Advertisement

ಅಳುವ ಗಂಡಸನ್ನು ನಂಬಬಹುದು…

08:07 PM Dec 29, 2019 | mahesh |

ನಗುವಿನಷ್ಟೇ ಅಳು ಕೂಡ ಒಂದು ಮಾನವ ಸಹಜ ಪ್ರಕ್ರಿಯೆ. ಹಾಗೇ ನೋಡಿದರೆ ನಗುವಿಗಿಂತಲೂ ಪ್ರಬಲವಾದದ್ದು ಅಳು. ನಗುವುದು ಮನುಷ್ಯರಿಗೆ ಮಾತ್ರ ಗೊತ್ತು. ಆದರೆ ಎಲ್ಲ ಪ್ರಾಣಿ ಪಕ್ಷಿಗಳು ಅಳುತ್ತವೆ. ಅಳುವಿಗೆ ಈ ನಿಸರ್ಗ ಎಷ್ಟು ಮಹತ್ವ ಕೊಟ್ಟಿದೆ ಎನ್ನುವುದಕ್ಕೆ ಇದು ಸಾಕ್ಷಿ.

Advertisement

ಪುರುಷರು ಅಳಬಾರದು. ಇದು ನಮ್ಮ ಸಮಾಜದಲ್ಲಿ ಪರಂಪರಾಗತವಾಗಿ ಪ್ರಚಲಿತದಲ್ಲಿರುವ ನಂಬಿಕೆ. ಎಷ್ಟೇ ಕಷ್ಟಗಳು ಬರಲಿ, ಏನೇ ನೋವು ಆಗಲಿ ಗಂಡಸಾದವನು ಅಳುತ್ತಾ ಕೂರಬಾರದು. ಅಳುವುದೇನಿದ್ದರೂ ಮಹಿಳೆಯರ ಹಕ್ಕು. ಎಲ್ಲಿಯಾದರೂ ಪುರುಷ ಕಣ್ಣೀರು ಸುರಿಸಿದರೆ ಹೆಂಗಸರಂತೆ ಅಳುತ್ತಾನೆ ಎಂದು ಲೇವಡಿ ಮಾಡುತ್ತಾರೆ. ಗಂಡಸರ ಅಳುವಿನ ಬಗ್ಗೆ ಎಷ್ಟು ಕೀಳರಿಮೆ ಇದೆ ಎಂದರೆ ಅಳುವ ಗಂಡಸನ್ನು ನಂಬಬಾರದು ಎಂಬ ನಾಣ್ಣುಡಿಯೇ ಇದೆ.

ಹಾಗಾದರೆ ಗಂಡಸಿಗೆ ಅಳು ನಿಷಿದ್ಧವೇ? ಏನೇ ಕಷ್ಟ ಕೋಟಲೆಗಳು ಬಂದರೂ ಗಂಡು ಅಳಬಾರದೆ? ಹಾಗೇನಿಲ್ಲ. ಗಂಡಸರೂ ಅಳುತ್ತಾರೆ, ಅತ್ತು ಹಗುರಾಗುತ್ತಾರೆ. ಗಂಡಸರು ಅಳಲೇ ಬಾರದು ಎಂದಿದ್ದರೆ ಅವರಿಗೇಕೆ ಕಣ್ಣೀರ ಗ್ರಂಥಿಯನ್ನು ನಿಸರ್ಗ ಕೊಡುತ್ತಿತ್ತು. ಆದರೆ ನಮ್ಮ ಪುರುಷ ಪ್ರಧಾನ ಸಮಾಜ ಅಳುವನ್ನು ದೌರ್ಬಲ್ಯದ ಸಂಕೇತವಾಗಿಸಿದೆ. ಹೀಗಾಗಿ ಅಳುವವರನ್ನು ದುರ್ಬಲರು ಎಂದು ಭಾವಿಸಲಾಗುತ್ತದೆ. ಮಹಿಳೆ ದುರ್ಬಲಳಾಗಿರುವುದರಿಂದ ಅವಳು ಅಳುವುದರಲ್ಲಿ ತಪ್ಪಿಲ್ಲ. ಆದರೆ ಪುರುಷ ಸರ್ವಶಕ್ತ, ಅವನು ಅಳಬಾರದು ಎಂಬುದು ಈ ಸಮಾಜ ತನಗೆ ವಿಧಿಸಿಕೊಂಡ ನಿಯಮ. ಆದರೆ ವಿಜ್ಞಾನದ ಪ್ರಕಾರ ಗಂಡಸಿಗೂ ಹೆಂಗಸಿಗೂ ಅಳು ಸಮಾನ.

