Advertisement
ಹಾಗೆಯೇ ಇದಕ್ಕೆ ಸಂಬಂಧಿಸಿ ತಮಗೂ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಮತ್ತು ಡಿ.ಕೆ. ಶಿವಕುಮಾರ್ ಜತೆಗೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೋವನ್ನು ದೇವರಾಜೇಗೌಡ ಬಿಡುಗಡೆ ಮಾಡಿದ್ದಾರೆ. ಜತೆಗೆ ಪ್ರಜ್ವಲ್ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ತಮ್ಮ ನಿವಾಸಕ್ಕೆ ಬಂದಿದ್ದ ವೀಡಿಯೋ ಬಿಡುಗಡೆ ಮಾಡಿ ಪೆನ್‌ಡ್ರೈವ್ ಹಂಚಿಕೆಗೂ ತಮಗೂ ಸಂಬಂಧವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಪೆನ್‌ಡ್ರೈವ್ ಹೇಗೆ ಸಿದ್ಧ ಗೊಂಡಿತು, ಹೊಳೆನರಸೀಪುರಕ್ಕೆ ಹೇಗೆ ಹೋಯಿತು, ಶ್ರೇಯಸ್ ಪಟೇಲ್‌ಗೆ ಏನೆಲ್ಲ ನಿರ್ದೇಶನ ಇತ್ತು ಎಲ್ಲವೂ ನನಗೆ ಗೊತ್ತು. ನಾನು ನನಗೆ ತಿಳಿದಿದ್ದ ಮಾಹಿತಿಯನ್ನು ವಿಶೇಷ ತನಿಖಾ ತಂಡಕ್ಕೆ ನೀಡಿದ್ದೆ. ಆದರೆ ತನಿಖಾ ತಂಡದಲ್ಲಿರುವ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು, ಡಿ.ಕೆ. ಶಿವಕುಮಾರ್ ಅವರ ವಿರುದ್ಧವಾಗಿ ಎಸ್‌ಐಟಿಗೆ ನೀಡಿರುವ ಹೇಳಿಕೆಯನ್ನು ಹಿಂಪಡೆಯಿರಿ. ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ. ಶಿವಕುಮಾರ್ ವಿರುದ್ಧ ನೀಡಿದ್ದ ಹೇಳಿಕೆಯ ಪ್ಯಾರಾವನ್ನು ಡಿಲೀಟ್ ಮಾಡೋಣ ಎಂದು ತಾಕೀತು ಮಾಡಿದ್ದರು ಎಂದು ಮತ್ತೊಂದು ಗಂಭೀರ ಆರೋಪವನ್ನು ದೇವರಾಜೇ ಗೌಡ ಮಾಡಿದ್ದಾರೆ.
Related Articles
ರಾಜ್ಯ ಸರಕಾರ, ಸಿಎಂ, ಡಿಸಿಎಂ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ಗೌಪ್ಯ ಸಭೆ ನಡೆಸಲಾ ಗುತ್ತಿದೆ. ಗೌಪ್ಯ ಸಭೆ ನಡೆಸಿ ಯಾರು ಯಾರನ್ನು ಆರೋಪಿಯನ್ನಾಗಿ ಮಾಡಬೇಕು ಎನ್ನುವ ಸೂಚನೆ ಕೊಟ್ಟಿದ್ದಾರೆ. ನಾನು ಆರಂಭದಲ್ಲಿ ಎಸ್‌ಐಟಿ ತನಿಖೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದೆ. ಆದರೆ 3 ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳಿಂದ ನನ್ನ ವಿಶ್ವಾಸಕ್ಕೆ ಧಕ್ಕೆ ಉಂಟಾಗಿದೆ. ರಿಮೋಟ್ ಕಂಟ್ರೋಲ್ಡ್ ತನಿಖೆ ನಡೆಯತ್ತಿದೆ. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
Advertisement
ಎಸ್‌ಐಟಿ ಅಧಿಕಾರಿಗಳಿಗೆ ಎಲ್ಲವನ್ನೂ ಕೊಟ್ಟಿದ್ದೇನೆ. ತನಿಖಾಧಿಕಾರಿ ಎಸ್‌ಪಿ ಮುಂದೆ ಪ್ರಮುಖ ಅಂಶಗಳನ್ನು ಉಲ್ಲೇಖ ಮಾಡಿದ್ದೇನೆ. ಕಾರ್ತಿಕ್ ನನ್ನ ಮನೆಗೆ ಯಾವಾಗ ಬಂದಿದ್ದು ಎಂಬ ವೀಡಿಯೋ ನನ್ನ ಬಳಿ ಇದೆ. ಪೆನ್ ಡ್ರೈವ್ ಹೊಳೆನರಸೀಪುರದಿಂದ ಪರಾಜಿತ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ತಲುಪಿತ್ತು. ಆತನ ಗುರು ಪುಟ್ಟಿ ಅಲಿಯಾಸ್ ಪುಟ್ಟರಾಜು ಅವರು ಅದನ್ನು ಬೆಂಗಳೂರಿಗೆ ತಂದರು. ಅವರು ಯಾರನ್ನು ಭೇಟಿಯಾದರು ಎಂಬ ಬಗ್ಗೆ ದಾಖಲೆ ನನ್ನ ಬಳಿ ಇದೆ ಎಂದು ದೇವರಾಜೇಗೌಡ ಹೇಳಿದರು.
