ಇತರರು ಇದ್ದರು.

ಇದು ನನ್ನ  ಕೊನೆಯ ಚುನಾವಣೆ ಚನ್ನಗಿರಿ, ಹರಪನಹಳ್ಳಿ ಎಲ್ಲಾ ಕಡೆ ಹೋದಾಗಲೂ ಕೂಡ ನನಗೆ ಬಿಜೆಪಿ ಪಕ್ಷ ಚುನಾವಣೆಗೆ ಟಿಕೆಟ್‌ ನೀಡಿದರೆ ಇದೇ ಕೊನೆ ಚುನಾವಣೆ ಆಗಲಿದೆ. ಮುಂದೆ ಯಾವಾಗಲೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇನೆ. ಹೈಕಮಾಂಡ್‌ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧ. ಆಡಿದ ಮಾತಿನಂತೆ ನಡೆಯುತ್ತೇನೆ. ಆದರೆ, ಸಂಪೂರ್ಣವಾಗಿ ರಾಜಕಾರಣ ಬಿಡುವುದಿಲ್ಲ. ಪಕ್ಷದ ಒಳ್ಳೆಯ ಕಾರ್ಯಕರ್ತರು ಚುನಾವಣೆಗಳಿಗೆ ನಿಂತಾಗ ಅವರ ಪರ ಸಕ್ರಿಯವಾಗಿ ಕೆಲಸ ಮಾಡುತ್ತೇನೆ. ಚುನಾವಣೆಯಲ್ಲಿ ಗೆಲ್ಲಲು ಯಾವತ್ತು ಹಣ ಬೆಂಬಲ ನಡೆಯೋದಿಲ್ಲ. ಜನ ಬೆಂಬಲ ಮಾತ್ರ ನಡೆಯೋದು ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next