ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಜಾಪ್ರಭುತ್ವದ ಬಲವರ್ಧನೆ, ಚುನಾವಣಾ ಸುಧಾರಣೆ ಮತ್ತು ನಿರ್ವಹಣೆ, ಸಾಮರ್ಥಯ ವೃದ್ಧಿ, ಹೊಸ ತಂತ್ರಜ್ಞಾನಗಳ ಅಳವಡಿಕೆ, ಅವಕಾಶಗಳು ಮತ್ತು ಸವಾಲುಗಳ ಪರಾಮರ್ಶೆ, ಜಾಗತಿಕ ಸಹಕಾರ ಹಾಗೂ ಸಮನ್ವಯಕ್ಕಾಗಿ ಕೆಲಸ ಮಾಡುತ್ತಿರುವ ವಿಶ್ವದ ಚುನಾವಣಾ ಸಂಸ್ಥೆಗಳ ಅತಿ ದೊಡ್ಡ ವೇದಿಕೆಯಾಗಿರುವ “ಜಾಗತಿಕ ಚುನಾವಣಾ ಸಂಸ್ಥೆಗಳ ಒಕ್ಕೂಟ’ ದ (ಎ-ವೆಬ್) ಮೂರು ದಿನಗಳ ಅಂತಾರಾಷ್ಟ್ರೀಯ ಸಮಾವೇಶಕ್ಕೆ ಉದ್ಯಾನ ನಗರಿ ಬೆಂಗಳೂರು ಸಾಕ್ಷಿಯಾಗಲಿದೆ.
ಭಾರತದ ಚುನಾವಣಾ ಆಯೋಗ ಆತಿಥ್ಯ ವಹಿಸಿಕೊಂಡಿರುವ ಈ ಜಾಗತಿಕ ಸಮಾವೇಶವು ಸೆ.2 ರಿಂದ 4ರವರೆಗೆ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆಯಲಿದೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಹಿರಿಯ ಉಪ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ ಸಮಾವೇಶದ ಬಗ್ಗೆ ಮಾಹಿತಿ ನೀಡಿದರು. ಎ-ವೆಬ್ ಸ್ಥಾಪನೆಯಲ್ಲಿ ಭಾರತ ಚುನಾವಣಾ ಆಯೋಗವು ನಿರ್ಣಾಯಕ ಪಾತ್ರ ವಹಿಸಿದೆ. 2013ರಿಂದ 2017ರವರೆಗೆ ಎರಡು ಅವಧಿಗೆ ಆಯೋಗವು ಕಾರ್ಯಕಾರಿ ಮಂಡಳಿ ಸದಸ್ಯವಾಗಿತ್ತು.
ಪ್ರಸಕ್ತ 2019-21ರ ಅವಧಿಗೆ ಭಾರತ ನಾಯಕತ್ವ ವಹಿಸಿಕೊಳ್ಳಲಿದೆ. ಸೆ.2ರಂದು ಕಾರ್ಯಕಾರಿ ಮಂಡಳಿ ಸಭೆ, ಸೆ.3ರಂದು 4ನೇ ಸಾಮಾನ್ಯ ಸಭೆ (ಜನರಲ್ ಅಸೆಂಬ್ಲಿ) ನಡೆಯಲಿದ್ದು, ಸೆ.4ರಂದು “ಚುನಾವಣೆಗಳಲ್ಲಿ ಸಾಮಾಜಿಕ ಮಾಧ್ಯಮಗಳು ಮತ್ತು ಮಾಹಿತಿ ತಂತ್ರಜ್ಞಾನದ ಕುರಿತ ಉಪಕ್ರಮಗಳು ಹಾಗೂ ಸವಾಲುಗಳು’ ವಿಷಯದಲ್ಲಿ ಅಂತಾರಾಷ್ಟ್ರೀಯ ಸಮಾವೇಶ ಜರುಗಲಿದೆ ಎಂದರು. ಮೂರು ದಿನಗಳ ಈ ಸಮಾವೇಶದಲ್ಲಿ 50ಕ್ಕೂ ಹೆಚ್ಚು ದೇಶಗಳ 120ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಸೆ.3ರಂದು ನಡೆಯಲಿರುವ ಜನರಲ್ ಅಸೆಂಬ್ಲಿಯ ಅಧ್ಯಕ್ಷತೆಯನ್ನು ಭಾರತ ಚುನಾವಣಾ ಆಯೋಗದ ಆಯುಕ್ತ ಸುನೀಲ್ ಅರೋರ ವಹಿಸಿಕೊಳ್ಳಲಿದ್ದಾರೆ. ಸೆ.4ರಂದು ನಡೆಯಲಿರುವ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಭೂತಾನ್, ಕೆಮರೂನ್, ಫೆಲೆಸೀನ್ ಸೇರಿದಂತೆ 11 ರಾಷ್ಟ್ರಗಳು ವಿಷಯ ಮಂಡನೆ ಮಾಡಲಿದ್ದಾರೆ ಎಂದರು. ಪ್ರಸ್ತುತ 115 ಸದಸ್ಯ ರಾಷ್ಟ್ರಗಳನ್ನು ಎ-ವೆಬ್ ಹೊಂದಿದೆ. ಮೂರು ದಿನಗಳ ಸಮಾವೇಶದಿಂದ ಭಾರತ ಸಾಕಷ್ಟು ಎದುರು ನೋಡುತ್ತಿದ್ದರೆ, ಇತರೆ ಸದಸ್ಯ ರಾಷ್ಟ್ರಗಳು ಸಾಕಷ್ಟು ನಿರೀಕ್ಷೆಗಳನ್ನು ಹೊಂದಿವೆ ಎಂದು ಸಿನ್ಹಾ ತಿಳಿಸಿದರು.
ಎ-ವೆಬ್ ಪ್ರಧಾನ ಕಾರ್ಯದರ್ಶಿ ಯಾಂಗ್-ಹಿ ಕಿಮ್ ಮಾತನಾಡಿ, ಬೃಹತ್ ಪ್ರಜಾಪ್ರಭುತ್ವ ಹೊಂದಿರುವ ಭಾರತದಲ್ಲಿ ಸಮಾವೇಶ ನಡೆಯುತ್ತಿರುವುದು ಹಾಗೂ ಮುಂದಿನ ಅವಧಿಗೆ ಭಾರತ ನಾಯಕತ್ವ ವಹಿಸಿಕೊಳ್ಳುತ್ತಿರುವುದು ಚುನಾವಣಾ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ ಎಂದರು. ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಇದ್ದರು.