Advertisement

ಏಳು ಮಂದಿಗೊಂದು ಮರ!

11:53 AM Jun 11, 2018 | Team Udayavani |

ಬೆಂಗಳೂರು: ನಗರದಲ್ಲಿ ಈ ಹಿಂದೆ ಒಬ್ಬ ವ್ಯಕ್ತಿಗೆ ಏಳಕ್ಕಿಂತ ಹೆಚ್ಚು ಮರಗಳಿದ್ದವು. ಆದರೆ, ಇಂದು ಏಳು ಜನರಿಗೆ ಒಂದು ಮರ ಇದೆ. ಇದು ನಮ್ಮ ಪರಿಸರ ಕಾಳಜಿಗೆ ಹಿಡಿದ ಕನ್ನಡಿ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್‌ ಬೇಸರ ವ್ಯಕ್ತಪಡಿಸಿದರು.

Advertisement

ನಗರದ ವಿಜಯಾ ಕಾಲೇಜಿನ ಆವರಣದಲ್ಲಿ ಭಾನುವಾರ ಅದಮ್ಯ ಚೇತನ ಸಂಸ್ಥೆ ಹಮ್ಮಿಕೊಂಡಿದ್ದ 128ನೇ ಹಸಿರು ಭಾನುವಾರ-ಸಸ್ಯಾಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಗರದ ಪರಿಸರದ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವಿಜ್ಞಾನಿಗಳು ಈ ಹಿಂದೆ ಸಮೀಕ್ಷೆ ನಡೆಸಿದ್ದರು. ಅದರಂತೆ ಒಬ್ಬ ಮನುಷ್ಯನಿಗೆ ನಗರದಲ್ಲಿ ಏಳು ಮರಗಳು ಇರಬೇಕು.

ಆದರೆ, ಬೆಂಗಳೂರಿನಲ್ಲಿ ಅದಕ್ಕಿಂತ ಹೆಚ್ಚು ಮರಗಳಿದ್ದವು. 30 ವರ್ಷಗಳ ಹಿಂದೆ ಇದರ ಪ್ರಮಾಣ ಒಬ್ಬ ಮನುಷ್ಯನಿಗೆ ಒಂದು ಮರಕ್ಕೆ ಕುಸಿಯಿತು. ಈಗಂತೂ ಏಳು ಜನರಿಗೆ ಒಂದು ಮರ ಇದೆ. ಪರಿಸರಕ್ಕೆ ಹೆಸರುವಾಸಿಯಾಗಿದ್ದ ಬೆಂಗಳೂರು ತನ್ನ ಮೂಲ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದರು.

ನಗರದ ಪರಿಸರ ಹಾಳಾಗಿರುವುದರಿಂದ ತಾಪಮಾನ ಹೆಚ್ಚಾಗಿದೆ, ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು ಮಧುಮೇಹ ಮತ್ತು ರಕ್ತದೊತ್ತಡದಂತಹ ರೋಗಗಳು ಅಧಿಕ ಪ್ರಮಾಣದಲ್ಲಿ ಕಂಡುಬರುತ್ತಿವೆ. ಇದಕ್ಕೆ ಗಿಡಮರಗಳನ್ನು ಹೆಚ್ಚಾಗಿ ಬೆಳೆಸುವುದೊಂದೇ ಪರಿಹಾರ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಒಂದು ಕೋಟಿಗೂ ಹೆಚ್ಚು ಮರ-ಗಿಡಗಳನ್ನು ಬೆಳೆಸಬೇಕು ಎನ್ನುವುದು ನಮ್ಮ ಗುರಿ.

ಇದಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದರೂ ನಾವು ಪ್ರಕೃತಿಗೆ ವಿರುದ್ದವಾದ ಜೀವನ ಸಾಗಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಬ್ರಿàಟಿಷ್‌ ಗೆಜೆಟಿಯರ್‌ ಪ್ರಕಾರ 1800ರಲ್ಲಿ ಬೆಂಗಳೂರಿನ ತಾಪಮಾನ ಬೇಸಿಗೆ ಕಾಲದಲ್ಲಿ 18ರಿಂದ 19ಡಿಗ್ರಿ ಸೆಲ್ಸಿಯಸ್‌.

Advertisement

ಚಳಿಗಾಲದಲ್ಲಿ ತಾಪಮಾನ ಶೂನ್ಯಕ್ಕೆ ಇಳಿಯುತ್ತಿತ್ತು. ಆದರೆ, ಆಧುನಿಕತೆ, ಭೂಮಾಫಿಯಾ, ಬದಲಾದ ಜೀವನಶೈಲಿ ಪರಿಣಾಮ ಈಗ ಬೇಸಿಗೆ ತಾಪಮಾನ 32 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಇದಕ್ಕೆ ನಮ್ಮೆಲ್ಲರ ಕೊಡುಗೆ ಅಪಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಉದಯ್‌ ಗರುಡಾಚಾರ್‌, ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್‌, ಶಾಸಕರ ಪತ್ನಿ ಮೇದಿನಿ ಗರುಡಾಚಾರ್‌, ವಿಜಯಾ ಶಿಕ್ಷಣ ಸಂಸ್ಥೆ ಸಹ ಕಾರ್ಯದರ್ಶಿ ಆರ್‌.ವಿ. ಪ್ರಭಾಕರ ಮತ್ತಿತರರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next