Advertisement
ಬಿಆರ್‌ಟಿಎಸ್ ಪ್ರತ್ಯೇಕ ಪಥದಲ್ಲಿರುವ ಬಸ್ ನಿಲ್ದಾಣಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಶೌಚಾಲಯ ಕೊರತೆ ಅನುಭವಿಸುತ್ತಿದ್ದರು. ಪುರುಷ ಸಿಬ್ಬಂದಿಗಿಂತ ಮಹಿಳಾ ಸಿಬ್ಬಂದಿ ಮಾತ್ರ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದರು. ನಗರ ಪ್ರದೇಶಗಳಲ್ಲಿನ ನಿಲ್ದಾಣದ ಮಹಿಳಾ ಸಿಬ್ಬಂದಿ ಅನಿವಾರ್ಯ ಯಾವುದಾದರೂ ಹೊಟೇಲ್, ಕಚೇರಿಗಳನ್ನು ಆಶ್ರಯಿಸಿದ್ದರು. ಆದರೆ ಉಣಕಲ್ಲ ಕೆರೆ ನಿಲ್ದಾಣದಿಂದ ಧಾರವಾಡದ ಗಾಂಧಿನಗರದ ನಿಲ್ದಾಣವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಅನಿವಾರ್ಯಎಂಟು ಗಂಟೆಗಳ ಕಾಲ ಎಲ್ಲವನ್ನೂ ಸಹಿಸಿಕೊಂಡು ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಇತ್ತು. ಆದರೆ ಸಂಚಾರಿ ಶೌಚಾಲಯ ವ್ಯವಸ್ಥೆಯಿಂದ ಸಿಬ್ಬಂದಿ ಸಂಕಟಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಂತಾಗಿದೆ.
Related Articles
Advertisement
ಪತ್ರ ವ್ಯವಹಾರಕ್ಕೆ ಸೀಮಿತ: ಸಿಬ್ಬಂದಿಗೆ ಮೂಲ ಸೌಲಭ್ಯ ಕಲ್ಪಿಸದ ಕುರಿತು ಸಾಕಷ್ಟು ಚರ್ಚೆಗಳ ನಂತರ ಬಿಆರ್ ಟಿಎಸ್ ವತಿಯಿಂದ ಶೌಚಾಲಯ ನಿರ್ಮಿಸುವ ಇಂಗಿತ ವ್ಯಕ್ತವಾಗಿತ್ತು. ಆದರೆ ಇದಕ್ಕಾಗಿ ಪ್ರತ್ಯೇಕವಾಗಿ ಭೂ ಸ್ವಾಧೀನ ಪಡಿಸಿಕೊಳ್ಳುವುದು ಸುಲಭವಲ್ಲ. ಇನ್ನು ನಗರ ಪ್ರದೇಶದ ನಂತರ ಶೌಚಾಲಯ ನಿರ್ಮಾಣಕ್ಕೆ ಬೇಕಾದ ಯುಜಿಡಿ ಇರಲಿಲ್ಲ. ಪಾಲಿಕೆಯಿಂದಲೂ ಕೂಡ ಇ-ಶೌಚಾಲಯದ ವ್ಯವಸ್ಥೆ ಜಾರಿಗೆ ತರುವ ಚರ್ಚೆಗಳು ನಡೆದವು. ಆದರೆ ಇದಕ್ಕೇ ಬೇಕಾದ ಅನುದಾನದ ಪ್ರಶ್ನೆ ಎದುರಾಯಿತು. ನಿರ್ಮಾಣದ ನಂತರ ನಿರ್ವಹಣೆ ಯಾರದ್ದು ಎನ್ನುವ ಗೊಂದಲ ನಿರ್ಮಾಣವಾಯಿತು. ಇದು ಸರಕಾರದ ಹಂತಕ್ಕೂ ಹೋಗಿತ್ತು. ಈ ಹಗ್ಗಜಗ್ಗಾಟದಿಂದ ಬಿಆರ್‌ಟಿಎಸ್ ಕಾರಿಡಾರ್‌ದುದ್ದಕ್ಕೂ ಶೌಚಾಲಯ ನಿರ್ಮಿಸಬೇಕೆನ್ನುವ ಚರ್ಚೆ ಕೇವಲ ಕಡತಕ್ಕೆ ಸೀಮಿತವಾಯಿತು. ಹೀಗಾಗಿ ನಾಲ್ಕು ವರ್ಷಗಳಿಂದ ಮಹಿಳಾ ಸಿಬ್ಬಂದಿ ಬೇಡಿಕೆ ಕೇವಲ ಮನವಿಗೆ ಮೀಸಲು ಎನ್ನುವಂತಾಯಿತು.
