Advertisement

ವಿವಿಧ ತರಕಾರಿಗಳ ಆರೋಗ್ಯಕರ ಖಾದ್ಯಗಳು…

12:11 PM Nov 17, 2022 | Team Udayavani |

ತಾಜಾ ತ‌ರಕಾರಿ ಹಾಗೂ ಸೊಪ್ಪುಗಳನ್ನು ಬಳಸಿ ಬೆಳಗ್ಗಿನ ತಿಂಡಿ ಹಾಗೂ ಊಟಕ್ಕಾಗಿ ಆರೋಗ್ಯಕರ ಖಾದ್ಯಗಳನ್ನು ತಯಾರಿಸಬಹುದು. ಹಾಗೆ ತಯಾರಿಸಬಹುದಾದ ಕೆಲವು ಖಾದ್ಯಗಳ ಮಾಹಿತಿ ಇಲ್ಲಿದೆ:

Advertisement

ಮಸಾಲಾ ಕ್ಯಾಪ್ಸಿಕಮ್‌
ಬೇಕಾಗುವ ಸಾಮಗ್ರಿ: ಕ್ಯಾಪ್ಸಿಕಮ್‌- 3, ತೆಂಗಿನತುರಿ- 1 ಕಪ್‌, ಕೊತ್ತಂಬರಿ ಬೀಜ- 2 ಚಮಚ, ಜೀರಿಗೆ- 1 ಚಮಚ, ಹುಣಸೆಹಣ್ಣು ಗೋಲಿಗಾತ್ರ, ಮೆಂತೆ- 1/2 ಚಮಚ, ಎಣ್ಣೆ- 3 ಚಮಚ, ಒಗ್ಗರಣೆಗೆ ಕರಿಬೇವು, ಸಾಸಿವೆ, ಹುರಿದ ಒಣಮೆಣಸಿನಕಾಯಿ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ದೊಣ್ಣೆ ಮೆಣಸನ್ನು ಎರಡು ಇಂಚಿನಷ್ಟು ತುಂಡರಿಸಿಡಿ. ಕೊತ್ತಂಬರಿ, ಜೀರಿಗೆ, ಮೆಂತ್ಯೆ ಹುರಿದು, ಒಣಮೆಣಸಿನಕಾಯಿ, ತೆಂಗಿನ ತುರಿ, ಹುಣಸೆಹಣ್ಣು ಹಾಕಿ ತರಿ ತರಿಯಾಗಿ ರುಬ್ಬಿರಿ. ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಕರಿಬೇವಿನ ಒಗ್ಗರಣೆ ಮಾಡಿ ಕ್ಯಾಪ್ಸಿಕಮ್‌, ರುಬ್ಬಿದ ಮಸಾಲೆ, ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಬಾಣಲೆ ಮುಚ್ಚಿ ಬೇಯಿಸಿರಿ. ಅನ್ನ, ದೋಸೆ, ಚಪಾತಿಯೊಂದಿಗೆ ಸವಿಯಲು ರುಚಿಯಾಗಿರುವುದು.

ಸಬ್ಬಸಿಗೆ, ಮೆಂತೆಸೊಪ್ಪಿನ ದೋಸೆ
ಬೇಕಾಗುವ ಸಾಮಗ್ರಿ: ಸಬ್ಬಸಿಗೆ ಸೊಪ್ಪು- 1 ಕಟ್ಟು , ಮೆಂತೆಸೊಪ್ಪು- 1/2 ಕಟ್ಟು , ಬೆಳ್ತಿಗೆ ಅಕ್ಕಿ- 1 ಕಪ್‌, ತೆಂಗಿನತುರಿ- 1/2 ಕಪ್‌, ಬೆಲ್ಲ- ಗೋಲಿ ಗಾತ್ರ, ಹುರಿದ ಒಣಮೆಣಸಿನಕಾಯಿ 4-5, ಉಪ್ಪು ರುಚಿಗೆ, ಹುಣಸೆಹಣ್ಣು- ಗೋಲಿಗಾತ್ರ, ಎಣ್ಣೆ ದೋಸೆ ತೆಗೆಯಲು.

