Advertisement

ಕೊಲೆಯೊಂದರ ಜಾಡು ಹಿಡಿದು …

12:41 PM Jun 23, 2019 | Lakshmi GovindaRaj |

“ಒಂದು ಕೊಲೆ. ಆ ಕೊಲೆಯ ಹಿಂದೆ ನಾಲ್ವರು ಹಂತಕರು. ಆ ಹಂತಕರ ಹಿಂದೊಬ್ಬ ಸುಪಾರಿ. ಆ ಸುಪಾರಿಯ ಬೆನ್ನು ಬೀಳುವ ಪೊಲೀಸರು … ಇಷ್ಟು ಹೇಳಿದ ಮೇಲೆ ಅಲ್ಲೊಂದು ಕುತೂಹಲ ಹುಟ್ಟುಕೊಳ್ಳುವುದು ಸಹಜ. “ಸಾರ್ವಜನಿಕರಲ್ಲಿ ವಿನಂತಿ’ ಚಿತ್ರ ತಕ್ಕಮಟ್ಟಿಗೆ ಕುತೂಹಲ ಕೆರಳಿಸುವುದೇ ಆ ಕೊಲೆಯ ಹಿಂದಿನ ರಹಸ್ಯದಿಂದ.

Advertisement

ಹಾಗಾದರೆ, ಆ ಕೊಲೆ ಮಾಡಿದ್ದು ನಾಲ್ವರು ಹಂತಕರು ನಿಜ. ಆದರೆ, ಆ ಕೊಲೆ ಆಗಿದ್ದು ಆ ಸುಪಾರಿಯಿಂದಲ್ಲ ಅನ್ನುವುದಾದರೆ, ಬೇರೆ ಯಾರು ಆ ಕೊಲೆಗೆ ಕಾರಣ? ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ, ತಾಳ್ಮೆಯಿಂದ ಸಿನಿಮಾ ಮುಗಿಯುವವರೆಗೂ ನೋಡಬೇಕು. ಇದು ಬಹುತೇಕ ಹೊಸಬರೇ ಸೇರಿ ಮಾಡಿದ ಚಿತ್ರ.

ಶೀರ್ಷಿಕೆಯಲ್ಲೊಂದು ವಿಶೇಷವಿದೆ. ಆ ವಿಶೇಷಕ್ಕೆ ಕ್ಲೈಮ್ಯಾಕ್ಸ್‌ನಲ್ಲಿ “ಅರ್ಥ’ ಸಿಗಲಿದೆ. ಅಲ್ಲಿಯವರೆಗೂ ಸಿನಿಮಾದಲ್ಲಿ ಕಾಣುವ ತರಹೇವಾರಿ ಹಾಸ್ಯ ಪ್ರಸಂಗ, ವಿಚಿತ್ರ ಘಟನೆಗಳನ್ನು ನೋಡುವುದು ಅನಿವಾರ್ಯ. ಕಥೆಯಲ್ಲಿ ಒಂದಷ್ಟು ಹಿಡಿತವಿದೆ. ಆ ಹಿಡಿತ ಮೊದಲರ್ಧದಲ್ಲಿ ಇನ್ನಷ್ಟು ಬಿಗಿಯಾಗಿರಬೇಕಿತ್ತು.

ಮೊದಲರ್ಧ ನೋಡುಗರಿಗೆ ಎಲ್ಲೋ ಒಂದು ಕಡೆ ನಿಧಾನವೆನಿಸಿದರೂ, ದ್ವಿತಿಯಾರ್ಧದಲ್ಲಿ ಸಿಗುವ ಒಂದೊಂದು ತಿರುವುಗಳು ಪೂರ್ತಿ ಸಿನಿಮಾ ನೋಡಲೇಬೇಕೆಂಬಷ್ಟರ ಮಟ್ಟಿಗೆ ಕುತೂಹಲ ಕಾಯ್ದುಕೊಂಡು ಹೋಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಅಲ್ಲಲ್ಲಿ ಕಾಣಸಿಗುವ ಎಣ್ಣೆ ಪಾರ್ಟಿಯ ದೃಶ್ಯಗಳು, ಕುಡುಕರು ಮಾತಾಡುವಂತೆ ಮಾತನಾಡುವ ಪಾತ್ರಗಳ ಕಿರಿಕಿರಿ ಸ್ವಲ್ಪ ತಪ್ಪಿಸಬಹುದಾಗಿತ್ತು. ಹಾಸ್ಯ ಬೇಕು ಎಂಬ ಕಾರಣಕ್ಕೆ, ಕ್ರಮವಲ್ಲದ ಹಾಸ್ಯ ದೃಶ್ಯಗಳು ಸಹ ಒಮ್ಮೊಮ್ಮೆ ತಾಳ್ಮೆಗೆಡಿಸುತ್ತವೆ. ಅವುಗಳನ್ನು ಹೊರತುಪಡಿಸಿದರೆ, ಇಡೀ ಚಿತ್ರದಲ್ಲಿ ಹಳ್ಳಿಯ ಸೊಗಡನ್ನು ಸವಿಯಬಹುದು.

