ಮೈಸೂರು: ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್-ಕರ್ನಾಟಕ ವತಿಯಿಂದ ಜ.18 ಹಾಗೂ 19ರಂದು ಎರಡನೇ ಬಾರಿಗೆ ಮೈಸೂರಿ ನಲ್ಲಿ ರಾಜ್ಯಮಟ್ಟದ ವಿದ್ಯಾರ್ಥಿ ಸಂಸ್ಕೃತಿ ಚಳವಳಿ ಆಯೋಜಿಸಲಾಗಿದೆ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಹರ್ಷ ನಾರಾಯಣ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ-ಸಂಸ್ಕೃತಿ ಒಂದು ದಿನದ ಹಬ್ಬವಲ್ಲ. ಜೀವನವನ್ನು ರೂಪಿಸುವ ಜೀವನದಿ, ಆದ್ದರಿಂದ ಎಬಿವಿಪಿ ರಾಜ್ಯದ ಎಲ್ಲಾ ಸೃಜನಶೀಲ ಕಾಲೇಜುಗಳ ಸೃಜನಶೀಲ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ರಾಜ್ಯದಲ್ಲಿ ಒಂದು ವಿನೂತನ ವಿದ್ಯಾರ್ಥಿ ಸಂಸ್ಕೃತಿ ಚಳವಳಿ ಕಟ್ಟಲು ಮುಂದಾಗಿದೆ.
ಕಳೆದ ವರ್ಷ ಮೊಟ್ಟ ಮೊದಲ ಬಾರಿಗೆ ವಿದ್ಯಾರ್ಥಿ ಸಂಸ್ಕೃತಿ ಚಳವಳಿ ಆಯೋಜಿಸಿದಾಗರಾಜ್ಯದೆಲ್ಲೆಡೆಯಿಂದ ಒಟ್ಟು 1230 ಸ್ಪರ್ಧಾಳು ಗಳು ಪಾಲ್ಗೊಂಡಿದ್ದರು. ಈ ವರ್ಷವು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ಎರಡು ದಿನಗಳ ವಿದ್ಯಾರ್ಥಿ ಸಂಸ್ಕೃತಿ ಚಳವಳಿ ಆಯೋಜಿಸಿದ್ದು, ಸಮೂಹ ಸ್ಪರ್ಧೆ, ವೈಯಕ್ತಿಕ ಸ್ಪರ್ಧೆಯಲ್ಲಿ ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಛಾಯಾಗ್ರಹಣ ಸ್ಪರ್ಧೆಗಳ ಜೊತೆಗೆ ವಿದ್ಯಾರ್ಥಿ ಚಳವಳಿ ಒಂದು ಅವಲೋಕನ ಕುರಿತು ವಿಚಾರಸಂಕಿರಣ, ವಿದ್ಯಾರ್ಥಿ ಸಂಸ್ಕೃತಿ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ, ದಿವ್ಯಾಂಗಪ್ರತಿಭೆಗಳಿಗೆ, ಸಾಮಾಜಿಕ ನೇತೃತ್ವದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವಿದೆ. ಈಗಾಗಲೇ ಸುಮಾರು 1ಸಾವಿರ ಮಂದಿ ಹೆಸರು ನೋಂದಾಯಿಸಿ ಕೊಂಡಿದ್ದು, ಇನ್ನೂ 500 ಮಂದಿ ಹೆಸರು ನೋಂದಾಯಿಸಿಕೊಳ್ಳುವ ನಿರೀಕ್ಷೆ ಇದೆ. ವಿವಿಧ ಸ್ಪರ್ಧೆಗಳ ವಿಜೇತರಿಗೆ ಸುಮಾರು 1.5ಲಕ್ಷ ರೂ. ಗಳಷ್ಟು ನಗದು ಬಹುಮಾನ ನೀಡಲಾಗುತ್ತಿದೆ. ಎರಡು ದಿನಗಳ ವಿದ್ಯಾರ್ಥಿ ಸಂಸ್ಕೃತಿ ಚಳವಳಿಯನ್ನು ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಉದ್ಘಾಟಿಸಲಿದ್ದು, ಸಮಾರೋಪ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಕೆ.ಕಲ್ಯಾಣ್ ಭಾಗವಹಿ ಸಲಿದ್ದಾರೆ ಎಂದು ವಿವರಿಸಿದರು.
ಎಬಿವಿಪಿ ವಿಭಾಗ ಸಂಚಾಲಕ ರಾಕೇಶ್, ಜಿಲ್ಲಾ ಸಂಚಾಲಕ ಗೌತಮ್, ನಗರ ಸಂಘಟನಾ ಕಾರ್ಯದರ್ಶಿ ಶರತ್, ನಗರ ಸಹ ಕಾರ್ಯದರ್ಶಿ ಪ್ರಜ್ಞಾ ಸುದ್ದಿಗೋಷ್ಠಿಯಲ್ಲಿದ್ದರು.