ತಯಾರಿಸುವ ವಿಧಾನ: ಸಬ್ಬಸಿಗೆ, ಮೆಂತ್ಯೆಸೊಪ್ಪು ಶುಚಿಗೊಳಿಸಿ ಸಪೂರ ತುಂಡರಿಸಿ ತೊಳೆದಿಡಿ. ಎರಡು ಗಂಟೆ ನೆನೆಸಿಟ್ಟ ಅಕ್ಕಿ ತೊಳೆದು ತೆಂಗಿನತುರಿ, ಒಣಮೆಣಸಿನಕಾಯಿ, ಹುಣಸೆ, ಬೆಲ್ಲ, ಉಪ್ಪು ಸೇರಿಸಿ ನಯವಾಗಿ ರುಬ್ಬಿ ಸೊಪ್ಪು ಹಾಕಿ ಬೆರೆಸಿಡಿ. ಒಲೆ ಮೇಲೆ ದೋಸೆ ಕಾವಲಿ/ತವಾ ಬಿಸಿಯಾದ ಮೇಲೆ ಸ್ವಲ್ಪ ಎಣ್ಣೆ ಹಾಕಿ ತೆಳುವಾದ ದೋಸೆ ಹೊಯ್ದು ಎರಡೂ ಬದಿ ಕಾಯಿಸಿರಿ. ಊಟ, ಉಪಾಹಾರಕ್ಕೆ ಸವಿಯಬಹುದು.

Advertisement

ಚಿಕ್ಕ ಗುಳ್ಳ ತಳಾಸಣೆ (ಪಲ್ಯ)
ಬೇಕಾಗುವ ಸಾಮಗ್ರಿ: ಚಿಕ್ಕ ಗುಳ್ಳ 5-6, ಬೆಳ್ಳುಳ್ಳಿ ಎಸಳು 6-7, ಎಣ್ಣೆ- 4 ಚಮಚ, ಒಣಮೆಣಸಿನಕಾಯಿ- 3, ಉಪ್ಪು ರುಚಿಗೆ, ಜೀರಿಗೆ- 1 ಚಮಚ, ಕೊತ್ತಂಬರಿಪುಡಿ- 1/2 ಚಮಚ.

ತಯಾರಿಸುವ ವಿಧಾನ: ಗುಳ್ಳ ಉದ್ದಕ್ಕೆ ಸೀಳಿಡಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಬೆಳ್ಳುಳ್ಳಿ ಜಜ್ಜಿ ಹಾಕಿ ಹೊಂಬಣ್ಣ ಬಂದಾಗ ಒಣಮೆಣಸಿನ ಕಾಯಿ ಚೂರು ಹಾಕಿ ಪರಿಮಳ ಬಂದ ಮೇಲೆ ಜೀರಿಗೆ, ಕೊತ್ತಂಬರಿ ಹುಡಿ, ಗುಳ್ಳ ಹಾಕಿ, ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿರಿ. ಆರೋಗ್ಯಕಾರಿ ಪಲ್ಯ ತಯಾರು.

ಹಸಿ ಅವರೆ, ಬಟಾಣಿಕಾಳು ಅಂಬಟ
ಬೇಕಾಗುವ ಸಾಮಗ್ರಿ: ಅವರೆಕಾಳು-1/4 ಕಪ್‌, ಬಟಾಣಿ- 1/4 ಕಪ್‌, ಬಟಾಟೆ- 1, ಹುರಿದ ಒಣಮೆಣಸಿನಕಾಯಿ 4-5, ನೀರುಳ್ಳಿ- 3, ರುಚಿಗೆ ಉಪ್ಪು , ಎಣ್ಣೆ- 3 ಚಮಚ, ತೆಂಗಿನತುರಿ- 1 ಕಪ್‌, ಹುಣಸೆಹಣ್ಣು ಸ್ವಲ್ಪ.

ತಯಾರಿಸುವ ವಿಧಾನ: ತೆಂಗಿನತುರಿ, ಒಣಮೆಣಸಿನಕಾಯಿ, ಹುಣಸೆಹಣ್ಣು ಒಟ್ಟಿಗೆ ರುಬ್ಬಿರಿ. ಸಿಪ್ಪೆ ತೆಗೆದು ತುಂಡರಿಸಿದ ಆಲೂಗಡ್ಡೆ, ಅವರೆ, ಬಟಾಣಿ, ಎರಡು ನೀರುಳ್ಳಿ ಚೂರು ಕುಕ್ಕರ್‌ಗೆ ಹಾಕಿ ಬೇಯಿಸಿರಿ. ನಂತರ ರುಬ್ಬಿದ ಮಸಾಲೆ, ಉಪ್ಪು ಹಾಕಿ ಕುದಿಸಿರಿ. ಒಂದು ನೀರುಳ್ಳಿ ಚೂರನ್ನು ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕಾಯಿಸಿ ಬೇಯಿಸಿಟ್ಟ ಅವರೆ, ಬಟಾಣಿ ಹಾಕಿ ಮುಚ್ಚಿಡಿ. ಅನ್ನದೊಂದಿಗೆ, ದೋಸೆ, ಇಡ್ಲಿ, ಚಪಾತಿಯೊಂದಿಗೆ ರುಚಿ ನೋಡಿರಿ.

ಎಸ್‌. ಜಯಶ್ರೀ ಶೆಣೈ

Advertisement

Udayavani is now on Telegram. Click here to join our channel and stay updated with the latest news.

Next