Advertisement

ಹಳ್ಳಿ ಜನರ ದೇಸಿ ಭಾಷೆಯನ್ನು ಕೇಳಬಹುದು. ನಮ್ಮ ಅಕ್ಕಪಕ್ಕದ ಹಳ್ಳಿಯಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳಬಹುದು. ಚಿತ್ರದಲ್ಲೊಂದು ಸಂದೇಶವೂ ಇದೆ. ಆ ಸಂದೇಶ ಯಾವುದು ಎಂಬ ತಿಳಿದುಕೊಳ್ಳುವ ಬಗ್ಗೆ ಕುತೂಹಲವಿದ್ದರೆ, ಚಿತ್ರ ನೋಡಲಡ್ಡಿಯಿಲ್ಲ.

ಎಲ್ಲಾ ಚಿತ್ರಗಳಲ್ಲಿರುವಂತೆ, ಇಲ್ಲೂ ಪ್ರೀತಿ, ಗೆಳೆತನ, ತಾಯಿ, ತಂದೆ ಸೆಂಟಿಮೆಂಟ್‌, ಸಂಭ್ರಮ, ಸಂಕಟ ಎಲ್ಲವೂ ಇದೆ. ಆದರೆ, ಎಲ್ಲೋ ಒಂದು ಕಡೆ ಅದು ದುರುಪಯೋಗವೂ ಆಗುತ್ತದೆ. ಅಂಥದ್ದೊಂದು ಗುರುತಿಸುವಂತಹ ವಿಷಯ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ ಎಂಬುದೇ ವಿಶೇಷ.

ಹಾಗಂತ, ಇಡೀ ಚಿತ್ರದಲ್ಲಿ ಒಂದೇ ಒಂದು ಸಣ್ಣ ಸಂದೇಶ ಕೊಡಲು ಎರಡು ಗಂಟೆ ಕಾಲ ಏನೆಲ್ಲಾ ಮನರಂಜನೆ ಸಿಗುತ್ತೆ ಎಂಬುದನ್ನು ಇಲ್ಲಿ ಹೇಳುವುದು ಕಷ್ಟ. ಆದರೂ, ಇಲ್ಲಿ ಏನೆಲ್ಲಾ ಘಟನೆಗಳು ನಡೆಯುತ್ತವೆ, ಅಮಾಯಕ ಜೀವವೊಂದು ಹಾರಿಹೋಗುವುದರ ಹಿಂದೆ ಸಣ್ಣದ್ದೊಂದು ತಪ್ಪು ಎಷ್ಟೆಲ್ಲಾ ಜನರನ್ನು ಹಿಂಸಿಸುತ್ತದೆ ಎಂಬುದನ್ನು ಸೂಕ್ಷ್ಮವಾಗಿ,

ಕುತೂಹಲಭರಿತವಾಗಿ ಹೇಳುವ ಪ್ರಯತ್ನ ಇಲ್ಲಾಗಿದೆ. ಒಂದಷ್ಟು ತಪ್ಪು, ಎಡವಟ್ಟುಗಳು ಇಲ್ಲಿದ್ದರೂ, ಕೊನೆಯ ಇಪ್ಪತ್ತು ನಿಮಿಷದ ಕ್ಲೈಮ್ಯಾಕ್ಸ್‌ ಅವೆಲ್ಲವನ್ನೂ ಮರೆಸಿಬಿಡುತ್ತದೆ. ಒಂದು ಹಳ್ಳಿ. ಆ ಹಳ್ಳಿಯಲ್ಲಿ ಉಂಡಲೆಯುವ ಹುಡುಗರ ಗುಂಪು. ಒಬ್ಬೊಬ್ಬರದು ಒಂದೊಂದು ಲವ್‌ಟ್ರ್ಯಾಕ್‌.

