ಕುಂದಾಪುರ: ರಾಜಕಾರಣದಲ್ಲಿ ಮಾತು ಉಳಿಸಿಕೊಳ್ಳುವುದು ಕಷ್ಟ. ಆದರೆ ಕಾಂಗ್ರೆಸ್ ಚುನಾವಣೆ ಸಂದರ್ಭ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳಿಂದಾಗಿ ರಾಜ್ಯದ ಜನ ಅದರಲ್ಲೂ ಕರಾವಳಿ ಜನ ಹಿಂದುತ್ವದ ಮಾತಿನ ಮರುಳಾಗದೆ ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಮತ ಚಲಾಯಿಸಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬೈಂದೂರು ಕ್ಷೇತ್ರದಲ್ಲಿ ಬಂಗಾರಪ್ಪ ಜತೆಗಿದ್ದ ಬಿ.ಎಂ. ಸುಕುಮಾರ ಶೆಟ್ಟರು ಮರಳಿ ಕಾಂಗ್ರೆಸ್ ಸೇರಿದ್ದಾರೆ. ಬೈಂದೂರಿನಲ್ಲಿ ಈ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಬೆಂಬಲಿಸಲಿದ್ದಾರೆ. ರಾಜ್ಯದಲ್ಲಿ ಜನರಿಗೆ ಭಾವನಾತ್ಮಕ ಹಸಿವು ಇತ್ತು, ಈಗ ಹೊಟ್ಟೆ ಹಸಿವಿಗೆ ಬೆಲೆ ನೀಡುತ್ತಿದ್ದಾರೆ. ಗೃಹಲಕ್ಷ್ಮಿ ಗೃಹಜ್ಯೋತಿಯಂತಹ ಯೋಜನೆಗಳು ಬಡವರ ಮನೆಗೆ ಬೆಳಕಾಗಿವೆ ಎಂದರು.
ಸೋತ ಬಳಿಕ ಗೀತಾ ಶಿವರಾಜ್ ಕುಮಾರ್ ಬೈಂದೂರಿಗೆ ಕಡಿಮೆ ಭೇಟಿ ನೀಡಿರಬಹುದು ಆದರೆ ಶಿವಮೊಗ್ಗಕ್ಕೆ ಆಗಾಗ ಭೇಟಿ ನೀಡುತ್ತಿದ್ದರು. ನಾನು ಮಧ್ಯವರ್ತಿಯಾಗಿ ಇರುವುದಿಲ್ಲ, ಅವರೇ ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ. ಈಶ್ವರಪ್ಪ ಗೊಂದಲ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲೇ ಬಿಜೆಪಿಯಲ್ಲಿ ಗೊಂದಲ ಇದೆ. ಆದರೆ ಬೇರೆ ಮನೆ ಒಡೆದು ನಾವು ರಾಜಕಾರಣ ಮಾಡುವುದಿಲ್ಲ ಎಂದರು.
ಗೀತಾ ಶಿವರಾಜ್‌ಕುಮಾರ್ ಮಾ. 20ರಂದು ರಾತ್ರಿ ಕೊಲ್ಲೂರಿಗೆ ಆಗಮಿಸಿ ಈ ಕ್ಷೇತ್ರದಲ್ಲಿ ಚುನಾವಣ ಪ್ರಚಾರ ಆರಂಭಿಸಲಾಗುತ್ತದೆ. ಪ್ರತೀ ಪಂಚಾಯತ್ ವ್ಯಾಪ್ತಿಗೆ ಭೇಟಿ ನೀಡಲಿದ್ದಾರೆ. ಶಿವರಾಜ್ ಕುಮಾರ್ ಪ್ರತಿ ಜಿ.ಪಂ. ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ ಎಂದರು.
ಬೈಂದೂರು ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಬಿ. ಎಂ . ಸುಕುಮಾರ ಶೆಟ್ಟಿ , ಕೆಪಿಸಿಸಿ ಕಾರ್ಯದರ್ಶಿ ಜಿ. ಎ . ಬಾವ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಜು ಪೂಜಾರಿ ಬೈಂದೂರು, ಡಿ.ಆರ್ . ರಾಜು ಕಾರ್ಕಳ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಬೈಂದೂರು ಅಧ್ಯಕ್ಷ ಅರವಿಂದ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.