ಕೋತಿ, ಅಡುಗೆ ಮನೆಯಲ್ಲಿ ನೇತು ಹಾಕಿದ್ದ ಬೆಣ್ಣೆಯನ್ನು ತಿನ್ನಲು ಹೊಂಚು ಹಾಕಿತು. ಅಂತಿಂತೂ ಬೆಣ್ಣೆ ಇದ್ದ ಗಡಿಗೆ ಕೋತಿಯ ಕೈ ಸೇರಿತು. ಇನ್ನೇನು ಅದರೊಳಗೆ ಕೈ ಹಾಕಬೇಕು ಎನ್ನುವಷ್ಟರಲ್ಲಿ ಮನೆಯ ಯಜಮಾನತಿ ಪ್ರತ್ಯಕ್ಷಳಾದಳು!
ಒಂದು ಸಲ ಅದೆಲ್ಲಿಂದಲೋ ಒಂದು ಕೋತಿ ಊರೊಳಗೆ ಬಂದು ಬಿಟ್ಟಿತು. ಊರಿನಲ್ಲಿರುವ ಮನೆಗಳನ್ನೆಲ್ಲ ಒಂದೊಂದಾಗಿ ನೋಡಿಕೊಂಡು ತಿರುಗಾಡುತ್ತಿತ್ತು. ಹೀಗೆ ತಿರುಗಾಡುತ್ತಿರಬೇಕಾದರೆ, ಒಂದು ಮನೆಯ ಅಡಿಗೆ ಮನೆಯ ಕಿಟಕಿ ತೆರೆದಿರುವುದು ಕಂಡಿತು. ನಿಧಾನಕ್ಕೆ ಕಿಟಕಿಯಿಂದ ಅಡುಗೆ ಮನೆಯ ಒಳಗೆ ಇಣುಕಿ ನೋಡಿತು. ಒಳಗೆ, ಹಗ್ಗದ ಕುಣಿಕೆಯೊಂದರಲ್ಲಿ ನೇತು ಹಾಕಿದ್ದ ಗಡಿಗೆ ಕಂಡಿತು. ಅದರೊಳಗೆ ಬೆಣ್ಣೆಯನ್ನು ಇಟ್ಟಿದ್ದರು. ಮನೆಯಲ್ಲಿದ್ದ ಬೆಕ್ಕಿಗೆ ಎಟುಕದಿರಲಿ ಎಂದು ಗಡಿಗೆಯನ್ನು ಗೂಟಕ್ಕೆ ತೂಗು ಹಾಕಿದ್ದರು. ಮನೆಯಲ್ಲಿ ಯಾರೂ ಇರಲಿಲ್ಲ.
ಗಡಿಗೆಯಲ್ಲಿ ಇಟ್ಟಿರುವ ಬೆಣ್ಣೆಯನ್ನು ಹೇಗೆ ತಿನ್ನುವುದು ಎಂದು ಕೋತಿ ಯೋಚಿಸತೊಡಗಿತು. ಆಗ ಅದಕ್ಕೊಂದು ಉಪಾಯ ಹೊಳೆಯಿತು. ಅದು ತನ್ನ ಬಾಲವನ್ನು ಕಿಟಕಿಯಲ್ಲಿ ತೂರಿಸಿತು. ಬಾಲದಿಂದ ಗಡಿಗೆಯನ್ನು ನಿಧಾನಕ್ಕೆ ಕಿಟಕಿಯ ಹತ್ತಿರಕ್ಕೆ ಎಳೆದು ತಂದಿತು. ಗಡಿಗೆ ಕೋತಿಯ ಕೈಗೆ ಎಟುಕುವಷ್ಟು ಹತ್ತಿರ ಬಂತು. ಇನ್ನೇನು ಅದು ಬೆಣ್ಣೆಯ ಗಡಿಗೆಯಲ್ಲಿ ಕೈ ಹಾಕಬೇಕು ಎನ್ನುವಷ್ಟರಲ್ಲಿ, ದೂರದಲ್ಲಿ ಮನೆಯೊಡತಿಯು ತನ್ನ ಮಗನೊಂದಿಗೆ ಮಾತನಾಡಿಕೊಂಡು ಬರುತ್ತಿದ್ದದ್ದು ಕಾಣಿಸಿತು. ಅವರು ಮನೆಯೊಳಕ್ಕೆ ಬರುತ್ತಿದ್ದಂತೆಯೇ ಕೋತಿಯ ಜಂಘಾಬಲ ಉಡುಗಿಹೋಯಿತು. ಇನ್ನೇನು ತಾನು ಸಿಕ್ಕಿಬಿದ್ದೆ ಎಂದು ಹೆದರಿತು. ಭಯದಿಂದ ಗಡಿಗೆಯನ್ನು ತಳ್ಳಿ ತಾನು ಓಡಿ ಹೋಯಿತು.