ಪೆನ್ ಡ್ರೈವ್ ಹಂಚಿಕೆ ಮಾಡಿರುವ ಸಂಬಂಧ ನಾನು ಕೆಲವು ಹೆಸರುಗಳನ್ನು ದೂರವಾಣಿ ನಂಬರ್ ಸಹಿತ ನೀಡಿದ್ದೆ. ಆದರೆ ಅವರ ಬಗ್ಗೆ ತನಿಖೆಯೇ ಆಗಿಲ್ಲ. ಅವರೆಲ್ಲ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ, ಇದು ತನಿಖೆ ದಾರಿ ತಪ್ಪಿರುವುದನ್ನು ಸಾಬೀತು ಪಡಿಸುತ್ತದೆ. ಹಾಗೆಯೇ ಕಾರ್ತಿಕ್ ಎಲ್ಲಿದ್ದಾನೆ ಎಂಬ ಮಾಹಿತಿ ತಮಗಿರುವುದಾಗಿ ಶಿವರಾಮೇ ಗೌಡರು ನನಗೆ ತಿಳಿಸಿದ್ದಾರೆ ಎಂದರು.
ಶಿವರಾಮೇಗೌಡ ಮಧ್ಯವರ್ತಿಶಿವರಾಮೇಗೌಡ ಕರೆ ಮಾಡಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಹೇಳಬೇಡಿ ಎಂದು ಸೂಚನೆ ನೀಡಿದ್ದಾರೆ ಎಂದು ಆರೋಪ ಮಾಡಿದ ದೇವರಾಜೇಗೌಡ, ಅದಕ್ಕೆ ಸಂಬಂಧಪಟ್ಟ ಆಡಿಯೋವನ್ನು ಬಿಡುಗಡೆ ಮಾಡಿದರು. ಈ ಪ್ರಕರಣದಲ್ಲಿ ಶಿವರಾಮೇಗೌಡ ಮಧ್ಯವರ್ತಿ. ಡಿ.ಕೆ. ಶಿವಕುಮಾರ್ ಪರವಾಗಿ ಕೆಲಸ ಮಾಡಿದ್ದಾರೆ. ನನ್ನನ್ನು ಹತ್ತಕ್ಕೂ ಹೆಚ್ಚು ಸಲ ಸ್ಟಾರ್ ಹೋಟೆಲ್‌ಗಳಲ್ಲಿ ಭೇಟಿಯಾಗಿದ್ದಾರೆ ಎಂದು ದೇವರಾಜೇಗೌಡ ಆರೋಪಿಸಿದರು. ಪ್ರಕರಣದಲ್ಲಿನ ನೈಜ ಸಂತ್ರಸ್ತರು ಬೇರೆಯೇ ಇದ್ದಾರೆ. ಸಂತ್ರಸ್ತರ ಸಂಖ್ಯೆಗೆ ಸಂಬಂಧಿಸಿ ತಪ್ಪು ಮಾಹಿತಿ ನೀಡಲಾಗಿದೆ ಎಂದರು. ಅಧಿಕಾರಿ ಹೆಸರು ಹೇಳಲು ಹಿಂಜರಿಕೆ
ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಹೇಳಿಕೆಯಿಂದ ಕೈಬಿಡುವಂತೆ ಸೂಚಿಸಿದ ಐಪಿಎಸ್ ಅಧಿಕಾರಿ ಯಾರು ಎಂದು ಹೇಳಲು ದೇವರಾಜೇಗೌಡ ಆರಂಭದಲ್ಲಿ ಹಿಂಜರಿದರು. ಆದರೆ ಸುದ್ದಿಗಾರರು ಪಟ್ಟು ಹಿಡಿದಾಗ ಇಬ್ಬರು ಮಹಿಳಾ ಐಪಿಎಸ್ ಅಧಿಕಾರಿಗಳಲ್ಲಿ ಸಣ್ಣಕ್ಕೆ ಇರುವ ಅಧಿಕಾರಿ. ಅವರು ಸಿವಿಲ್ ಡ್ರೆಸ್‌ನಲ್ಲಿ ಇದ್ದುದರಿಂದ ಅವರ ಹೆಸರು ಗೊತ್ತಾಗಿಲ್ಲ ಎಂದರು. ಆದರೆ ಆ ಬಳಿಕ ಮತ್ತೆ ಪತ್ರಕರ್ತರು ಪ್ರಶ್ನಿಸಿದಾಗ ಅವರು ಚಿತ್ರ ಇದ್ದರೆ ಹೇಳಬಹುದು ಎಂದರು. ಆಗ ಪತ್ರಕರ್ತರೊಬ್ಬರು ಅಧಿಕಾರಿಗಳ ಭಾವಚಿತ್ರ ತೋರಿಸಿದಾಗ ಸುಮನ್
ಡಿ. ಪನ್ನೇಕರ್ ಅವರ ಚಿತ್ರವನ್ನು ಕಂಡು ಇವರೇ ಎಂದರು. ಪತ್ರಕರ್ತರು ಇವರು ಸುಮನ್ ಡಿ. ಪನ್ನೇಕರ್ ಎಂದಾಗ ನನಗೆ ಅವರ ಹೆಸರು ಗೊತ್ತಿಲ್ಲ ಎಂದರು. ಬಿಜೆಪಿ ಜೆಡಿಎಸ್ ಮೈತ್ರಿಗೆ ಮಸಿ ಬಳಿಯುವ ಉದ್ದೇಶದಿಂದ ಪೆನ್ ಡ್ರೈವ್ ಹಂಚಿಕೆ ಮಾಡಲಾಗಿದೆ. ಇವರ ಮುಖ್ಯ ಗುರಿ ನರೇಂದ್ರ ಮೋದಿ. ಅವರ ಹೆಸರಿಗೆ ಮಸಿ ಬಳಿಯಲು ಈ ಪ್ರಕರಣ ಸೃಷ್ಟಿಸಲಾಗಿದೆ.
-ದೇವರಾಜೇ ಗೌಡ, ಬಿಜೆಪಿ ಮುಖಂಡ