ಶಿವಮೊಗ್ಗ: ದೇಶ ಪ್ರೇಮ, ದೇಶ ಭಕ್ತಿ, ಹೋರಾಟಗಳಿಗೆ ಮೊದಲಿನಿಂದಲೂ ಹೆಸರುವಾಸಿಯಾಗಿರುವ ಶಿವಮೊಗ್ಗ ಈಗ ದೇಶ ಪ್ರೇಮ ಮೂಡಿಸುವ ನಿಟ್ಟಿನಲ್ಲಿ ಮತ್ತಷ್ಟು ಸ್ಫೂರ್ತಿ ನೀಡಲು ಸಜ್ಜಾಗುತ್ತಿದೆ. ನಗರದ ಪ್ರಮುಖ ಸರ್ಕಲ್ ವೊಂದರಲ್ಲಿ ಯುದ್ಧ ಟ್ಯಾಂಕರ್ ಸ್ಥಾಪಿಸಲಾಗುತ್ತಿದ್ದು ಇದು ಸೇನೆಗೆ ಸೇರುವ ಯುವಕರಿಗೆ ಪ್ರೇರಣೆ ನೀಡುವುದು ಖಂಡಿತ.
ರಾಜ್ಯದ ಮೂರು ಜಿಲ್ಲೆಗಳಲ್ಲಿ ಮಾತ್ರ ಯುದ್ಧ ಟ್ಯಾಂಕರ್‌ಗಳನ್ನು ಕಾಣಬಹುದು. ಬೆಳಗಾವಿ, ಬೆಂಗಳೂರು, ಧರ್ಮಸ್ಥಳದಲ್ಲಿ ಮಾತ್ರ ಯುದ್ಧದಲ್ಲಿ ಬಳಸಿದ ಟ್ಯಾಂಕರ್ ಕಾಣಸಿಗುತ್ತದೆ. ಈ ಸಾಲಿನಲ್ಲಿ ಇನ್ನು ಮುಂದೆ ಶಿವಮೊಗ್ಗ ಕೂಡ ಸೇರ್ಪಡೆಯಾಗಲಿದೆ. ಈ ಟ್ಯಾಂಕರ್‌ಗಳು ಸೇನೆಗೆ ಸೇರುವವರಿಗೆ ಸ್ಫೂರ್ತಿ ನೀಡುವ ಜತೆಗೆ ಯುದ್ಧದ ಸನ್ನಿವೇಶಗಳನ್ನು ಕಟ್ಟಿಕೊಡಬಹುದು.
ಶಿವಮೊಗ್ಗದ ಸೈನಿಕ ಕಲ್ಯಾಣ ಇಲಾಖೆ ಬಳಿ ಇರುವ ಸೈನಿಕ ಪಾರ್ಕ್ ಎಷ್ಟೋ ಮಂದಿಗೆ ಸ್ಫೂರ್ತಿ ನೀಡಿದೆ. ದೇಶ ಭಕ್ತಿ, ಸೈನಿಕರ ಬಗ್ಗೆ ಗೌರವ ಹೆಚ್ಚಿಸಿದೆ. ರಾಜ ಮಹಾರಾಜರ ಕಾಲದಲ್ಲಿ ಶಿವಮೊಗ್ಗ ಸೇನೆ ತುಕಡಿಗಳನ್ನು ಇರಿಸುವ ಸ್ಥಳವಾಗಿತ್ತು. ಕೆಳದಿ ಸಂಸ್ಥಾನದ ಅನೇಕ ಕುರುಹುಗಳನ್ನು ಇಲ್ಲಿ ಕಾಣಬಹುದು. ಈಗ ಭಾರತ-ಪಾಕಿಸ್ತಾನದ ಯುದ್ಧದ ಕುರುಹಾಗಿರುವ ಟ್ಯಾಂಕರ್ ಅನ್ನು ಶಿವಮೊಗ್ಗದ ಎಂಆರ್‌ಎಸ್ ಸರ್ಕಲ್‌ನಲ್ಲಿ ಸ್ಥಾಪಿಸಲಾಗುತ್ತಿದ್ದು ಮಲೆನಾಡಿನ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಲಿದೆ.
