Advertisement

ಕಸಾಪದಿಂದ ಸರಕಾರಿ ಶಾಲೆಗಳಲ್ಲಿ ಗ್ರಂಥಾಲಯಗಳಿಗೆ ಓದುವ ಸ್ಪರ್ಶ

11:36 PM Nov 23, 2019 | Team Udayavani |

ಬೆಳ್ಮಣ್‌: ಸರಕಾರ ಹಾಗೂ ಶಿಕ್ಷಣ ಇಲಾಖೆ ಕನ್ನಡ ಮಾಧ್ಯಮ ಶಾಲೆಗಳ ಮೇಲೆ ಅದರಲ್ಲೂ ಸರಕಾರಿ ಶಾಲೆಗಳ ಕೇವಲ ಪ್ರಚಾರಕ್ಕಾಗಿ ವಿವಿಧ ಕೊಡುಗೆಗಳ ಘೋಷಣೆ ಮಾಡುತ್ತಿದ್ದಂತೆಯೇ ಉಡುಪಿ ಜಿಲ್ಲಾ ಗ್ರಂಥಾಲಯ ಇಲಾಖೆ ಕಾರ್ಕಳ ತಾಲೂಕಿನ 12 ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಸುಮಾರು 1 ಲಕ್ಷ ರೂ. ಮೌಲ್ಯದ ವಿವಿಧ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದೆ.

Advertisement

ಕಾರ್ಕಳ ಕಸಾಪ ಉಸ್ತುವಾರಿ
ಕಾರ್ಕಳ ತಾ| ಕನ್ನಡ ಸಾಹಿತ್ಯ ಪರಿಷತ್‌ನ ಮುತುವರ್ಜಿಯಲ್ಲಿ ಈ ಪುಸ್ತಕಗಳನ್ನು ಆಯಾ ಶಾಲೆಗಳ ಗ್ರಂಥಾಲಯಗಳಿಗೆ ನೀಡಲಾಗಿದ್ದು ಮುಂದೆ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳು ಹೈಟೆಕ್‌ ಆಂಗ್ಲ ಮಾಧ್ಯಮ ಶಾಲೆಗಳ ಮಕ್ಕಳಂತೆ ತಮ್ಮ ಶಾಲೆಗಳಲ್ಲಿ ಲೈಬ್ರೆರಿಯಲ್ಲಿ ಕುಳಿತು ಕತೆ, ಕವನ, ಕಾದಂಬರಿ ಓದಬಹುದಾಗಿದೆ. ಜಿಲ್ಲಾ ಗ್ರಂಥಾಲಯ, ಕಾರ್ಕಳ ತಾ| ಕಸಾಪದ ಈ ಶೈಕ್ಷಣಿಕ ನಡೆ ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಕಾರ್ಕಳ ತಾ| ಕಸಾಪ ಅಧ್ಯಕ್ಷ, ಮುಂಡ್ಕೂರು ವಿದ್ಯಾವರ್ಧಕ ಪ್ರೌಢ ಶಾಲೆಯ ಕನ್ನಡ ಅಧ್ಯಾಪಕರು ಈ ವಿಶೇಷ ಸಾಹಿತ್ಯಿಕ ಪರಿಕಲ್ಪನೆಯ ರೂವಾರಿ ಯಾಗಿದ್ದು, ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ನಳಿನಿ ಜಿ.ಐ. ಪುಸ್ತಕಗಳ ಕೊಡುಗೆಗೆ ಬೆನ್ನುಡಿಯಾಗಿದ್ದರು.

12 ಶಾಲೆಗಳಿಗೆ ತಲಾ 500 ಪುಸ್ತಕ
ಬೆಳ್ಮಣ್‌ ಸರಕಾರಿ ಪ.ಪೂ. ಕಾಲೇಜಿನಲ್ಲಿ ನಡೆದ ನಂದಳಿಕೆ ಕವಿ ಮುದ್ದಣನ 150ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಕಾರ್ಕಳ ತಾ|ನ 10 ಸರಕಾರಿ ಕನ್ನಡ ಶಾಲೆಗಳಿಗೆ ತಲಾ 500 ಪುಸ್ತಕ ವಿತರಿಸಲಾಯಿತು. ಕಾರ್ಕಳ ಶಾಸಕ ವಿ.. ಸುನಿಲ್‌ ಕುಮಾರ್‌ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ ಸಹಿತ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಸರಕಾರಿ ಪ.ಪೂ. ಕಾಲೇಜು ಶಿರ್ಲಾಲು, ಬೆಳ್ಮಣ್‌, ಸರಕಾರಿ ಪ್ರೌಢಶಾಲೆ ಕಲ್ಯಾ, ಎಣ್ಣೆಹೊಳೆ, ಭುವನೇಂದ್ರ, ಸರಕಾರಿ ಮಾದರಿ ಹಿ. ಪ್ರಾ. ಶಾಲೆ ಮುಂಡ್ಕೂರು, ಬಸ್ರಿ ಬೈಲೂರು, ನಲ್ಲೂರು, ಕೂಡಬೆಟ್ಟು ಮಾಳ, ಹೊಸ್ಮಾರು, ಮುಂಡ್ಲಿ ಬಂಗ್ಲೆಗುಡ್ಡೆ ಕೆರ್ವಾಸೆ, ಬಜಗೋಳಿ ಶಾಲೆಗಳಿಗೆ ಈ ಪುಸ್ತಕದ ಹಸ್ತಾಂತರ ನಡೆಯಿತು.

ಮುದ್ದಣನ ಸಂಸ್ಮರಣೆ ಗ್ರಂಥಾಲಯ
ಈ ಮೇಲಿನ ಎಲ್ಲ ಶಾಲೆಗಳಲ್ಲಿ ನಂದಳಿಕೆಯ ವರಕವಿ ಮುದ್ದಣನ ಹೆಸರಲ್ಲಿ ಗ್ರಂಥಾಲಯಗಳನ್ನು ಆರಂಭಿಸಲು ಕಸಾಪ ದ್ದೇಶಿಸಿದ್ದು ಎಲ್ಲ ಶಾಲೆಗಳಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಈ ಬಗ್ಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಿತ ಇತರ ಸಾಹಿತ್ಯಾಸಕ್ತರಿಂದಲೂ ಸಕಾರಾತ್ಮಕ ಬೆಂಬಲ ಪ್ರಕಟವಾಗಿತ್ತು.ಪಂಚಾಯತ್‌ಗಳ ಗ್ರಂಥಾಲಯ ಚುರುಕಾಗಬೇಕಾಗಿದೆ ಪ್ರಸ್ತುತ ಸರಕಾರ, ಇಲಾಖೆಗಳ ಯೋಜನೆಯಂತೆ ಎಲ್ಲ ಪಂಚಾಯತ್‌ಗಳಲ್ಲಿಯೂ ಸುಸಜ್ಜಿತ ಗ್ರಂಥಾಲಯ ಇರಬೇಕೆಂಬ ಆದೇಶ ಇದೆ. ಈಗಾಗಲೇ ಹೆಚ್ಚಿನ ಪಂಚಾ ಯತ್‌ಗಳಲ್ಲಿ ಅನುಷ್ಠಾನಕ್ಕೆ ಬಂದಿದ್ದರೂ ಗ್ರಾಮಸ್ಥರಿಗೆ ಈ ಬಗ್ಗೆ ಮಾಹಿತಿ ಕೊರತೆ ಇದ್ದು ಆಯಾ ಪಂಚಾಯತ್‌ ಆಡಳಿತ ಈ ಬಗ್ಗೆ ಇನ್ನಷ್ಟು ಕ್ರಿಯಾಶೀಲವಾಗಬೇಕಾದ ಅನಿವಾರ್ಯತೆ ಇದೆ.

