Advertisement

Throat Cancer: ತಂಬಾಕು ಮುಕ್ತ ಜೀವನ

09:37 AM Jun 18, 2024 | Team Udayavani |

ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕು ಬಳಕೆಗೆ ಸಂಬಂಧಿಸಿದ ಆರೋಗ್ಯ ಅಪಾಯಗಳ ಬಗೆಗೆ ತಿಳಿವಳಿಕೆಯನ್ನು ಮೂಡಿಸುವುದಕ್ಕಾಗಿ ಮತ್ತು ಜಾಗತಿಕವಾಗಿ ತಂಬಾಕು ಬಳಕೆಯನ್ನು ಕಡಿಮೆ ಮಾಡುವುದಕ್ಕೆ ಅಗತ್ಯವಾದ ಪರಿಣಾಮಕಾರಿ ನೀತಿಗಳ ಪ್ರತಿಪಾದನೆಗಾಗಿ 1987ರಲ್ಲಿ ವಿಶ್ವ ತಂಬಾಕು ರಹಿತ ದಿನದ ಆಚರಣೆಯನ್ನು ಅನುಷ್ಠಾನಕ್ಕೆ ತಂದಿತು.

Advertisement

ಪ್ರತೀ ವರ್ಷ ಮೇ 31ಕ್ಕೆ ಇದನ್ನು ಆಚರಿಸಲಾಗುತ್ತದೆ; ಜಾಗತಿಕವಾಗಿ ತಂಬಾಕಿನ ಬಳಕೆಯಿಂದ ಕನಿಷ್ಠ 24 ತಾಸುಗಳ ಕಾಲ ದೂರವಿರುವುದನ್ನು ಪ್ರೋತ್ಸಾಹಿಸುವ ಗುರಿಯನ್ನು ಇದು ಹೊಂದಿದೆ.

ನಿರ್ದಿಷ್ಟವಾಗಿ ಗಂಟಲು ಕ್ಯಾನ್ಸರ್‌ಗೆ ಸಂಬಂಧಿಸಿ ತಂಬಾಕು ಒಂದು ಪ್ರಧಾನ ಅಪಾಯ ಕಾರಣವಾಗಿದೆ. ತಂಬಾಕನ್ನು ಧೂಮವಾಗಿ ಉಪಯೋಗಿಸಿದಾಗ ಅಥವಾ ಜಗಿದಾಗ ಅದರಲ್ಲಿ ಇರುವ ರಾಸಾಯನಿಕಗಳು ಗಂಟಲಿನ ಒಳಗಿನ ಅಂಗಾಂಶಗಳಿಗೆ ಹಾನಿ ಮತ್ತು ತೊಂದರೆಯನ್ನು ಉಂಟು ಮಾಡುತ್ತವೆ. ಇದರಿಂದಾಗಿ ಈ ಭಾಗದಲ್ಲಿ ಕ್ಯಾನ್ಸರ್‌ ಕಾರಕ ಬೆಳವಣಿಗೆಗಳು ಉಂಟಾಗಲು ಪೂರಕವಾದ ವಾತಾವರಣ ನಿರ್ಮಾಣವಾಗುತ್ತದೆ.

ಇಷ್ಟಲ್ಲದೆ ತಂಬಾಕು ಬಳಕೆಯು ಗಂಟಲು ಕ್ಯಾನ್ಸರ್‌ನ ಇತರ ಅಪಾಯ ಕಾರಣಗಳಾಗಿರುವ ದೀರ್ಘ‌ಕಾಲೀನ ಉರಿಯೂತ ಮತ್ತು ಕುಗ್ಗಿದ ರೋಗನಿರೋಧಕ ಕಾರ್ಯಚಟುವಟಿಕೆಗಳ ಜತೆಗೂ ಸಂಬಂಧ ಹೊಂದಿದೆ. ಅಮೆರಿಕನ್‌ ಕ್ಯಾನ್ಸರ್‌ ಸೊಸೈಟಿಯ ಪ್ರಕಾರ ಗಂಟಲು ಕ್ಯಾನ್ಸರ್‌ಗೆ ತಂಬಾಕು ಬಳಕೆಯು ಅತ್ಯಂತ ಪ್ರಧಾನವಾದ ಅಪಾಯ ಕಾರಣವಾಗಿದ್ದು, ಗಂಟಲು ಕ್ಯಾನ್ಸರ್‌ಗಳಲ್ಲಿ ಶೇ. 85ರಷ್ಟು ಇದರಿಂದ ಉಂಟಾಗಿರುತ್ತವೆ. ಇದಲ್ಲದೆ ತಂಬಾಕು ಬಳಕೆಯ ಪ್ರಮಾಣ ಮತ್ತು ಅವಧಿ ಹೆಚ್ಚಿದಷ್ಟು ಗಂಟಲು ಕ್ಯಾನ್ಸರ್‌ ಉಂಟಾಗುವ ಅಪಾಯ ಕೂಡ ಹೆಚ್ಚುತ್ತದೆ.