ಅಳುವಿಗೂ ಭಾವನೆಗೂ ನೇರವಾದ ಸಂಬಂಧವಿದೆ. ಮಹಿಳೆ ಹೆಚ್ಚು ಭಾವನಾತ್ಮಕವಾಗಿ ಚಿಂತಿಸುವ ಕಾರಣ ಅವಳಿಗೆ ಬೇಗನೆ ಅಳು ಬರುತ್ತದೆ. ಪುರುಷರು ಮಹಿಳೆಯರಷ್ಟು ಭಾವನಾ ಜೀವಿಗಳಲ್ಲ. ಹೀಗಾಗಿ ಅವರಿಗೆ ಕಣ್ಣೀರು ಬರುವುದು ಕಡಿಮೆ. ಅಲ್ಲದೆ ನೋವನ್ನು ತಡೆದುಕೊಳ್ಳುವ ಶಕ್ತಿ ಪುರುಷರಿಗೆ ಮಹಿಳೆಯರಿಗಿಂತ ಹೆಚ್ಚು ಇರುತ್ತದೆ.

ಅಳುವಿನ ಬಗ್ಗೆಯೇ ಇತ್ತೀಚೆಗೆ ಒಂದು ಅಧ್ಯಯನ ನಡೆಸಲಾಗಿತ್ತು. ಒಂದು ವರ್ಷದಲ್ಲಿ
ಪುರುಷರಿಗಿಂತ ಮಹಿಳೆಯರು ಅಳುವ ಪ್ರಮಾಣ ಐದು ಪಟ್ಟು ಹೆಚ್ಚು ಎಂಬ ಅಂಶ ಈ ಅಧ್ಯಯನದಿಂದ ತಿಳಿದು ಬಂದಿದೆ. ಪುರುಷರ ಅಳುವಿನ ಅವಧಿ ಕಡಿಮೆ. ಅಲ್ಲದೆ ಅವರು ಬಹುಬೇಗ ಸಹಜ ಸ್ಥಿತಿಗೆ ಬಂದು ಬಿಡುತ್ತಾರೆ. ಇದಕ್ಕೆ ವಿರುದ್ಧವಾಗಿ ಮಹಿಳೆಗೆ ಬಹುತೇಕ ಸಂದರ್ಭದಲ್ಲಿ ತಾನು ಏಕೆ ಅಳುತ್ತೇನೆ ಎಂದೇ ಗೊತ್ತಿರುವುದಿಲ್ಲ. ಚಿಕ್ಕಪುಟ್ಟ ಕಾರಣಗಳಿಗೂ ಕಣ್ಣೀರು ಸುರಿಸುವ ಮಹಿಳೆಯರಿದ್ದಾರೆ.

Advertisement

ಮನುಷ್ಯ ನಗುವೇ ಇಲ್ಲದ ಪರಿಸರದಲ್ಲಿ ಬೆಳೆದರೆ ಅವನು ನಗುವುದನ್ನು ಕಲಿತುಕೊಳ್ಳುವುದೇ ಇಲ್ಲ. ಆದರೆ ಅಳು ಅವನಿಗೆ ಸಹಜವಾಗಿ ಬಂದಿರುತ್ತದೆ. ನಗು ನಾವು ಸಾಮಾಜಿಕವಾಗಿ ಕಲಿತುಕೊಳ್ಳುವ ವಿಷಯ. ಅಳು ನಿಸರ್ಗದತ್ತವಾಗಿ ಬಂದಿರುತ್ತದೆ.

ನೋವನ್ನು ತೊಡೆಯುವ ಶಕ್ತಿ
ಕಣ್ಣೀರಿಗೆ ನೋವನ್ನು ತೊಡೆದು ಹಾಕುವ ಶಕ್ತಿಯದೆ. ಪುರುಷರಿರಲಿ, ಸ್ತ್ರೀಯರಿರಲಿ
ಇಬ್ಬರಿಗೂ ಅಳು ಸಮಾನ. ಆದರೆ ಸಾಮಾಜಿಕ ಕಟ್ಟುಪಾಡುಗಳಿಂದಾಗಿ ಪುರುಷ ಅಳುವನ್ನು ಕಟ್ಟಿ ಹಾಕಿರುತ್ತಾನೆ. ಹೀಗೆ ಕಣ್ಣೀರಿಗೆ ಕಟ್ಟೆ ಕಟ್ಟಿರುವುದರಿಂದಲೇ ಪುರುಷರು ಮಾನಸಿಕವಾಗಿ ಬಳಲುತ್ತಿರುತ್ತಾರೆ. ನಕ್ಕರೆ ಮನಸ್ಸು ಹಗುರವಾಗುತ್ತದೆ ಎನ್ನುವುದನ್ನು ಎಲ್ಲರೂ ಅನುಭವದಿಂದ ತಿಳಿದುಕೊಂಡಿದ್ದಾರೆ. ನಿರ್ಮಲವಾದ ನಗು, ಹೊಟ್ಟೆ ಹುಣ್ಣಾಗಿಸುವ ನಗು, ಮನದುಂಬಿದ ನಗು ನಮ್ಮನ್ನು ಉಲ್ಲಾಸಭರಿತರನ್ನಾಗಿ ಮಾಡುತ್ತದೆ. ಆದರೆ ಅಳುವಿಗೂ ಇಷ್ಟೇ ಶಕ್ತಿಯಿದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಏಕೆಂದರೆ ನಾವು ಅಳುವನ್ನು ತಡೆದಿರುತ್ತೇವೆ.