ಕುಣಿಕೆ ಅತ್ತಿತ್ತ ಓಲಾಡತೊಡಗಿತು. ಅದೇ ಸಮಯಕ್ಕೆ ಅಡುಗೆಮನೆಯ ಒಲೆಯ ಬಳಿ ಮಲಗಿದ್ದ ಬೆಕ್ಕಿಗೆ ಯಜಮಾನತಿಯ ದನಿ ಕೇಳಿ ಎಚ್ಚರವಾಯಿತು. ಅದು ಎದ್ದು ಮೈಮುರಿಯುತ್ತಾ “ಮ್ಯಾವ್…’ ಎಂದಿತು. ಓಲಾಡುವ ರಭಸದಲ್ಲಿ ಕುಣಿಕೆಯೊಳಗಿದ್ದ ಮಡಕೆ ಪಕ್ಕಕ್ಕೆ ವಾಲತೊಡಗಿತು. ಇದನ್ನು ಕಂಡದ್ದೇ ತಡ, ತಿಂಗಳುಗಳಿಂದ ಬೆಣ್ಣೆಯ ಮೇಲೆ ಕಣ್ಣಿಟ್ಟಿದ್ದ ಬೆಕ್ಕು ವಾಲಿದ ಮಡಕೆಯ ಬಳಿ ಓಡಿ ಬಂದಿತು. ಬೆಣ್ಣೆ ಕೆಳಕ್ಕೆ ಬೀಳುತ್ತಿದೆ ಎಂಬ ಆಸೆಯಿಂದ ತನ್ನ ಬಾಯನ್ನು ಅಗಲಕ್ಕೆ ತೆಗೆದು ನಿಂತುಕೊಂಡಿತು. ಬೆಣ್ಣೆ ನಿಧಾನವಾಗಿ ಬೆಕ್ಕಿನ ಬಾಯೊಳಗೆ ಬಿತ್ತು.
ಅದೇ ಹೊತ್ತಿಗೆ ಬಾಗಿಲು ತೆಗೆದು ಒಳಗೆ ಬಂದ ಮನೆಯೊಡತಿ ಒಳಗಿನ ದೃಶ್ಯವನ್ನು ನೋಡಿದಳು. ಮೂಲೆಯಲ್ಲಿದ್ದ ಕೋಲನ್ನು ಕೈಯಲ್ಲಿ ಹಿಡಿದು “ಎಲಾ… ಹಾಳಾದ ಬೆಕ್ಕೆ’ ಎಂದು ಬೆಕ್ಕನ್ನು ಹೊಡೆಯಲು ಬಂದಳು. ಬೆಕ್ಕು ಆಕೆಯ ಕೈಗೆ ಸಿಗುತ್ತದೆಯೇ? ಅದು ಬೆಣ್ಣೆ ತಿಂದ ಬಾಯನ್ನು ನಾಲಗೆಯಿಂದ ನೆಕ್ಕಿಕೊಳ್ಳುತ್ತ ತನ್ನ ಕೆಲಸವಾಯೆ¤ಂದು ಓಡಿ ಹೋಯಿತು. ಗಡಿಗೆಯಲ್ಲಿ ಬೆಣ್ಣೆ ಇನೂ ಉಳಿದಿತ್ತು. ಸ್ವಲ್ಪ ಸ್ವಲ್ಪವಾಗಿಯೇ ನೆಲದ ಮೇಲೆ ಬೀಳುತ್ತಿತ್ತು.
ಅಲ್ಲೇ ಇದ್ದ ಮನೆಯೊಡತಿಯ ಚಿಕ್ಕ ಮಗ, “ಅಮ್ಮ ಬೆಣ್ಣೆ ಕೊಡು ಅಂದ್ರೆ, ತುಪ್ಪ ಕಾಯಿಸ್ತೀನಿ ತಡಿಯೋ ಅನ್ನುತ್ತಿದ್ದೆ. ಈಗ ನೋಡು ಬೆಣ್ಣೆ ಕೆಳಗೆ ಬಿದ್ದು ಹಾಳಾಗುತ್ತೆ’ ಎಂದು ಬೆಕ್ಕಿನಂತೆಯೇ ತಾನು ಕೂಡಾ ಗಡಿಗೆಯ ಕೆಳಗೆ “ಆ…’ ಎಂದು ಬಾಯೆ¤ರೆದು ನಿಂತನು. ಬೆಕ್ಕಿನ ಬಾಯಲ್ಲಿ ಬೀಳುತ್ತಿದ್ದ ಬೆಣ್ಣೆ ಈಗ ಹುಡುಗನ ಹೊಟ್ಟೆ ಸೇರತೊಡಗಿತ್ತು. ಮಗನ ಭಂಗಿಯನ್ನು ನೋಡುತ್ತ ಅಮ್ಮ ಹೊಟ್ಟೆಹುಣ್ಣಾಗುವಂತೆ ನಗತೊಡಗಿದಳು. ಇದನ್ನೆಲ್ಲ ದೂರದಿಂದ ನೋಡುತ್ತಾ ಕುಳಿತಿದ್ದ ಕೋತಿ, “ಅಯ್ಯೋ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎನ್ನುತ್ತಾ ಅಲ್ಲಿಂದ ಕಾಲೆ¤ಗೆಯಿತು.
– ಪ್ರೇಮಾ ಬಿರಾದಾರ