ನವದೆಹಲಿ : ದಕ್ಷಿಣ ಆಫ್ರಿಕಾದಿಂದ ಎಂಟು ಚಿರತೆಗಳನ್ನು ಭಾರತಕ್ಕೆ ತರಲು ವಿಮಾನವೊಂದು ಸಜ್ಜುಗೊಂಡಿದ್ದು ವಿಮಾನದ ಮುಂಭಾಗ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಯ ಮುಖದ ಚಿತ್ರವನ್ನು ಚಿತ್ರೀಕರಿಸಲಾಗಿದೆ ಎಂದು ನಮೀಬಿಯಾದಲ್ಲಿರುವ ಭಾರತದ ಹೈಕಮಿಷನ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದೆ.
ಸೆಪ್ಟೆಂಬರ್ 17 ರಂದು ನಮಿಬಿಯಾದಿಂದ ಎಂಟು ಚಿರತೆಗಳನ್ನು ಭಾರತಕ್ಕೆ ತರಲಾಗುತ್ತಿದೆ ಇದರಲ್ಲಿ ಐದು ಹೆಣ್ಣು ಮತ್ತು ಮೂರು ಗಂಡು ಚಿರತೆಗಳು ಎನ್ನಲಾಗಿದೆ.
ಮಧ್ಯ ಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿರುವ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಈ ಎಂಟು ಚಿರತೆಗಳನ್ನು ತರಲಾಗುತ್ತಿದೆ ಅಲ್ಲದೆ ಮೊದಲಿಗೆ ಅವುಗಳನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ಅರಣ್ಯ ಸಂರಕ್ಷಣಾಧಿಕಾರಿ ಹೇಳಿದ್ದಾರೆ.
ದೇಶದಲ್ಲಿ ಮತ್ತೆ ಚೀತಾ ಸಂತತಿಯನ್ನು ಬೆಳೆಸುವ ಉದ್ದೇಶದೊಂದಿಗೆ ನಮೀಬಿಯಾದಿಂದ ಚೀತಾಗಳನ್ನು ತರುವ ಪ್ರಕ್ರಿಯೆ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದೇ ಇವುಗಳು ಭಾರತ ಪ್ರವೇಶಿಸಲಿವೆ.
ಅದರಂತೆ ಚಿರತೆಗಳನ್ನು ಭಾರತಕ್ಕೆ ಕರೆತರಲು ವಿಶೇಷ ವಿಮಾನವನ್ನೂ ಸಜ್ಜುಗೊಳಿಸಲಾಗಿದೆ.