ತಂಬಾಕು ಬಳಕೆ ಮತ್ತು ಕ್ಯಾನ್ಸರ್‌ಗಳ ನಡುವಣ ಸಂಕೀರ್ಣ ಸಂಬಂಧದ ವಿಷಯದಲ್ಲಿ ಇನ್ನಷ್ಟು ಮಾಹಿತಿಯನ್ನು ಹೊರಗೆಡಹುವುದಕ್ಕಾಗಿ ಅಧ್ಯಯನಗಳು ನಡೆಯುತ್ತಲೇ ಇವೆ. ಈ ಕಾಯಿಲೆಯನ್ನು ಸಮಗ್ರ ಶಿಕ್ಷಣ, ನೀತಿ ಬದಲಾವಣೆಗಳು ಮತ್ತು ವೈದ್ಯಕೀಯ ಮಧ್ಯಪ್ರವೇಶಗಳ ಮೂಲಕ ತಡೆಯುವುದು, ಚಿಕಿತ್ಸೆ ನೀಡುವುದಕ್ಕೆ ಈ ಅಧ್ಯಯನಗಳು ಬೆಂಬಲವಾಗಿವೆ.

Advertisement

ಒಟ್ಟಾರೆಯಾಗಿ ಹೇಳುವುದಾದರೆ ಧೂಮಪಾನವನ್ನು ಮತ್ತು ಇತರ ಸ್ವರೂಪಗಳಲ್ಲಿ ತಂಬಾಕು ಬಳಕೆಯನ್ನು ತ್ಯಜಿಸುವುದರಿಂದ ಗಂಟಲು ಕ್ಯಾನ್ಸರ್‌ ಉಂಟಾಗುವ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಒಟ್ಟು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಗಂಟಲು ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವನ್ನು ದೂರ ಮಾಡಲು ಕೆಲವು ಆರೋಗ್ಯಯುತ ಜೀವನ ವಿಧಾನ ಆಯ್ಕೆಗಳನ್ನು ಶಿಫಾರಸು ಮಾಡಲಾಗಿದೆ:

