Advertisement

ಬಸ್‌ ಟಿಕೆಟ್‌-ಹಾಲಿನ ಪ್ಯಾಕೆಟ್‌ ಮೇಲೆ ಮತ ಜಾಗೃತಿ ಸಂದೇಶ

11:14 AM Mar 19, 2019 | |

ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಗರಿಷ್ಠ ಮತದಾನ ಆಗಲು ಜನ ಜಾಗೃತಿಗೆ ಚುನಾವಣಾ ಆಯೋಗ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಈಗ ಕೆಎಸ್‌ಆರ್‌ಟಿಸಿ ಬಸ್‌ನ ಪ್ರಯಾಣಿಕರಿಗೆ ನೀಡುವ ಟಿಕೆಟ್‌ನಲ್ಲೂ ಮತ ಜಾಗೃತಿಯ ಸಂದೇಶ ಕಾಣುತ್ತಿದೆ. ಇದಲ್ಲದೆ ಕೆಎಂಎಫ್‌ ನ ಹಾಲಿನ ಪ್ಯಾಕೆಟ್‌ಗಳ ಮೇಲೂ ಜಾಗೃತಿ ಸಂದೇಶ ಕಾಣುತ್ತಿದೆ.

Advertisement

ಬಸ್‌ ಟಿಕೆಟ್‌ನಲ್ಲಿ “ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿದ್ದೀರಾ? ಎಂಬ ಸಂದೇಶ ಮುದ್ರಿಸಲಾಗಿದ್ದರೆ, ಹಾಲಿನ ಪ್ಯಾಕೆಟ್‌ ಮೇಲೆ ಇಂಗ್ಲಿಷ್‌ ನಲ್ಲಿ “ಹ್ಯಾವ್‌ ಯೂ ಚೆಕ್ಡ್ ಯುವರ್‌ ನೇಮ್‌ ಇನ್‌ ದಿ ವೋಟರ್‌ ಲಿಸ್ಟ್‌’? ಟೋಲ್‌ ಫ್ರೀ 1950 ಎಂಬ ಸಂದೇಶ ಅಚ್ಚುಹಾಕಲಾಗಿದೆ. ಸದ್ಯಕ್ಕೆ ಟೋನ್ಡ ಹಾಲಿನ ಪ್ಯಾಕೆಟ್‌ನಲ್ಲಿ ಮಾತ್ರ ಈ ಸಂದೇಶ ಮುದ್ರಿಸಲಾಗಿದೆ. 

ಕೆಎಸ್ಸಾರ್ಟಿಸಿ 17 ವಿಭಾಗಗಳ 83 ಡಿಪೋಗಳ ವ್ಯಾಪ್ತಿಯಲ್ಲಿ ಪ್ರತಿದಿನ 29 ಲಕ್ಷ ಪ್ರಯಾಣಿಕರು ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಇವರಿಗೆ ನೀಡುವ ಟಿಕೆಟ್‌ ಮೇಲೆಯೇ ಮತಜಾಗೃತಿ ಸಂದೇಶ ಇದ್ದಲ್ಲಿ ಸುಲಭವಾಗಿ ಜನರ ಅರಿವಿಗೆ ಬರಲಿದೆ ಎಂಬುದನ್ನು ಮನಗಂಡ ಚುನಾವಣಾ ಆಯೋಗ ಈ ಹೊಸ ಕ್ರಮಕ್ಕೆ ಮುಂದಾಗಿದೆ. ಶಿವಮೊಗ್ಗ ಡಿಪೋದ ಎಲ್ಲ ಬಸ್‌ಗಳಲ್ಲೂ ಸಂದೇಶ ಅಪ್‌ಲೋಡ್‌ ಮಾಡಲಾಗಿದೆ.

ಮತದಾನ ಹೆಚ್ಚಿಸಲು ಹಾಗೂ ಮತದಾರರ ಪಟ್ಟಿಗೆ ಅರ್ಹ ಮತದಾರರ ಹೆಸರನ್ನು ನೋಂದಾಯಿಸಲು ಅನುಕೂಲವಾಗುವಂತೆ ಆಯೋಗ ಈಗಾಗಲೇ ನಿರಂತರವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರುವುದನ್ನು ಪರೀಕ್ಷಿಸಿಕೊಂಡು ದೋಷವಿದ್ದರೆ ತಿದ್ದುಪಡಿಗೂ ಅವಕಾಶವಿತ್ತು. ಒಂದು ವೇಳೆ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಹೊಸದಾಗಿ ನೋಂದಾಯಿಸಲು ಕೂಡ ಅವಕಾಶ ಕಲ್ಪಿಸಲಾಗಿತ್ತು.

ಆಯೋಗ ನೀಡುವ ಮತದಾರರ ಗುರುತಿನ ಚೀಟಿ ಇದ್ದರೂ ಕೂಡ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಮತದಾನ ಮಾಡಲು ಅವಕಾಶವಿಲ್ಲ. ಎಪಿಕ್‌ ಕಾರ್ಡ್‌ ಇದ್ದರೂ ಮತದಾನಕ್ಕೆ ಅವಕಾಶ ಇಲ್ಲ ಎಂಬ ಕಾರಣ ನೀಡಿ ಜಗಳವಾಡುವ ಪ್ರಕರಣಗಳು ಹೆಚ್ಚಾಗಿರುವುದರಿಂದ ವೋಟರ್‌ ಲಿಸ್ಟ್‌ ನಲ್ಲಿ ಹೆಸರು ಪರಿಶೀಲಿಸಲು ಅವಕಾಶ ನೀಡಲಾಗಿದೆ. ಬಸ್‌ ಟಿಕೆಟ್‌ ಪಡೆಯುವ ಪ್ರಯಾಣಿಕರು, ಹಾಲಿನ ಪ್ಯಾಕೆಟ್‌ ಖರೀದಿಸುವ ಗ್ರಾಹಕರನ್ನು ಮತ್ತೂಮ್ಮೆ ಎಚ್ಚರಿಸುವ ಕಾರ್ಯವನ್ನು ಚುನಾವಣಾ ಆಯೋಗ ಮಾಡುತ್ತಿದೆ.

Advertisement

ಹಾಲ್‌ಗ‌ಳ ಬಾಡಿಗೆಗೆ ಅನುಮತಿ ಕಡಾಯ
 ಶಿವಮೊಗ್ಗ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಗರದ ವ್ಯಾಪ್ತಿಗೆ ಬರುವ ಸಭಾಂಗಣ, ಕಲ್ಯಾಣ ಮಂದಿರ ಲಾಡ್ಜ್, ಹೋಟೆಲ್‌ ಹಾಗೂ ಕಮ್ಯುನಿಟಿ ಹಾಲ್‌ಗ‌ಳ ಮಾಲೀಕರು ರಾಜಕೀಯ ವ್ಯಕ್ತಿಗಳ ಸಭೆ, ಸಮಾರಂಭಗಳಿಗೆ ನೀಡುವ ಮುನ್ನ ಚುನಾವಣಾ ಆಯೋಗದ ಅನುಮತಿ ಪಡೆದಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಅನುಮತಿ ಪಡೆಯದೆ ಇದ್ದಲ್ಲಿ ಸಮಾರಂಭಗಳಿಗೆ ಅವಕಾಶ ನೀಡಬಾರದು ಇದನ್ನು ಮೀರಿದಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಚುನಾವಣಾಧಿಕಾರಿ ಚಾರುಲತಾ ಸೋಮಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next