ಯುದ್ಧ ಟ್ಯಾಂಕರ್ ವಿಶೇಷ: ಟಿ55 ಹೆಸರಿನ ರಷ್ಯಾದಲ್ಲಿ ಉತ್ಪಾದನೆಯಾಗಿರುವ ಈ ಟ್ಯಾಂಕರ್ ಅನ್ನು 1971ರ ಭಾರತ-ಪಾಕಿಸ್ತಾನದ ಯುದ್ಧದಲ್ಲಿ ಬಳಸಲಾಗಿತ್ತು. ಅದು ನಿಷ್ಕ್ರಿಯಗೊಂಡ ಮೇಲೆ ಅದನ್ನು ಮಹಾರಾಷ್ಟ್ರದ ಪುಣೆಯ ಕಿರ್ಕಿ ಕಂಟೋನ್ಮೆಂಟ್ ಬೋರ್ಡ್‌ನಲ್ಲಿ ಇರಿಸಲಾಗಿತ್ತು. ಸಂಸದ ಬಿ.ವೈ. ರಾಘವೆಂದ್ರ ಅವರು ರಾಜ್‌ನಾಥ್ ಸಿಂಗ್ ಅವರಿಗ ಪತ್ರ ಬರೆದು ಒತ್ತಾಯಿಸಿದ್ದರಿಂದ ಹಾಗೂ ಮಹಾನಗರ ಪಾಲಿಕೆ ಇದರ ನಿರ್ವಹಣೆ ಜವಾಬ್ದಾರಿಯನ್ನು ವಹಿಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವಾಲಯ ಅನುಮತಿ ನೀಡಿತ್ತು.
ಟ್ಯಾಂಕ್‌ನ ಒಟ್ಟು ತೂಕ 36 ಸಾವಿರ ಕೆಜಿ ಇದ್ದು ಅದನ್ನು ಎಂಆರ್‌ಎಸ್ ಸರ್ಕಲ್‌ನಲ್ಲಿ ಕೂರಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಬೆಂಗಳೂರು, ಮೈಸೂರು ಮೂಲಕ ಯಾರೇ ನಗರಕ್ಕೆ ಬಂದರೂ ಈ ಸರ್ಕಲ್ ಮೂಲಕವೇ ಹಾದು ಹೋಗಬೇಕು. 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುವ ಸಹ್ಯಾದ್ರಿ ಕಾಲೇಜು ಇಲ್ಲೇ ಇದ್ದು ವಿದ್ಯಾರ್ಥಿಗಳಿಗೂ ಇದು ಸ್ಫೂರ್ತಿ ನೀಡಲಿದೆ.
ನಡೆದಿತ್ತು ಪ್ರಯತ್ನ: 4 ವರ್ಷದ ಹಿಂದೆ ಯುದ್ಧ ಟ್ಯಾಂಕರ್ ತರುವ ಬಗ್ಗೆ ಚಿಂತನೆ ನಡೆದಿತ್ತು. 2021ರಲ್ಲಿ ಟ್ಯಾಂಕರ್ ತರುವ ಪ್ರಯತ್ನ ನಡೆದಿತ್ತಾದರೂ ಅದು ಸಾಧ್ಯವಾಗಿರಲಿಲ್ಲ. ಸೈನಿಕ ಕಲ್ಯಾಣ ಇಲಾಖೆ ಅಧಿಕಾರಿಗಳ ಶ್ರಮ, ಸಂಸದರು, ಶಾಸಕರು, ಮಹಾನಗರ ಪಾಲಿಕೆ ಶ್ರಮದಿಂದ ಅಂತಿಮವಾಗಿ ಶಿವಮೊಗ್ಗಕ್ಕೆ ತರಲಾಗಿದೆ. ಪ್ಲಾಟ್ ಫಾರ್ಮ್ ನಿರ್ಮಾಣ, ನಿರ್ವಹಣೆ, ಬಣ್ಣ ಬಳಿಯುವ ಕೆಲಸಗಳು ಆಗಬೇಕಿದ್ದು ಪಾಲಿಕೆ ಎಷ್ಟು ಬೇಗ ಕಾಮಗಾರಿ ಮುಗಿಸುತ್ತದೆಯೋ ಅಷ್ಟು ಬೇಗ ಟ್ಯಾಂಕರ್ ಸ್ಥಾಪನೆಯಾಗಲಿದೆ.
