ಹೊಸದಿಲ್ಲಿ: ನೀವು ಟಿಕ್ ಟಾಕ್ ನಲ್ಲಿ ಕ್ರಿಯಾಶೀಲರಾಗಿದ್ದೀರಾ? ಹಲವು ಹಾಡುಗಳಿಗೆ, ಡೈಲಾಗ್ ಗಳಿಗೆ ಅಭಿನಯ ಮಾಡಿದ್ದೀರಾ? ಟಿಕ್ ಟಾಕ್ ಜತೆ ದಿನದ ಬಹುತೇಕ ಸಮಯವನ್ನು ವ್ಯಯಿಸುತ್ತಿದ್ದೀರಾ? ಹಾಗಿದ್ದಲ್ಲಿ ನಿಮ್ಮ ಪ್ರತಿಭಾ ಪ್ರದರ್ಶನಕ್ಕೆ ಪುಣೆಯಲ್ಲೊಂದು ವೇದಿಕೆ ಸಿದ್ಧವಾಗಿದೆ.
ಹೌದು, ಇತ್ತೀಚಿನ ದಿನಗಳಲ್ಲಿ ಟಿಕ್ ಟಾಕ್ ಭಾರೀ ಸದ್ದು ಮಾಡುತ್ತಿದ್ದು, ಹಲವು ಕಲಾವಿದರು ಟಿಕ್ ಟಾಕ್ ಮೂಲಕ ಬೆಳಕಿಗೆ ಬಂದ ಅದೆಷ್ಟೋ ಉದಾಹರಣೆಗಳಿವೆ. ಇಂತಹ ಪ್ರತಿಭೆಯನ್ನು ಗುರುತಿಸಲು ಪುಣೆಯಲ್ಲಿ ಟಿಕ್ ಟಾಕ್ ಚಲನಚಿತ್ರ ಹಬ್ಬ ಏರ್ಪಡಿಸಲಾಗಿದೆ. ಇದು ಜಗತ್ತಿನ ಮೊದಲ ಟಿಕ್ ಟಾಕ್ ಪೆಸ್ಟಿವಲ್ ಎಂಬ ಖ್ಯಾತಿಯನ್ನು ಪಡೆದಿದೆ.
ಅಗಸ್ಟ್ 20ರವರೆಗೆ ಇದು ನಡೆಯಲಿದ್ದು, ವಿಜೇತರಿಗೆ ಪುರಸ್ಕಾರಗಳ ಜತೆಗೆ ಸರ್ಟಿಫಿಕೆಟ್ ಅನ್ನೂ ನೀಡಲಾಗುತ್ತಿದೆ. ಟ್ರೋಫಿಯ ಜತೆಗೆ ಪ್ರಥಮ ಬಹುಮಾನವಾಗಿ 33,333, ದ್ವಿತೀಯ ಬಹುಮಾನವಾಗಿ 22,222 ರೂ., ತೃತೀಯ 5,555 ರೂ. ಹಾಗೂ ಚತುರ್ಥ ತಂಡಕ್ಕೆ 3,333 ರೂ. ನೀಡಲಾಗುತ್ತದೆ.
ಈ ಸ್ಪರ್ಧೆಯನ್ನು 12 ವಿಭಾಗಗಳನ್ನಾಗಿ ಮಾಡಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ ಬೆಸ್ಟ್ ಕಾಮೆಡಿ, ಬೆಸ್ಟ್ ಫೀಲಿಂಗ್, ಬೆಸ್ಟ್ ಕಪಲ್, ಬೆಸ್ಟ್ ಸೋಶಿಯಲ್, ಬೆಸ್ಟ್ ಹಾರರ್, ಬೆಸ್ಟ್ ಡಾನ್ಸ್, ಬೆಸ್ಟ್ ಮೋಟಿವೇಶನ್, ಬೆಸ್ಟ್ ಕ್ರಿಯೇಟಿವ್ ಎಂದು ವಿಭಾಗಿಸಲಾಗಿದೆ. ಇವುಗಳಲ್ಲಿ ಸಾಮಾಜಿಕ ಜಾಗೃತಿ ಹಾಗೂ ಪರಿಸರ ಸ್ನೇಹಿಯಾದ ವೀಡಿಯೋಗಳಿಗೂ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಸಂಘಟಕ ಪ್ರಕಾಶ್ ಯಾದವ್ ಹೇಳಿದ್ದಾರೆ.
ಕಾಲೇಜು ಕ್ಯಾಂಪಸ್‌ಗಳು, ಪ್ರವಾಸಿ ತಾಣಗಳಲ್ಲಿ ಯುವಕ – ಯುವತಿಯರು ಟಿಕ್ ಟಾಕ್ ಮಾಡುತ್ತಿದ್ದಾರೆ. ಅವರ ಪ್ರತಿಭೆಗಳಿಗೆ ವೇದಿಕ ಕಲ್ಪಿಸುವುದು ನಮ್ಮ ಕರ್ತವ್ಯ ಎಂದು ಅವರು ಹೇಳಿದ್ದಾರೆ. ಈ ಉದ್ದೇಶದಿಂದ ಪುಣೆಯಲ್ಲಿ ಟಿಕ್ ಟಾಕ್ ಫಿಲಂ ಫೆಸ್ಟಿವಲ್ ಏರ್ಪಡಿಸಲಾಗಿದೆ ಎಂದಿದ್ದಾರೆ.
ಒಬ್ಬರಿಗೆ 3 ವೀಡಿಯೋ ಮೂಲಕ ಸ್ಪರ್ಧೆ ಮಾಡುವ ಅವಕಾಶ ಕಲ್ಪಿಸಲಾಗಿದೆ. 5 ಸೆಕೆಂಡ್ ಗಿಂತ ಹೆಚ್ಚು, 1 ನಿಮಿಷಗಳ ಒಳಗೆ ವೀಡಿಯೋ ಇರಬೇಕು. ಸ್ಪರ್ಧೆಯ ಮೊದಲೇ ರಿಜಿಸ್ಟ್ರೇಶನ್ ಮಾಡಿಸಬೇಕಾಗಿದೆ.