ಶಾಲೆಗಳಲ್ಲೂ ಲೈಬ್ರೆರಿ ಅವಧಿ ಕಡ್ಡಾಯವಾಗಲಿ
ಶಾಲೆಗಳ ಗ್ರಂಥಾಲಯಗಳಲ್ಲಿ ಬಿಡುವಿನ ಅವಧಿಗಳಲ್ಲಿ ಮಕ್ಕಳು ಗ್ರಂಥಾಲಯದ ಬಳಕೆ ಮಾಡಿದರೆ ಸಾಕಷ್ಟು ಸಮಯ ಸಾಲದೆನ್ನುವ ಉದ್ದೇಶದಿಂದ ಲೈಬ್ರೆರಿ ಗಾಗಿಯೇ ಪ್ರತ್ಯೇಕ ಅವಧಿಯನ್ನು ಸೀಮಿತ ಗೊಳಿಸಿದರೆ ಉತ್ತಮ ಎಂಬ ಮಾತೂ ಕೇಳಿ ಬರುತ್ತಿದೆ. ಈ ಬಗ್ಗೆ ಸಾಕಷ್ಟು ಚಿಂತನೆಯ ಅಗತ್ಯವೂ ಇದೆ. ಜಿಲ್ಲಾ ಗ್ರಂಥಾಲಯ ಹಾಗೂ ಕಾರ್ಕಳ ತಾ| ಕಸಾಪದ ಈ ನಡೆ ಸಾರ್ವತ್ರಿಕ ಶ್ಲಾಘನೆಗೆ ಪಾತ್ರವಾಗಿದೆ.

Advertisement

ಇಲಾಖೆಯ ಸಹಕಾರ ಇದೆ
ಕಾರ್ಕಳ ತಾ| ಕನ್ನಡ ಸಾಹಿತ್ಯ ಪರಿಷತ್‌ನ ಉತ್ತಮ ಪರಿಕಲ್ಪನೆಗೆ ನಮ್ಮ ಇಲಾಖೆ ಕೈ ಜೋಡಿಸಿದೆ. ಈ ಹಿಂದೆಯೂ ಬೈಂದೂರು ಶಾಲೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿಯೂ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಗಿತ್ತು. ಅರ್ಥಪೂರ್ಣ ಸಾಹಿತ್ಯಿಕ ಚಟುವಟಿಕೆ ನಡೆಸುವವರಿಗೆ ನಮ್ಮ ಇಲಾಖೆಯ ಸಹಕಾರ ಇದೆ.
-ನಳಿನಿ ಜಿ.ಐ., ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ

ಓದುವ ಅಭಿರುಚಿ ಹೆಚ್ಚಿಸಲು ನೆರವು
ಕವಿ ಮುದ್ದಣನ ಸ್ಮರಣೆ ಮಾಡಬೇಕಾದುದು ನಮ್ಮ ಕರ್ತವ್ಯ, ಈ ನಿಟ್ಟಿನಲ್ಲಿ ಸರಕಾರಿ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಲ್ಲಿ ಓದುವ ಅಭಿರುಚಿ ಹುಟ್ಟಿಸಲು ಜಿಲ್ಲಾ ಕೇಂದ್ರ ಗ್ರಂಥಾಲಯದ ನೆರವಿನಿಂದ ಸುಮಾರು 12 ಶಾಲೆಗಳಿಗೆ ತಲಾ 500 ಪುಸ್ತಕ ನೀಡಿದ್ದೇವೆ. ಮುಂದೆಯೂ ನಮ್ಮ ಸಾಹಿತ್ಯಿಕ ಸೇವೆ ನಿರಂತರವಾಗಲಿದೆ.
-ಪ್ರಭಾಕರ ಶೆಟ್ಟಿ ಕೊಂಡಳ್ಳಿ,ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next