ಇಂದು ಶಿವಮೊಗ್ಗಕ್ಕೆ
ಪುಣೆ, ಹುಬ್ಬಳ್ಳಿ ಮೂಲಕ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಟ್ಯಾಂಕರ್ ಅನ್ನು ಶನಿವಾರ ಬೆಳಗ್ಗೆ ಅದ್ಧೂರಿಯಾಗಿ ಸ್ವಾಗತ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಸಕರು, ಸಚಿವರು, ಸಂಸದರು. ಕಾರ್ಪೊರೇಟರ್‌ಗಳು, ಅಧಿಕಾರಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ.
ಶೌರ್ಯದ ಪ್ರತೀಕವಾಗಿ ಯುದ್ಧ ಟ್ಯಾಂಕರ್ ನೀಡಲು ಈ ಹಿಂದೆ ಮಹಾನಗರ ಪಾಲಿಕೆಯಲ್ಲಿ ಪ್ರಸ್ತಾವನೆ ಮಾಡಲಾಗಿತ್ತು. ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ನಾನು ಒತ್ತಾಯ ಮಾಡಿದ್ದೆ. ಅದರ ಪ್ರತಿಫಲವಾಗಿ ಶಿವಮೊಗ್ಗಕ್ಕೆ ಯುದ್ಧ ಟ್ಯಾಂಕರ್ ಬರುತ್ತಿದೆ. ಸ್ವಾತಂತ್ರ್ಯ ಹೋರಾಟದ ಅನೇಕ ಕೊಡುಗೆ ನೀಡಿರುವ ಶಿವಮೊಗ್ಗ ಜಿಲ್ಲೆಗೆ ಪೂರಕವಾಗಿ ನೀಡಲಾಗುತ್ತಿದೆ. ಯುದ್ಧದಲ್ಲಿ ಭಾಗವಹಿಸಿದ್ದ ವಿಮಾನ ಕೂಡ ಕೇಳಿದ್ದೇವೆ. ಅದು ಕೂಡ ಮೂರು ತಿಂಗಳಲ್ಲಿ ಬರಲಿದೆ. ರಾಷ್ಟ್ರೀಯ ರಕ್ಷಾ ವಿವಿ ಶಿವಮೊಗ್ಗದಲ್ಲಿ ಆಗಿದೆ, ಅಗ್ನಿವೀರರ ನೇಮಕಕ್ಕೆ ಕೇಂದ್ರ ಉತ್ತೇಜನ ನೀಡುತ್ತಿದೆ. ಎಲ್ಲರಿಗೂ ಇದು ಸ್ಫೂರ್ತಿದಾಯಕವಾಗಲಿದೆ.
-ಬಿ.ವೈ. ರಾಘವೇಂದ್ರ, ಸಂಸದ
ಯುದ್ಧ ಟ್ಯಾಂಕರ್ ಅನ್ನು ಎಂಆರ್ ಎಸ್ ಸರ್ಕಲ್ ಅಥವಾ ಫ್ರೀಡಂ ಪಾರ್ಕ್‌ನಲ್ಲಿ ಸ್ಥಾಪನೆ ಮಾಡಬೇಕೆಂಬ ಕುರಿತು ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ನಿರ್ಣಯ ಮಾಡಲಿದೆ. ಈ ಹಿಂದೆ ಎಂಆರ್ ಎಸ್ ಸರ್ಕಲ್‌ನಲ್ಲಿ ಸ್ಥಾಪಿಸಲು ಚಿಂತನೆ ನಡೆಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಅಲ್ಲಿ ಫ್ಲೈಓವರ್ ಹಾಗೂ ಸರ್ಕಲ್ ವಿಸ್ತರಣೆಯಾಗಲಿದೆ. ಸಮಿತಿ ನಿರ್ಣಯದ ನಂತರ ಟೆಂಡರ್ ಕರೆದು ಕಾಮಗಾರಿ ನಡೆಸಲಾಗುವುದು. –
ಮಾಯಣ್ಣಗೌಡ, ಆಯುಕ್ತರು, ಶಿವಮೊಗ್ಗ ಮಹಾನಗರ ಪಾಲಿಕೆ
ಶರತ್ ಭದ್ರಾವತಿ