Advertisement

ಶಿರಸಿಗೆ ಶೀಘ್ರ ಬರಲಿದೆ ಸಂಚಾರ ಪೊಲೀಸ್‌ ಠಾಣೆ!

05:17 PM Oct 03, 2024 | Team Udayavani |

ಉದಯವಾಣಿ ಸಮಾಚಾರ
ಶಿರಸಿ: ಬಹುಕಾಲದ ಬೇಡಿಕೆಯಾದ ಸಂಚಾರಿ ಪೊಲೀಸ್‌ ಠಾಣೆ ಶಿರಸಿಗೆ ಮಂಜೂರಾಗಿದ್ದು, ಅದನ್ನು ಶೀಘ್ರ ಆರಂಭಿಸುವ ಕುರಿತು ಶಾಸಕ ಭೀಮಣ್ಣ ನಾಯ್ಕ ಸೂಚನೆಯಂತೆ ಪೊಲೀಸ್‌ ಅಧಿಕಾರಿಗಳು ಕಟ್ಟಡದ ಹುಡುಕಾಟ ಆರಂಭಿಸಿದ್ದಾರೆ.

Advertisement

ಇಲ್ಲಿನ ಚೌಕಿಮಠದ ಸಮೀಪದಲ್ಲಿ ಸ್ಥಗಿತಗೊಂಡ ದೂರದರ್ಶನ ಮರುಪ್ರಸಾರ ಕೇಂದ್ರ ಕಟ್ಟಡವನ್ನು ಸಂಚಾರಿ ಪೊಲೀಸ್‌ ಠಾಣೆಯಾಗಿ ಬಳಸಿಕೊಳ್ಳಲು ಪೊಲೀಸ್‌ ಇಲಾಖೆ ಯೋಜಿಸಿದ್ದು, ಪ್ರಾಥಮಿಕ ಹಂತದಲ್ಲಿ ಪರಿಶೀಲಿಸಿ, ಶಾಸಕರ ಗಮನಕ್ಕೆ ತರಲು
ಅಧಿಕಾರಿಗಳು ಮುಂದಾಗಿದ್ದಾರೆ.

ಅಬಕಾರಿ ಇಲಾಖೆಗೆ ಸಂಬಂಧಿತ ಕಟ್ಟಡ ಇದಾಗಿದ್ದು, 1980ರ ದಶಕದಲ್ಲಿ ಸ್ಥಾಪನೆಯಾಗಿದ್ದ ಪ್ರಸಾರ ಭಾರತಿ ದೂರದರ್ಶನ ಮರುಪ್ರಸಾರ ಕೇಂದ್ರ 2021ರ ಅಂತ್ಯದಲ್ಲಿ ಸ್ಥಗಿತಗೊಂಡಿತ್ತು. ಆಗ ಜಾಗವನ್ನು ಸುಪರ್ದಿಗೆ ಪಡೆಯಲು ಕಂದಾಯ ಇಲಾಖೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿತ್ತು.

ಹಾಲೀ ಇರುವ ಕಟ್ಟಡಗಳನ್ನು ತೆರವುಗೊಳಿಸುವ ಬದಲು ಅಲ್ಲಿ ಗ್ರಾಮಚಾವಡಿ ಅಥವಾ ಉಪ ಕಾರಾಗೃಹ ಸ್ಥಾಪಿಸಲು ಚಿಂತನೆ ನಡೆಸಲಾಗಿತ್ತು. ನಂತರ ವಿವಿಧ ಕಾರಣದಿಂದ ಯಾವುದೇ ಕಚೇರಿ ಇಲ್ಲಿಗೆ ಬಂದಿರಲಿಲ್ಲ. ನಗರಸಭೆ ಕೂಡ ವಸತಿ ಸಂಕೀರ್ಣ ಕಟ್ಟಲೂ ಯೋಜಿಸಿತ್ತು. ಜಿಲ್ಲಾ ಮಟ್ಟದ ರಂಗ ಮಂದಿರ ನಿರ್ಮಾಣ ಮಾಡಲೂ ಇದೇ ಜಾಗ ಬಳಸಿಕೊಳ್ಳಲು ಮುಂದಾಗಿತ್ತು. ಈಗ ಪೊಲೀಸ್‌ ಇಲಾಖೆ ಸಂಚಾರಿ ಠಾಣೆಗೆ ಆದರೂ ಬಳಸಲು ಸಾಧ್ಯವಾ ಎಂದು ಪರಿಶೀಲಿಸಲಾಯಿತು.

