Advertisement
ಇಂದು ನಮ್ಮ ಮುಂದೆ ಶುಭ್ರಶ್ವೇತವಸನಧಾರಿ ಹಸನ್ಮುಖೀ ಸಾಹಿತ್ಯಾರಾಧಕ ಪ್ರೊ. ಎಂ. ರಾಮಚಂದ್ರರು ಇಲ್ಲ. ಡಿಸೆಂಬರ್ 20ರಂದು ಉಷಃಕಾಲಕ್ಕೆ ಒಂದಿಷ್ಟು ಪೂರ್ವದಲ್ಲಿ ನಮ್ಮನ್ನಗಲಿದರು. ಒಂದು ವಾರದ ಮೊದಲು ಅವರು ಹೇಳಿದ ಒಂದು ಮಾತು ಹೀಗಿತ್ತು : “”ಬರುವ 19ನೇ ತಾರೀಕಿನ ಅನಂತರ ನಾನು ನಿಮಗೆ ಕಾಣಸಿಗುವುದಿಲ್ಲ”. ಪ್ರೊ. ರಾಮಚಂದ್ರರು ಮೇಲಿನ ಮಾತನ್ನು ಹೇಳಿದ ಸಂದರ್ಭ ಬೇರೆಯಾದರೂ ಇಂದು ನೆನಪಿಸಿಕೊಳ್ಳುವಾಗ ದೈವವೇ ಅವರ ಬಾಯಿಯಿಂದ ಈ ಮಾತನ್ನಾಡಿಸಿತೆ? ಎಂಬ ಸಂದೇಹ ಬಾರದಿರದು.
Related Articles
Advertisement
ವಿದ್ಯಾವಂತನ ವಿನಯತಮಗೆ 60 ವರ್ಷವಾದಾಗ ಕೃತಿ-ಆಕೃತಿ ಎಂಬ ಒಂದು ಕಿರುಹೊತ್ತಗೆಯನ್ನು ಸಿದ್ಧಪಡಿಸಿ ಅದರಲ್ಲಿ ಹಿರಿಯರು ಅವರಿಗೆ ಬರೆದ ಪತ್ರಗಳನ್ನೂ ಅವರ ಕೃತಿಗಳ ಬಗೆಗಿನ ಕೆಲವು ಪರಿಚಯ ಲೇಖನಗಳನ್ನೂ ಸೇರಿಸಿದ್ದರು.ಮಣಿಪಾಲ ಸಾಹಿತ್ಯಸಂಘವು ಈ ಕಿರುಹೊತ್ತಗೆಯನ್ನು ಪ್ರಕಟಿಸಿತು. ಅದರಲ್ಲಿನ ಕೃತಾರ್ಥ-ಕೃತಜ್ಞ ಎಂಬ ಲೇಖನದ ಕೊನೆಗೆ ಅವರು ಬರೆದ ಮಾತುಗಳು ಹೀಗಿವೆ : ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು ಎಂಬುದೊಂದು ಕಾವ್ಯೋಕ್ತಿ. ನಾನು ಶಿವಯೋಗಿಯಲ್ಲ; ಮನುಷ್ಯಸಾಮಾನ್ಯ, ನಿವೃತ್ತ ಅಧ್ಯಾಪಕ. ಆದರೆ, ನಿವೃತ್ತ ಜೀವನವನ್ನು ಉಪಯುಕ್ತ ಕ್ಷೇತ್ರಗಳಲ್ಲಿ ಸಾರ್ಥಕಗೊಳಿಸಬೇಕೆಂಬುದೇ ನನ್ನ ಸಂಕಲ್ಪ. ಅದು ಕಾರ್ಯರೂಪವನ್ನು ತಾಳುವಂತಾಗಲು ಹಿರಿಯರ, ಹಿತವಂದಿಗರ, ಗೆಳೆಯರ ಹರಕೆ ಅಕ್ಕರೆ ಹಾರೈಕೆಗಳು. ನನ್ನ ಕಣೆ ಕಾಮನರಕ್ಷೆ, ಬೆನೆ ಭೀಮನ ರಕ್ಷೆ, ಮುಂಗೈ ಮುರಾರಿ ರಕ್ಷೆಯಾಗಿ ಒದಗಿಬರಲಿ ಎಂದು ಕೋರುತ್ತೇನೆ. ಗುರು ಸೇಡಿಯಾಪು ಅವರು ಶಿಷ್ಯ ರಾಮಚಂದ್ರರಿಗೆ ಬರೆದ ಪತ್ರದಲ್ಲಿ ಪ್ರಿಯಚಂದ್ರಮಾ ಎಂಬ ಸಂಬೋಧನೆಯಿರುತ್ತಿತ್ತು. ಗುರುಕೃಪೆಯ ಈ ನೂತನ ನಾಮಧೇಯವನ್ನು ಆಶೀರ್ವಾದ ರೂಪದಲ್ಲಿ ರಾಮಚಂದ್ರರು ಪಡೆದರು. ಗುರು ಸೇಡಿಯಾಪು ಅವರ ಸಂಸ್ಮರಣ ಕಾರ್ಯಕ್ರಮಗಳನ್ನು ಮಾತ್ರವಲ್ಲ ಕನ್ನಡ ಸಾಹಿತ್ಯದ ಹಿರಿಯ ಗುರುಗಳೆಲ್ಲರ ಅಭಿನಂದನ ಮತ್ತು ಸಂಸ್ಮರಣ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ರಾಮಚಂದ್ರರು ದುಡಿದರು. ಇದು ಅವರಿಗೆ ತುಂಬ ಪ್ರಿಯವಾದ ಕೆಲಸವಾಗಿತ್ತು. ಗುರು ಸೇಡಿಯಾಪು ಅವರ 106 ಪತ್ರಗಳನ್ನು ಒಟ್ಟು ಸೇರಿಸಿ ಪತ್ರಾವಳಿ ಎಂಬ ಕೃತಿಯನ್ನು 1991ರಲ್ಲಿ ಪ್ರಕಟಿಸಿದ್ದರು. ರಾಮಚಂದ್ರರ ಮೊದಲನೆಯ ಪುಸ್ತಕ ಸೇಡಿಯಾಪು ಅವರ ಬಗೆಗೇ ಆಗಿತ್ತು (1965). 20ಕ್ಕೂ ಹೆಚ್ಚು ಕೃತಿಗಳನ್ನು ಬರೆದು ಮತ್ತು ಸಂಪಾದಿಸಿ ಸಾಹಿತ್ಯಲೋಕಕ್ಕೆ ನೀಡಿದ ರಾಮಚಂದ್ರರು ಸಿದ್ಧಗೊಳ್ಳುತ್ತಿದ್ದ ತಮ್ಮ ಎರಡು ಕೃತಿಗಳಿಗೆ ಮೊದಲ ಮಾತುಗಳನ್ನು ಬರೆಯುವ ಅವಕಾಶವನ್ನು ವಿಧಿ ಅವರಿಗೆ ನೀಡಲಿಲ್ಲ. ಪ್ರೊ. ರಾಮಚಂದ್ರರು ಅಧ್ಯಾಪಕರಾಗಿ ನೂರಾರು ಶಿಷ್ಯರಿಗೆ ವಿದ್ಯಾದಾನ ಮಾಡಿದವರು; ಸಾಹಿತ್ಯರಚನೆ ಮತ್ತು ವಿಮರ್ಶೆಯ ಬಗೆಗೆ ತಮ್ಮದೇ ದೃಷ್ಟಿಕೋನವನ್ನಿರಿಸಿಕೊಂಡವರು; ಸಾಹಿತ್ಯದ ಪಂಥ-ಪಂಗಡಗಳಿಂದ ಮೀರಿ ನಿಂತವರು; ಸಾಹಿತಿಗಳ ನಿರಂತರ ಸಂಪರ್ಕದಲ್ಲಿದ್ದವರು; ತಮ್ಮ ಪರಿಸರದ ಜನತೆ ಸಾಹಿತ್ಯದ ಸುಗಂಧದಿಂದ ಸಂಭ್ರಮಿತರಾಗಬೇಕೆಂದೂ ಉತ್ಸಾಹಿತರಾಗಬೇಕೆಂದೂ ತನ್ಮೂಲಕ ನೆಮ್ಮದಿಯ ಬಾಳನ್ನು ಕಾಣಬೇಕೆಂದೂ ಬಯಸಿದವರು. ತಮ್ಮ ಅನುಭವಗಳನ್ನು ನೆನಪಿನ ಸುರಗಿ ಎಂಬ ಕೃತಿಯಲ್ಲಿ ದಾಖಲಿಸಿದ್ದರೂ ಸಾಹಿತ್ಯಲೋಕದ ಇನ್ನಷ್ಟು ವೈಶಿಷ್ಟ್ಯಪೂರ್ಣವಾದ ಅನುಭವಗಳನ್ನು ದಾಖಲಿಸಬೇಕೆಂಬ ನಮ್ಮ ಉಡುಗೆಯ ಶುಭ್ರ ಶುಚಿತ್ವದಂತೆ ಮಾತು- ಸಾಹಿತ್ಯ-ನಡೆನುಡಿಗಳೂ ಶುಭ್ರವಾಗಿರುವಂತೆ ಕೊನೆಯವರೆಗೆ ಜಾಗರೂಕರಾಗಿ ನಡೆದ ಅವರ ವ್ಯಕ್ತಿತ್ವ ನಿಜಕ್ಕೂ ಹಿರಿದು. ಪಾದೇಕಲ್ಲು ವಿಷ್ಣು ಭಟ್ಟ