ಕೋವಿಡ್ ಸಂದರ್ಭದಲ್ಲಿ ವಾಯವ್ಯ ಸಾರಿಗೆ ಸಂಸ್ಥೆ ಅನುಪಯುಕ್ತ ಬಸ್‌ಗಳಿಂದ ಕೋವಿಡ್ ತಪಾಸಣೆ, ಪರೀಕ್ಷೆ, ಲಸಿಕೆ ಹೀಗೆ ವಿವಿಧ ಕಾರ್ಯಗಳಿಗೆ ಸಿದ್ಧಪಡಿಸಿ ಸಂಬಂಧಿಸಿದ ಇಲಾಖೆಗಳಿಗೆ ನೀಡಿದ್ದರು. ಅದರಲ್ಲಿ ಈ ಸಂಚಾರಿ ಶೌಚಾಲಯವೂ ಒಂದಾಗಿತ್ತು ಈ ಬಸ್‌ನ್ನು ಸಂಪೂರ್ಣವಾಗಿ ಪರಿವರ್ತಿಸಿದ ಕಾರಣ ಇತರೆ ಕಾರ್ಯಕ್ಕೆ ಬಳಸಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಕೋವಿಡ್ ನಂತರದಲ್ಲಿ ಈ ಬಸ್ ಅನಿವಾರ್ಯತೆ ಇರಲಿಲ್ಲ. ಹೀಗಾಗಿ ನಗರ ಸಾರಿಗೆ ವಿಭಾಗದ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಇದರ ಸದ್ಬಳಕೆ ಹಾಗೂ ಅನಿವಾರ್ಯತೆ ಕುರಿತು ಮನವಿ ಮಾಡಿದಾಗ ಬಿಆರ್‌ಟಿಎಸ್ ಸಿಬ್ಬಂದಿ ಬಳಕೆಗೆ ನೀಡಲಾಗಿದೆ. ಇದರಿಂದಾಗುವ ಕಳೆದ ನಾಲ್ಕು ವರ್ಷದ ಬೇಡಿಕೆಗೆ ಪರಿಹಾರ ದೊರೆತಂತಾಗಿದೆ.
ಟಿಕೆಟ್ ಕೌಂಟರ್‌ಗಳ ಸಿಬ್ಬಂದಿ ಆರಂಭದಿಂದ ಶೌಚಾಲಯಕ್ಕೆ ಬೇಡಿಕೆ ಸಲ್ಲಿಸಿದ್ದರು. ಹೀಗಾಗಿ ಸಂಸ್ಥೆಯಿಂದಲೇ ನಿರ್ಮಿಸಿದ್ದ ಸಂಚಾರಿ ಶೌಚಾಲಯ ಬಸ್ ಇತ್ತು. ಈ ಕುರಿತು ಮಾನ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದಾಗ ಬಳಸಲು ಅನುಮತಿ ನೀಡಿದರು. ಇದರಿಂದ ಸಿಬ್ಬಂದಿಗೆ ಸಾಕಷ್ಟು ಅನುಕೂಲವಾಗಿದೆ. ಎರಡು ಪಾಳೆಯಲ್ಲಿರುವ ಬರುವ ಸಿಬ್ಬಂದಿ ಅನುಕೂಲವಾಗುವ ಸಮಯದಲ್ಲಿ ಸಂಚಾರ ಮಾಡುತ್ತಿದೆ. -ವಿವೇಕಾನಂದ ವಿಶ್ವಜ್ಞ, ವಿಭಾಗೀಯ ನಿಯಂತ್ರಣಾಧಿಕಾರಿ, ನಗರ ಸಾರಿಗೆ ವಿಭಾಗ
ಕಾರಿಡಾರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಶೌಚಾಲಯ ನಿರ್ಮಿಸುವ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದವು. ಆದರೆ ಯುಜಿಡಿ, ಬೇಕಾದ ಸ್ಥಳ, ನಿರ್ವಹಣೆಯಂತಹ ಕೆಲ ಕಾರಣಗಳಿಂದ ಶಾಶ್ವತ ಪರಿಹಾರದ ಪ್ರಯತ್ನಗಳು ಕೈಗೂಡಲಿಲ್ಲ. ಇದೀಗ ವಾಯವ್ಯ ಸಾರಿಗೆ ಸಂಸ್ಥೆಯಿಂದ ಸಂಚಾರಿ ಶೌಚಾಲಯ ವ್ಯವಸ್ಥೆ ಕಲ್ಪಿಸಿರುವ ಕಾರಣ ಅಲ್ಲಿನ ಸಿಬ್ಬಂದಿ ಸಾಕಷ್ಟು ಅನುಕೂಲವಾಗಿದೆ. -ಮಂಜುನಾಥ ಜೆಡೆನವರ, ಸಾರ್ವಜನಿಕ ಸಂಪರ್ಕಾಧಿಕಾರಿ, ಬಿಆರ್‌ಟಿಎಸ್
-ಹೇಮರಡ್ಡಿ ಸೈದಾಪುರ