ವರ್ಷಗಳ ಕಾಲ ಕಟ್ಟಡ ಬಳಕೆ ಹಾಗೂ ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಸುತ್ತಲಿನ ಜಾಗದ ಸ್ವತ್ಛತೆ, ಸಣ್ಣಪುಟ್ಟ ದುರಸ್ತಿ ಆಗಬೇಕಿದೆ. ವಿಶಾಲ ಜಾಗ ಇರುವುದರಿಂದ ಪಾರ್ಕಿಂಗ್‌ ಸಮಸ್ಯೆ ಇಲ್ಲವಾಗಿದೆ. ಈಗಿನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ಪೀಕರ್‌ ಇದ್ದಾಗ ಅಂದಿನ ಬಿಜೆಪಿ ಸರಕಾರದ ಬಜೆಟ್‌ನಲ್ಲಿ ಘೋಷಣೆ ಆಗಿತ್ತು. ಆದರೆ, ಅನುದಾನ ಇರಲಿಲ್ಲ. ನಂತರ ಬಂದ ಕಾಂಗ್ರೆಸ್‌ ಸರಕಾರ ಟ್ರಾಫಿಕ್‌ ಪೊಲೀಸ್‌ ಠಾಣೆ ಸ್ಥಾಪನೆ, ಸಿಬ್ಬಂದಿ ನಿಯೋಜನೆ, ಅನುದಾನ ನೀಡಿದೆ.

Advertisement

ಈ ಮಧ್ಯೆ ಡಿಎಸ್‌ಪಿ ಗಣೇಶ ಕೆ.ಎಲ್‌, ಸಿಪಿಐ ಶಶಿಕಾಂತ ವರ್ಮಾ, ಪಿಎಸ್‌ಐ ನಾಗಪ್ಪ, ಅಬಕಾರಿ ಇಲಾಖೆ ಅಧಿಕಾರಿಗಳು ಕಟ್ಟಡದ ಪರಿಶೀಲನೆ ನಡೆಸಿದರು. ಅಂತೂ ಇಂತೂ ಶಿರಸಿಗೆ ಬಹು ಬೇಡಿಕೆಯ ಟ್ರಾಫಿಕ್‌ ಪೊಲೀಸ್‌ ಠಾಣೆ ಆರಂಭಕ್ಕೆ ಮುಹೂರ್ತ ನಿಗದಿಯಾದಂತಾಗಿದೆ.

ಸಂಚಾರಿ ಪೊಲೀಸ್‌ ಠಾಣೆ ಆರಂಭಕ್ಕೆ ಶಾಸಕರು ಸಭೆ ತೆಗೆದುಕೊಳ್ಳಲಿದ್ದು, ಅಲ್ಲಿ ಈ ಕಟ್ಟಡದ ಬಗ್ಗೂ ಮಾಹಿತಿ ನೀಡುತ್ತೇವೆ. ಸಂಚಾರ ದಟ್ಟನೆ ನಿಯಂತ್ರಣಕ್ಕೆ ಈ ಪೊಲೀಸ್‌ ಠಾಣೆ ನೆರವಾಗಲಿದೆ.
ಗಣೇಶ ಕೆ.ಎಲ್‌,ಡಿಎಸ್‌ಪಿ

ಶಿರಸಿ ಟ್ರಾಫಿಕ್‌ ಪೊಲೀಸ್‌ ಠಾಣೆ ಆಗಲೇಬೇಕು. ವಾಹನಗಳ ಒತ್ತಡ ನಿಯಂತ್ರಣಕ್ಕೆ, ಅಪಘಾತ ತಡೆಗಟ್ಟಲು ಅಗತ್ಯ. ಪ್ರವಾಸಿಗರೂ ಶಿರಸಿಗೆ ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಈ ಕಾರಣದಿಂದ ಸಂಚಾರಿ ಪೊಲೀಸ್‌ ಠಾಣೆ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ
ಸೂಚಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಸ್ಥಳ ವೀಕ್ಷಣೆ ಮಾಡಿ ವಿಜಯ ದಶಮಿಗೆ ಠಾಣಾ ಆರಂಭಕ್ಕೆ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಭೀಮಣ್ಣ ನಾಯ್ಕ, ಶಾಸಕ

*ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next