ಹೇಗೋ ಒಬ್ಬ ಸೋಮಾರಿಗೆ, ಓದಿದ ಹುಡುಗಿಯೊಬ್ಬಳ ಪ್ರೀತಿ ಸಿಗುತ್ತದೆ. ಅದು ಮದುವೆಯೂ ಆಗಿ ಹೋಗುತ್ತದೆ. ಆ ಬಳಿಕ ಸೋಮಾರಿ ಗಂಡನ ವರ್ತನೆ ಆಕೆಗೆ ಬೇಸರ ತರಿಸುತ್ತಲೇ ಇರುತ್ತದೆ. ಹೀಗಿರುವಾಗಲೇ, ಆ ಊರ ಹೊರಗಿನ ತೋಟದಲ್ಲೊಂದು ಕೊಲೆ ನಡೆದುಹೋಗುತ್ತದೆ.

ಆ ಕೊಲೆಗೆ ಸುಪಾರಿ ಕೊಟ್ಟನೆಂದ ಆ ಸೋಮಾರಿ ಗಂಡನನ್ನು ಪೊಲೀಸರು ಹಿಡಿದು ತರುತ್ತಾರೆ.ಅಸಲಿಗೆ ಆ ಕೊಲೆಗೆ ಅವನು ಕಾರಣವಲ್ಲ. ಯಾರು ಎಂಬುದೇ ಸಸ್ಪೆನ್ಸ್‌. ಮದನ್‌ರಾಜ್‌ ಸಿಕ್ಕ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಅಮೃತಾ ಕೂಡ ಸಿಕ್ಕಷ್ಟು ಪಾತ್ರಕ್ಕೆ ಮೋಸ ಮಾಡಿಲ್ಲ. ಉಳಿದಂತೆ ರಮೇಶ್‌ ಪಂಡಿತ್‌ ಇಲ್ಲಿ ಪೊಲೀಸ್‌ ತನಿಖಾಧಿಕಾರಿಯಾಗಿ ಗಮನಸೆಳೆಯುತ್ತಾರೆ.

ಮಂಡ್ಯ ರಮೇಶ್‌ ಹೀಗೆ ಬಂದು ಹೋದರೂ, ತಕ್ಕಮಟ್ಟಿಗಿನ ನಗುವಿಗೆ ಕಾರಣರಾಗುತ್ತಾರೆ. ಉಳಿದಂತೆ ಕಾಣುವ ಪಾತ್ರಗಳು ತಮ್ಮ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಿವೆ. ಅನಿಲ್‌ ಪಿ.ಜೆ. ಆವರ ಹಿನ್ನೆಲೆ ಸಂಗೀತಕ್ಕಿನ್ನೂ ಧಮ್‌ ಇರಬೇಕಿತ್ತು. ಅನಿಲ್‌ಕುಮಾರ್‌ ಕೆ ಅವರ ಛಾಯಾಗ್ರಹಣದಲ್ಲಿ ಹಳ್ಳಿಯ ಸೊಬಗು ತುಂಬಿದೆ.

ಚಿತ್ರ: ಸಾರ್ವಜನಿಕರಲ್ಲಿ ವಿನಂತಿ
ನಿರ್ಮಾಪಕಿ: ಉಮಾ ನಂಜುಂಡರಾವ್‌
ನಿರ್ದೇಶಕ: ಕೃಪಾಸಾಗರ್‌ ಟಿ.ಎನ್‌.
ತಾರಾಗಣ: ಮದನ್‌ರಾಜ್‌, ಅಮೃತಾ, ಮಂಡ್ಯ ರಮೇಶ್‌, ರಮೇಶ್‌ ಪಂಡಿತ್‌, ನಾಗೇಶ್‌ ಮಯ್ಯ, ಜ್ಯೋತಿ ಮೂರುರು ಇತರರು

* ವಿಭ

Advertisement

Udayavani is now on Telegram. Click here to join our channel and stay updated with the latest news.

Next