Advertisement

ದೇಶದ ರೈಲು ನಿಲ್ದಾಣಗಳಿಗೆ ಕಾಯಕಲ್ಪದ ಸ್ಪರ್ಶ

10:30 PM Aug 06, 2023 | Team Udayavani |

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಳೆದ ವರ್ಷ ಕೇಂದ್ರ ಸರಕಾರ ಘೋಷಿಸಿದ್ದ “ಅಮೃತ ಭಾರತ ರೈಲು ನಿಲ್ದಾಣ ಯೋಜನೆ’ಯಡಿ ಮೊದಲ ಹಂತದಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ರವಿವಾರ ವರ್ಚುವಲ್‌ ಆಗಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ಮೂಲಕ ದೇಶದ ರೈಲು ನಿಲ್ದಾಣಗಳಿಗೆ ಕಾಯಕಲ್ಪ ನೀಡುವ ಕೇಂದ್ರ ಸರಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ಲಭಿಸಿದೆ.

Advertisement

ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ ಮೊದಲ ಹಂತದಲ್ಲಿ ದೇಶದಲ್ಲಿನ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟು 508 ರೈಲು ನಿಲ್ದಾಣಗಳನ್ನು 24,470 ಕೋ. ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿ ಸಲು ಉದ್ದೇಶಿಸಲಾಗಿದೆ. ಈ ರೈಲು ನಿಲ್ದಾಣಗಳ ಪುನರಾಭಿವೃದ್ಧಿ ವೇಳೆ ಸ್ಥಳೀಯ ಸಂಸ್ಕೃತಿ, ಪರಂಪರೆ, ವಾಸ್ತುಶಿಲ್ಪಗಳಿಗೆ ಆದ್ಯತೆ ನೀಡುವುದರ ಜತೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮೂಲ ಸೌಕರ್ಯಗಳ ಒದಗಣೆಗೆ ವಿಶೇಷ ಆದ್ಯತೆ ನೀಡಲು ನಿರ್ಧರಿಸಲಾಗಿದೆ.

ದೇಶದ ಸಂಚಾರ ವ್ಯವಸ್ಥೆಯ ಜೀವನಾಡಿಯಾಗಿರುವ ರೈಲು ಸಂಪರ್ಕ ಜಾಲವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋ ನ್ಮುಖವಾಗಿರುವ ಕೇಂದ್ರ ಸರಕಾರ ಈಗ ಓಬಿರಾಯನ ಕಾಲದ ರೈಲು ನಿಲ್ದಾಣ ಗಳಿಗೆ ಆಧುನಿಕ ಸ್ಪರ್ಶ ನೀಡಲು ಮುಂದಾಗಿದೆ.

ವಿಶ್ವದರ್ಜೆಗೆ ಅನುಗುಣವಾಗಿ ಈ ರೈಲು ನಿಲ್ದಾಣಗಳನ್ನು ದೂರದೃಷ್ಟಿ ಯೊಂದಿಗೆ ಅಭಿವೃದ್ಧಿ ಪಡಿಸಲು ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ. ಮುಂದಿನ ಹಲವಾರು ವರ್ಷಗಳನ್ನು ಗಮನದಲ್ಲಿರಿಸಿಕೊಂಡು ಕಾಮ ಗಾರಿಯ ನೀಲನಕಾಶೆಯನ್ನು ರೂಪಿಸಲಾಗಿದೆ. ಉಚಿತ ವೈ-ಫೈ ಸೌಲಭ್ಯ, ಪಾದಚಾರಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆ, ರೈಲು ನಿಲ್ದಾಣಗಳಲ್ಲಿ ವಿಶಾಲ ಸ್ಥಳಾವಕಾಶ, ನಿಲ್ದಾಣಗಳನ್ನು ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿ, ವಿಶಾಲ ಪಾರ್ಕಿಂಗ್‌ ವ್ಯವಸ್ಥೆ, ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಈ ನಿಲ್ದಾಣಗಳು ಒಳಗೊಂಡಿರಲಿವೆ.

ದೇಶದ ಕೆಲವೊಂದು ಮಹಾನಗರಗಳಲ್ಲಿನ ರೈಲು ನಿಲ್ದಾಣಗಳ ಸಹಿತ ಬಹುತೇಕ ರೈಲು ನಿಲ್ದಾಣಗಳು ತೀರಾ ಹಳೆಯದಾಗಿವೆ. ಈ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕನಿಷ್ಠ ಮೂಲಸೌಕರ್ಯಗಳು ಕೂಡ ಲಭಿಸುತ್ತಿಲ್ಲ. ದೇಶದ ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆ ಐದಾರು ದಶಕಗಳಿಂದೀಚೆಗೆ ಕೇಳಿಬಂದಿತ್ತಾದರೂ ಸರಕಾರ ದಿಂದ ಸೂಕ್ತ ಸ್ಪಂದನೆ ಲಭಿಸಿರಲಿಲ್ಲ. ಕಳೆದೆರಡು ದಶಕಗಳಿಂದೀಚೆಗೆ ದೇಶದ ಕೆಲವು ನಗರಗಳ ರೈಲು ನಿಲ್ದಾಣಗಳು ಅಭಿವೃದ್ಧಿಯನ್ನು ಕಂಡಿದ್ದನ್ನು ಹೊರತುಪಡಿಸಿದಂತೆ ಉಳಿದೆಲ್ಲ ನಿಲ್ದಾಣಗಳ ಸ್ಥಿತಿ ಶೋಚನೀಯವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ ದೇಶಾದ್ಯಂತದ 1,309 ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ನಿರ್ಧಾರವನ್ನು ಕೈಗೊಂಡಿತ್ತು. ಅದರಂತೆ ಇದೀಗ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಪ್ರಧಾನಿ ಶಿಲಾನ್ಯಾಸ ನೆರವೇರಿಸಿದ್ದು ಜನರ ದಶಕಗಳ ಬೇಡಿಕೆ ಕೊನೆಗೂ ಈಡೇರುವ ಲಕ್ಷಣಗಳು ಗೋಚರಿಸಿವೆ.

Advertisement

ಕೇಂದ್ರ ಸರಕಾರ ಮತ್ತು ರೈಲ್ವೇ ಇಲಾಖೆಯ ಉದ್ದೇಶಿತ ಯೋಜನೆ ಯಂತೆ ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳು ನಡೆದದ್ದೇ ಆದಲ್ಲಿ ಈ ಯೋಜನೆ, ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ದೇಶದ ರೈಲ್ವೇ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭಗೊಳ್ಳಲಿರುವುದು ನಿಶ್ಚಿತ.

Advertisement

Udayavani is now on Telegram. Click here to join our channel and stay updated with the latest news.

Next