ಸಿಂಧನೂರು: ಮುಂದಿನ ವಿಧಾನಸಭೆ ಚುನಾವಣೆ ಪೂರ್ವವೇ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಕಾಂಗ್ರೆಸ್ ಬಲವರ್ಧನೆಗೆ ಕಸರತ್ತು ಆರಂಭವಾಗಿದ್ದು, ಜೆಡಿಎಸ್ ಹಾಗೂ ಇತರೆ ಪಕ್ಷದ ಮುಖಂಡರನ್ನು ಸೆಳೆಯುವ ಪ್ರಯತ್ನ ಚುರುಕುಗೊಂಡಿದೆ.
ಆರಂಭಿಕ ಮುನ್ಸೂಚನೆಯಾಗಿ ಎಚ್. ಡಿ. ಕುಮಾರಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷ ವೆಂಕೋಬ ಜಿನ್ನದ್ ಅವರನ್ನು ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಬಾದರ್ಲಿ ಜಿಪಂ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ ಅವರು ಕಲ್ಲೂರ ಗ್ರಾಮಕ್ಕೆ ತೆರಳಿ ಜೆಡಿಎಸ್ ಪ್ರಭಾವಿ ಯುವ ನಾಯಕರನ್ನು ಸೆಳೆಯುವಲ್ಲಿ ಯಶಸ್ಸು ಕಂಡಿದ್ದಾರೆ.
ಪಕ್ಷ ಸೇರ್ಪಡೆ ಪ್ರಯತ್ನ
ಜೆಡಿಎಸ್ ಹಾಗೂ ಬಿಜೆಪಿಯಲ್ಲಿನ ಮುಖಂಡರನ್ನು ಕಾಂಗ್ರೆಸ್‌ಗೆ ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಈಗಾಗಲೇ ಪ್ರಯತ್ನ ಆರಂಭಿಸಿದೆ. ಅತೃಪ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮುಂದಿನ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ತಾಲೀಮು ಆರಂಭಿಸಲಾಗಿದೆ. ಇದರ ಪ್ರಯತ್ನ ಬಿರುಸಿನಿಂದ ಸಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟಿಸಿ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರ ಕೈ ಬಲಪಡಿಸುವುದಾಗಿ ಪಕ್ಷದ ಮುಖಂಡರು ಹೇಳಿಕೊಂಡಿದ್ದಾರೆ.
ಕಲ್ಲೂರಿನಲ್ಲಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖಂಡರಾದ ವೀರಭದ್ರಗೌಡ ಬೆಳ್ಳಿಗನೂರು, ಅಮರೇಗೌಡ ಬೊಮ್ಮನಾಳ, ಬಸವರಾಜ್ ನಿಟ್ಟೂರು, ಶಿವನಗೌಡ ಎಲೆಕೂಡ್ಲಿಗಿ, ಭೀಮರಾಯ ಗೌಡ ಬಾವಿಕಟ್ಟಿ, ನರಸರೆಡ್ಡಿ ಬಾವಿಕಟ್ಟಿ, ಆದನಗೌಡ ಸಾಹುಕಾರ್, ಗ್ರಾ.ಪಂ.ಸದಸ್ಯರಾದ ಬಸನಗೌಡ, ಹನುಮಂತ, ಸಾಬಮ್ಮ ಸೇರಿದಂತೆ ಮುಖಂಡರು ಇದ್ದರು.
ಹಂಪನಗೌಡ ಬಾದರ್ಲಿ ಅವರ ನಾಯಕತ್ವ ಮೆಚ್ಚಿ ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಗಳಿಗೆ ಮನಸೋತು ಹಲವರು ಪಕ್ಷ ಸೇರುತ್ತಿದ್ದಾರೆ. ಅವರನ್ನು ಸ್ವಾಗತಿಸಿ ಕೊಳ್ಳಲು ನಮ್ಮಿಂದ ತಯಾರಿ ಆರಂಭವಾಗಿದೆ.
-ಬಾಬುಗೌಡ ಬಾದರ್ಲಿ, ಜಿಪಂ ಮಾಜಿ ಸದಸ್ಯ