  1. ತಂಬಾಕು ಬಳಕೆ ತ್ಯಜಿಸಿ: ಇದು ಅತ್ಯಂತ ನಿರ್ಣಾಯಕವಾದ ಹೆಜ್ಜೆಯಾಗಿದೆ. ಧೂಮಪಾನವನ್ನು ಮತ್ತು ಇತರ ಯಾವುದೇ ಸ್ವರೂಪದಲ್ಲಿ ತಂಬಾಕು ಬಳಕೆಯನ್ನು ತ್ಯಜಿಸುವುದರಿಂದ ಗಂಟಲು ಕ್ಯಾನ್ಸರ್‌ಗೆ ತುತ್ತಾಗುವ ಅಪಾಯ ಗಣನೀಯವಾಗಿ ಕಡಿಮೆಯಾಗುತ್ತದೆಯಲ್ಲದೆ ಒಟ್ಟಾರೆ ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ.
  2. ಮದ್ಯಪಾನ ಮಿತಿಯಲ್ಲಿರಲಿ: ನೀವು ತಂಬಾಕು ಬಳಸುತ್ತಿರುವಿರಾದರೆ ಅದರ ಜತೆಗೆ ಅತಿಯಾದ ಮದ್ಯಪಾನವು ಗಂಟಲು ಕ್ಯಾನ್ಸರ್‌ನ ಅಪಾಯವನ್ನು ಇಮ್ಮಡಿಗೊಳಿಸುತ್ತದೆ. ಮದ್ಯಪಾನವನ್ನು ಕಡಿಮೆ ಮಾಡಿ ಅಥವಾ ಪೂರ್ಣ ತ್ಯಜಿಸಿ.
  3. ಸಮತೋಲಿತ ಆಹಾರ ಕ್ರಮ ಪಾಲಿಸಿ: ವೈವಿಧ್ಯಮಯ ಹಣ್ಣುಗಳು, ತರಕಾರಿ, ಇಡೀ ಧಾನ್ಯಗಳು ಮತ್ತು ಲೀನ್‌ ಪ್ರೊಟೀನ್‌ಗಳನ್ನು ಸೇವಿಸುವುದರತ್ತ ಗಮನ ಹರಿಸಿ. ಆರೋಗ್ಯಯುತ, ಸಮತೋಲಿತ ಆಹಾರವು ದೇಹಕ್ಕೆ ಒಟ್ಟು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸುವ ಮೂಲಕ ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡುತ್ತದೆ.
  4. ಆರೋಗ್ಯಯುತ ದೇಹತೂಕ ಕಾಪಾಡಿಕೊಳ್ಳಿ: ಸಮತೋಲಿತ ಆಹಾರ ಮತ್ತು ನಿಯಮಿತವಾದ ವ್ಯಾಯಾಮದ ಮೂಲಕ ಆರೋಗ್ಯಯುತ ದೇಹತೂಕವನ್ನು ಕಾಪಾಡಿ.
  5. ದೈಹಿಕವಾಗಿ ಚಟುವಟಿಕೆಯಿಂದ ಇರಿ: ನಿಯಮಿತವಾಗಿ ವ್ಯಾಯಾಮ ಮಾಡುವುದು ದೇಹತೂಕವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕೆ ಮಾತ್ರವೇ ಅಲ್ಲದೆ ರೋಗನಿರೋಧಕ ಶಕ್ತಿಯನ್ನು ಚೆನ್ನಾಗಿರಿಸಿಕೊಳ್ಳಲು ಸಹಾಯ ಮಾಡುವ ಮೂಲಕ ಕ್ಯಾನ್ಸರ್‌ ಅಪಾಯವನ್ನು ತಗ್ಗಿಸುತ್ತದೆ. ವಾರಕ್ಕೆ 150 ನಿಮಿಷಗಳ ಕಾಲ ಮಧ್ಯಮ ತೀವ್ರತೆಯ ವ್ಯಾಯಾಮ ಮಾಡುವ ಗುರಿ ಇರಿಸಿಕೊಳ್ಳಿ.
  6. ಬಾಯಿಯ ನೈರ್ಮಲ್ಯ ಚೆನ್ನಾಗಿ ಇರಿಸಿಕೊಳ್ಳಿ: ಬಾಯಿಯ ನೈರ್ಮಲ್ಯ ಕಳಪೆಯಾಗಿರುವುದು ಕೂಡ ಗಂಟಲು ಕ್ಯಾನ್ಸರ್‌ಗೆ ಕೊಡುಗೆ ನೀಡಬಲ್ಲುದು. ಹಲ್ಲುಗಳನ್ನು ನಿಯಮಿತವಾಗಿ ಬ್ರಶ್‌ ಮಾಡಿ ಮತ್ತು ಫ್ಲಾಸ್‌ ಮಾಡಿ, ನಿಯಮಿತವಾದ ತಪಾಸಣೆ ಮತ್ತು ಶುಚೀಕರಣ ಪ್ರಕ್ರಿಯೆಗಾಗಿ ದಂತವೈದ್ಯರನ್ನು ಭೇಟಿ ಮಾಡಿ.
  7. ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ: ನಿಮ್ಮ ಆರೋಗ್ಯ ಸೇವಾ ಪೂರೈಕೆದಾರರ ಬಳಿ ನಿಯಮಿತವಾಗಿ ತಪಾಸಣೆ, ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಗಂಟಲು ಕ್ಯಾನ್ಸರ್‌ನ ಯಾವುದೇ ಚಿಹ್ನೆಗಳನ್ನು ಬೇಗನೆ ಗುರುತಿಸಬಹುದಾಗಿದೆ. ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿದರೆ ಗುಣಪಡಿಸುವುದಕ್ಕೆ ಸುಲಭವಾಗಿರುತ್ತದೆ.

ಈ ಆರೋಗ್ಯಯುತ ಆಯ್ಕೆಗಳನ್ನು ಅಳವಡಿಸಿಕೊಂಡರೆ ತಂಬಾಕು ಬಳಕೆದಾರರು ಗಂಟಲು ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವನ್ನು ಕಡಿಮೆ ಮಾಡಿಕೊಂಡು ಆರೋಗ್ಯಯುತ ಬದುಕನ್ನು ನಡೆಸಬಹುದಾಗಿದೆ.

-ಡಾ| ಹರೀಶ್‌ ಇ.,

ಸರ್ಜಿಕಲ್‌ ಆಂಕಾಲಜಿಸ್ಟ್‌

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ,

ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಂಕಾಲಜಿ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next