Advertisement

ಟಿಕೆಟ್‌ ಒಬ್ಬರ ನಿರ್ಧಾರವಲ್ಲ; ಕೈ ಪಾಳಯದಲ್ಲಿ ಅಸಮಾಧಾನ ಸ್ಫೋಟ

12:14 AM Sep 19, 2022 | Team Udayavani |

ಬೆಂಗಳೂರು: ಕಾಂಗ್ರೆಸ್‌ ಪಕ್ಷದಲ್ಲಿ ಚುನಾವಣೆ ಟಿಕೆಟ್‌ ಬಗ್ಗೆ ಈಗಲೇ ಬಹಿರಂಗ ಹೇಳಿಕೆಗಳ ವರಸೆ ಆರಂಭವಾಗಿದ್ದು, “ಟಿಕೆಟ್‌ ಯಾರಿಗೆ ಎಂಬು ದನ್ನು ಯಾರೋ ಒಬ್ಬರೇ ತೀರ್ಮಾನಿಸುವುದು ಅಲ್ಲ’ ಎಂದು ಕೆಲವು ನಾಯಕರು ಪ್ರತಿಕ್ರಿಯಿಸಿದ್ದಾರೆ.

Advertisement

“ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಕುದುರೆಯ ಬಗ್ಗೆ ಖಾಸಗಿ ಪತ್ರ ಪಡೆದು ಕೊಂಡು ವರಿಷ್ಠರ ಮುಂದಿಡುವ’ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿಕೆ ಈಗ ಕೈ ಪಾಳಯದಲ್ಲಿ ಅಸಮಾಧಾನದ ಹೊಗೆಯಾಡುವಂತೆ ಮಾಡಿದೆ.

ಹಾಗೆಯೇ ಭಾರತ್‌ ಜೋಡೋ ಯಾತ್ರೆಯಲ್ಲಿ ಕೆಲಸ ಮಾಡದ ಶಾಸಕರಿಗೆ ಟಿಕೆಟ್‌ ನೀಡುವುದಿಲ್ಲ ಎಂಬ ಹೇಳಿಕೆಯೂ ಚರ್ಚೆಗೆ ಕಾರಣವಾಗಿದೆ. ಮಾಜಿ ಸಚಿವರಾದ ಆರ್‌.ವಿ. ದೇಶಪಾಂಡೆ, ಬಸವರಾಜ ರಾಯರೆಡ್ಡಿ ಮತ್ತು ದಿನೇಶ್‌ ಗುಂಡೂರಾವ್‌ ರವಿವಾರ ನೀಡಿದ ಹೇಳಿಕೆ ಡಿ.ಕೆ. ಶಿವಕುಮಾರ್‌ಗೆ ನೀಡಿದ ಟಾಂಗ್‌ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

“ಟಿಕೆಟ್‌ ವಿಚಾರವನ್ನು ಒಬ್ಬರು ತೀರ್ಮಾನಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಅನೇಕ ಸಮಿತಿಗಳಿವೆ. ಎಲ್ಲರ ಅಭಿಪ್ರಾಯ ಪಡೆಯಬೇಕಾಗುತ್ತದೆ. ಮೊದಲುಅಲ್ಲಿ ಚರ್ಚೆ ಮಾಡಬೇಕಾಗುತ್ತದೆ. ಬಳಿಕ ಟಿಕೆಟ್‌ ಅಂತಿಮ ಆಗಲಿದೆ’ ಎಂದು ದಿನೇಶ್‌ ಹೇಳಿದರು.

ರಾಯಚೂರಿನಲ್ಲಿ ಮಾತನಾಡಿದ ಮಾಜಿ ಸಚಿವ ರಾಯರೆಡ್ಡಿ, “ಸಿಎಲ್‌ಪಿ ನಾಯಕರಿದ್ದಾರೆ. ಚುನಾವಣ ಸಮಿತಿ ಇದೆ. ಅದು ಟಿಕೆಟ್‌ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಇಲ್ಲಿ ಒಬ್ಬರ ತೀರ್ಮಾನ ಅಂತಿಮವಾಗಿರುವುದಿಲ್ಲ. ಎಲ್ಲರೂ ಒಟ್ಟಿಗೆ ಕುಳಿತು ನಿರ್ಧರಿಸುತ್ತಾರೆ’ ಎಂದು ಸೂಚ್ಯವಾಗಿ ಹೇಳಿದರು.

Advertisement

ಈ ಮಧ್ಯೆಯೇ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆಗೆ ನಮ್ಮ ಕ್ಷೇತ್ರದಿಂದ ಜನ ಕರೆತರಲು ಆಗುವುದಿಲ್ಲ ಎಂದು ಮಾಜಿ ಸಚಿವ ಆರ್‌.ವಿ. ದೇಶಪಾಂಡೆ “ಅಸಹಕಾರ’ ವ್ಯಕ್ತಪಡಿಸಿದ್ದಾರೆ. ಟಿಕೆಟ್‌ ತೀರ್ಮಾನ ಮಾಡುವುದು ಹೈಕಮಾಂಡ್‌ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರ ಭಾರತ ಜೋಡೊ ಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ರವಿವಾರ ರಾಜ್ಯ ಸಮಿತಿ ಅಧ್ಯಕ್ಷರ ಪಟ್ಟಿ ಪ್ರಕಟಿಸಿದ್ದು, ಆ ಪಟ್ಟಿಯಲ್ಲಿ ಆರ್‌.ವಿ. ದೇಶಪಾಂಡೆ ಅವರ ಹೆಸರಿಲ್ಲದಿರುವುದು ಚರ್ಚೆಗೆ ಗ್ರಾಸವಾಗಿದೆ.

ಡಿಕೆಶಿ ಹೇಳಿದ್ದೇನು?
ನಮಗೆ ಪ್ರತೀ ಕ್ಷೇತ್ರವೂ ಮುಖ್ಯ. ಕೆಲವರು ನನ್ನನ್ನು ಬಿಟ್ಟರೆ ನಮ್ಮ ಕ್ಷೇತ್ರದಲ್ಲಿ ಏನು ಮಾಡಲು ಸಾಧ್ಯ ಎಂದು ಭಾವಿಸಿದ್ದಾರೆ. ಅದು ಅವರ ಭ್ರಮೆ. ಕೇರಳದಲ್ಲಿ ಸುಮಾರು 13 ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಿದ್ದನ್ನು ಕಾಣಬಹುದು. ಯಾರು ಯಾವ ಕ್ಷೇತ್ರದಲ್ಲಿ ಗೆಲ್ಲುತ್ತಾರೆ ಎಂಬ ಬಗ್ಗೆ ಪದಾಧಿಕಾರಿಗಳು ಮತ್ತು ಸಂಯೋಜಕರಿಂದ ನಾನು ಖಾಸಗಿ ಪತ್ರ ಪಡೆದುಕೊಂಡು, ಅದನ್ನು ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗೆ ನೀಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಇತ್ತೀಚೆಗೆ ನಡೆದ ಕೆಪಿಸಿಸಿ ಪದಾಧಿಕಾರಿಗಳು ಮತ್ತು ಸಂಯೋಜಕರ ಸಭೆಯಲ್ಲಿ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next