Advertisement

ಒಂದು ಟ್ರಿಪ್ಪಿನ ಕತೆ

07:15 PM Sep 26, 2019 | Team Udayavani |

ತುಮಕೂರಲ್ಲಿ ಡಿಗ್ರಿ ಮುಗಿಸಿಕೊಂಡು ಸ್ನಾತಕೋತ್ತರ ಅಧ್ಯಯನಕ್ಕೆಂದು ಉಜಿರೆಯ ಎಸ್‌ಡಿಎಂ ಕಾಲೇಜಿಗೆ ಅಡ್ಮಿಶನ್‌ ಆಗಿ ಒಂದು ವಾರವಷ್ಟೇ ಕಳೆದಿತ್ತು. ಆಗಲೇ ತರಗತಿಗಳು ಆರಂಭವಾಗಲಿವೆ ಬನ್ನಿ ಎಂದು ಕಾಲೇಜ್‌ ಕಡೆಯಿಂದ ಒಂದು ಮೆಸೇಜ್‌ ಕೂಡ ಬಂತು. ಊರಲ್ಲಿ ಮಳೆಯಿನ್ನೂ ನಿಂತಿರಲಿಲ್ಲ. ಆದರೆ, ನಾನು ಕಾಲೇಜ್‌ಗೆ ಹೋಗಬೇಕಾದದ್ದು ಅನಿವಾರ್ಯ.

Advertisement

ಮನೆಯಲ್ಲಿ ನನ್ನನ್ನು ಹಾಸ್ಟೆಲ್‌ಗೆ ಬಿಟ್ಟು ಬರುವುದು ಯಾರೆಂಬ ಪ್ರಶ್ನೆ ಮೂಡಿದಾಗ ಒಬ್ಬ ಅಣ್ಣ, “ನಾನೇ ಬರುತ್ತೇನೆ’ ಎಂದ. ಜೊತೆಯಲ್ಲಿ ಇನ್ನೊಬ್ಬ ಅಣ್ಣನೂ, “ನಾನೂ ಬರ್ತೀನಿ’ ಎಂದು ದನಿ ಸೇರಿಸಿದ್ದ. ಹಾಗೆ ಹೋಗುತ್ತ ಜಾಲಿಯಾಗಿ ಈ ಮುಂಗಾರು ಮಳೆಯೊಂದಿಗೆ ಒಂದು ಸಣ್ಣ ಟ್ರಿಪ್‌ ಹೊಗೋಣ ಎಂಬ ಯೋಜನೆಯೂ ರೆಡಿ. ನಮ್ಮ ಜೊತೆ ಇನ್ನೂ ನಾಲ್ಕು ಜನರ ದಂಡು ರೆಡಿಯಾಯಿತು.

ಮೊದಲು ಉಜಿರೆಯಲ್ಲಿ ನನ್ನ ಲಗ್ಗೇಜ್‌ ಬ್ಯಾಗನ್ನು ಹಾಸ್ಟೆಲ್‌ನಲ್ಲಿ ಇಟ್ಟು ನಂತರ ಟ್ರಿಪ್‌ ಹೋಗೋಣ ಎಂದುಕೊಂಡಿದ್ದೆವು. ಆದರೆ, ಆಗಲಿಲ್ಲ. ಪ್ರವಾಸದ ಕೊನೆಯಲ್ಲಿ ನನ್ನನ್ನು ಹಾಸ್ಟೆಲ್‌ಗೆ ಬಿಡುವ ನಿರ್ಧಾರ ಅಂತಿಮವಾಯಿತು. ನಮ್ಮ ಈ ಪ್ರವಾಸದಲ್ಲಿ ಎಲ್ಲರ ಮೆಜಾರಿಟಿಯ ಪ್ರಕಾರ ಮಡಿಕೇರಿಗೆ ಜೈ ಎಂದಾಯಿತು. ಹೋಗುವ ದಾರಿಯಲ್ಲಿ ಮೊದಲು ಶ್ರವಣಬೆಳಗೊಳದ ನೂರಾರು ಮೆಟ್ಟಿಲಿಗೆ ನಮ್ಮ ಓಡುನಡಿಗೆಯ ಪಾದಸ್ಪರ್ಶ. ವಿರಾಟ್‌ ವಿರಾಗಿಗೊಂದು ನಮನ ಸಲ್ಲಿಸಿ ಅಲ್ಲಿನ ನಿಸರ್ಗ ಸೌಂದರ್ಯವನ್ನು ಕಣ್ಮನ ತುಂಬೆಲ್ಲ ಸವಿದೆವು.

ನಂತರ ಶನಿವಾರಸಂತೆಯಲ್ಲಿರುವ ಅಣ್ಣನ ಸ್ನೇಹಿತ ಸಾಗರ್‌ ಎಂಬವನ ಮನೆಗೆ ಹಾಜರ್‌. ಅಲ್ಲಿ ಅತಿಥಿದೇವೋಭವ ಎನ್ನುವ ಮಾತಿನಂತೆ ಚೆನ್ನಾಗಿ ನಮ್ಮನ್ನು ಉಪಚರಿಸಿದರು. ಅಲ್ಲಿ ತಿಂದ ಹೊಸರುಚಿಯ ಅಕ್ಕಿ ರೊಟ್ಟಿ , ಬೇಳೆಸೊಪ್ಪಿನ ಸಾರನ್ನು ನೆನೆದರೆ ಈಗಲೂ ಬಾಯಲ್ಲಿ ನೀರೂರುತ್ತಿದೆ. ಸಾಗರ್‌ ಸಲಹೆಯ ಮೇರೆಗೆ ಮುಂದೆ ಕುಶಾಲ್‌ನಗರದಲ್ಲಿರುವ ದುಬಾರೆಗೂ ದಾಳಿ ಇಟ್ಟಾಯಿತು. ಅಲ್ಲಿ ರಿವರ್‌ ರ್ಯಾಫ್ಟಿಂಗ್‌ನಲ್ಲಿ 7 ಕಿ. ಮೀ. ಪ್ರಯಾಣ ಬೆಳೆಸಿದೆವು.

ಮಳೆ ಮಾತ್ರ ಇನ್ನೂ ನಿಂತಿರಲಿಲ್ಲ. ­­­ಯೋಗ ರಾಜ ಭಟ್ಟರ ಚಿತ್ರದಲ್ಲಿ ಮಳೆಗೂ ಗಣೇಶ್‌ಗೂ ಇರುವ ನಂಟಿನಂತೆ ನಮಗೆ ಈ ಮುಂಗಾರು ಮಳೆ ಸ್ನೇಹಿತನಂತೆ ಕೊನೆಯವರೆಗೂ ಜೊತೆಯಲ್ಲೇ ಇದ್ದ.

Advertisement

ಭಾರತಿ ಸಜ್ಜನ್‌
ಪ್ರಥಮ ಎಂಸಿಜೆ, ಎಸ್‌ಡಿಎಂ ಕಾಲೇಜ್‌, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next