ಅಳು ಮತ್ತು ನಗು ಪರಸ್ಪರ ತದ್ವಿರುದ್ಧವಾದ ಸಂಗತಿಗಳು ಎನ್ನುವುದು ಸಾಮಾನ್ಯವಾದ ನಂಬಿಕೆ. ಆದರೆ ನಿಜವಾಗಿ ಇವೆರಡು ಪರಸ್ಪರ ಪೂರಕವಾಗಿರುವ ಸಂಗತಿಗಳು. ಅಳುವಾಗ ಮನಸ್ಸು
ಹಗುರವಾಗಲು…

ಕಣ್ಣೀರು ಬರುತ್ತದೆ, ನಗುವಾಗಲೂ ಕಣ್ಣೀರು ಬರುತ್ತದೆ. ಅರ್ಥಾತ್‌ ಅಳು ಮತ್ತು ನಗುವಿನ ಮೂಲ ಒಂದೇ ಎಂದಾಯ್ತಲ್ಲವೆ? ಎಷ್ಟು ಕಣ್ಣೀರು ಹರಿದು ಹೋಗುತ್ತದೋ ಅಷ್ಟು ಮನಸ್ಸು ಹಗುರವಾಗುತ್ತದೆ. ಹೀಗಾಗಿ ಮನಸ್ಸು ಹಗುರವಾಗಲು ನಗುವಿಗಿಂತಲೂ ಅಳುವೇ ಉತ್ತಮ. ಆದರೆ ಹೆಚ್ಚಿನವರಿಗೆ ಕಣ್ಣೀರಿನ ಮಹತ್ವದ ಅರಿವಿಲ್ಲ. ಹೀಗಾಗಿ ಅವರು ಅದನ್ನು ನಿರಾಳವಾಗಿ ಹರಿಯಬಿಡದೆ ಕಟ್ಟಿ ಹಾಕುತ್ತಾರೆ.

ನಗುವಿಗಿಂತ ಅಳು ಶಕ್ತಿಶಾಲಿ
ಓಶೋ ಗುರು ಹೇಳುವ ಪ್ರಕಾರ ಅಳುವಿಗೂ ಬೇಸರಕ್ಕೂ ಸಂಬಂಧವೇ ಇಲ್ಲ. ಆದರೆ ಹೆಚ್ಚಿನವರು ಹೀಗೆ ಹೇಳಿದರೆ ತಕರಾರು ತೆಗೆಯುತ್ತಾರೆ, ಮನುಷ್ಯರಿಗೆ ಬೇಸರವಾದಾಗ ಮಾತ್ರ ನಿಜವಾದ ಅಳು ಬರುತ್ತದೆ ಎನ್ನುವುದು ಅವರ ವಾದ. ಅಳು ನಗುವಿಗಿಂತ ಹೆಚ್ಚು ಆಳವಾದದ್ದು. ಹೀಗಾಗಿ ಅಳುವಿನ ಪರಿಣಾಮವೂ ಆಳವಾಗಿರುತ್ತದೆ. ಅಳು ಹೆಚ್ಚು ಆಳವಾದಷ್ಟು ಅದು ನಿಮ್ಮೊಳಗೆ ಮಾಡುವ ಪರಿವರ್ತನೆಯೂ ಗಾಢವಾಗಿರುತ್ತದೆ. ಒಮ್ಮೆ ಅತ್ತು ಮುಗಿದ ಬಳಿಕ ನೀವು ಹೊಸ ಮನುಷ್ಯನಾಗುತ್ತೀರಿ. ಅಳು ನಿಮ್ಮನ್ನು ಆವರಿಸಿದ್ದ ಪೊರೆಯನ್ನು ಕಳಚುತ್ತದೆ. ಅಳುವಿಗೆ ನಿಮ್ಮ ಅಸ್ತಿತ್ವವನ್ನೇ ಅಲುಗಾಡಿಸುವ ಶಕ್ತಿಯಿದೆ. ನಗುವಿಗಿಂತ ಅಳು ಹೆಚ್ಚು ಶಕ್ತಿಶಾಲಿ. ಹೀಗಾಗಿ ಅಳುವ ಗಂಡಸನ್ನು ನಂಬಬಹುದು…

-  ಉಮೇಶ್‌ ಬಿ. ಕೋಟ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next