ಬೆಂಗಳೂರು: ಆಸ್ತಿ ತೆರಿಗೆ ಸಂಗ್ರಹ ವಿಚಾರದಲ್ಲಿ ಆಸಕ್ತಿ ತೋರದ ಕಂದಾಯ ವಿಭಾಗದ ಅಧಿಕಾರಿಗಳ ವಿರುದ್ಧ “ಶಿಸ್ತು ಕ್ರಮದ ಅಸ್ತ್ರ’ ಪ್ರಯೋಗಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.
ಆಸ್ತಿ ತೆರಿಗೆ ಸಂಗ್ರಹಿಸುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ಪಾಲಿಕೆ ವಿಶೇಷ ಆಯುಕ್ತ ಮನೀಶ್ ಮೌದ್ಗಿಲ್ ಅವರು ಜ.30ರಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ಗೆ ವರದಿ ನೀಡಿದ್ದು, ಅದರಲ್ಲಿ ಬೊಮ್ಮನಹಳ್ಳಿ ವಲಯದ ಆರು ಅಧಿಕಾರಿಗಳ ಹೆಸರು ಪ್ರಸ್ತಾಪಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಆಸ್ತಿ ತೆರಿಗೆ ಪಾವತಿಸದವರು ಹೆಚ್ಚಿನ ಸಂಖ್ಯೆಯಲ್ಲಿ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿದ್ದಾರೆ. ತೆರಿಗೆ ಕಟ್ಟದ ಟಾಪ್-50 ಗೃಹೇತರ ಕಟ್ಟಡಗಳಲ್ಲಿ ಒಂದೇ ಒಂದು ಕಟ್ಟಡವನ್ನು ಕಂದಾಯ ಅಧಿಕಾರಿಗಳು ಸೀಲ್ ಮಾಡಿಲ್ಲ. ಜತೆಗೆ ಮಾಲೀಕರಿಂದ ಆಸ್ತಿ ತೆರಿಗೆ ಸಂಗ್ರಹಕ್ಕೆ ಯಾವುದೇ ಕ್ರಮ ವಹಿಸಿಲ್ಲ. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸೆಗಿರುವ ಆರು ಅಧಿಕಾರಿಗಳಿಗೆ ಪಾಲಿಕೆ “ಅಮಾನತು ಅಸ್ತ್ರ’ ಪ್ರಯೋಗ ಮಾಡಿ ಇಲಾಖೆ ವಿಚಾರಣೆಗೆ ಆದೇಶಿಸುವಂತೆ ಮೌದ್ಗಿಲ್ ಅವರು ಪಾಲಿಕೆ ಮುಖ್ಯ ಆಯುಕ್ತರಿಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ಹೇಳಿವೆ.
ಬೇಗೂರು, ಯಲಚೇನಹಳ್ಳಿ ಅಧಿಕಾರಿಗಳ ವಿರುದ್ಧ ಕ್ರಮ: ಈ ಮಧ್ಯೆ, ಆಸ್ತಿ ತೆರಿಗೆ ಸಂಗ್ರಹದಲ್ಲಿ ಬೇಗೂರು, ಬೊಮ್ಮನಹಳ್ಳಿ, ಯಲಚೇನಹಳ್ಳಿ, ಉತ್ತರಹಳ್ಳಿ, ಎಚ್.ಎಸ್.ಆರ್.ಲೇ ಔಟ್ ಮತ್ತು ಅರಕೆರೆ ಪಾಲಿಕೆ ವಲಯ ಕಂದಾಯ ಅಧಿಕಾರಿಗಳು ಮತ್ತು ಸಿಬ್ಬಂದಿ ಆಸಕ್ತಿ ತೋರಿಲ್ಲ. ಈ ಹಿನ್ನೆಲೆಯಲ್ಲಿ ಆ ಅಧಿಕಾರಿಗಳನ್ನೂ ಅಮಾನತು ಮಾಡಬೇಕೆಂದು ಶಿಫಾರಸು ಮಾಡಲಾಗಿದೆ ಎಂದು ಪಾಲಿಕೆ ಮೂಲಗಳು ಹೇಳಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಬೊಮ್ಮನಹಳ್ಳಿ ವಲಯ ಆಯುಕ್ತೆ ರಮ್ಯಾ, ಚುನಾವಣೆ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಕುಂಟಿತವಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಸರಿಪಡಿಸಿಕೊಳ್ಳುತ್ತಾರೆಂಬ ವಿಶ್ವಾಸ ಇದೆ ಎಂದು ಹೇಳಿದರು.
ತೆರಿಗೆ ಸಂಗ್ರಹಕ್ಕೆ ವಲಯಅಧಿಕಾರಿಗಳ ನಿರಾಸಕ್ತಿ? : ಆಸ್ತಿ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಪಾಲಿಕೆ ಕಂದಾಯ ವಿಭಾಗ ಹಲವು ರೀತಿಯ ಕಾರ್ಯ ಯೋಜನೆ ರೂಪಿಸಿದೆ. ಇದರಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಗೃಹ ಹಾಗೂ ಗೃಹೇತರ ಕಟ್ಟಡಗಳ ಮಾಲೀಕರ ಆಸ್ತಿ ಮುಟ್ಟುಗೋಲು ಹಾಗೂ ಬೀಗಮುದ್ರೆ ಹಾಕುವುದು ಕೂಡ ಸೇರಿದೆ. ಈ ಸಂಬಂಧ ಈಗಾಗಲೇ ಪಾಲಿಕೆ ಎಂಟೂ ವಲಯಗಳಲ್ಲಿ ಬಿಬಿಎಂಪಿ ವಲಯ ಕಂದಾಯ ಅಧಿಕಾರಿಗಳು ಆಸ್ತಿ ತೆರಿಗೆ ಕಟ್ಟದ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ, ಬೊಮ್ಮನಹಳ್ಳಿ ವಲಯ, ಬೇಗೂರು, ಯಲಚೇನಹಳ್ಳಿ, ಉತ್ತರಹಳ್ಳಿ, ಎಚ್.ಎಸ್. ಆರ್.ಲೇ ಔಟ್ ಮತ್ತು ಅರಕೆರೆ ಸೇರಿ ಮತ್ತಿತರ ಪ್ರದೇಶಗಳಲ್ಲಿ ಹಲವು ಮಾಲೀಕರು 20 ಲಕ್ಷ ರೂ.ಗೂ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಅಂತವರ ವಿರುದ್ಧ ಕಂದಾಯ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎಂಬ ಮಾತುಗಳು ಪಾಲಿಕೆಯಲ್ಲಿ ಕೇಳಿಬಂದಿವೆ.