Advertisement

ತನಿಖೆಗೆ ಬರಲಿದೆ ರಾಜ್ಯ ಮಟ್ಟದ ತಜ್ಞರ ತಂಡ?

08:59 AM May 15, 2020 | mahesh |

ಮಂಗಳೂರು: ಪಡೀಲ್‌ನ ಫಸ್ಟ್‌ ನ್ಯೂರೋ ಆಸ್ಪತ್ರೆಯ ಸಂಪರ್ಕ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರವು ಉನ್ನತ ಮಟ್ಟದ ತನಿಖೆಗೆ ಬೆಂಗಳೂರಿನಿಂದಲೂ ಪರಿಣತರ ತಂಡವನ್ನು ಕಳುಹಿಸಲು ಮುಂದಾಗಿದೆ. ಬೆಂಗಳೂರಿನ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ತಜ್ಞರ ತಂಡದ ನೇತೃತ್ವದಲ್ಲಿ ತನಿಖೆ ನಡೆಯಲಿದೆ ಎಂದು ಉನ್ನತ ಮೂಲವೊಂದು “ಉದಯವಾಣಿ’ಗೆ ತಿಳಿಸಿದೆ.

Advertisement

3 ಜಿಲ್ಲೆಗೆ ಸೋಂಕು
ಜಿಲ್ಲೆಯಲ್ಲಿ ಕೋವಿಡ್ ಸೋಂಕು ವ್ಯಾಪಕಗೊಳ್ಳಲು ಪಡೀಲ್‌ನ ಆಸ್ಪತ್ರೆ ಹಾಗೂ ಬಂಟ್ವಾಳದ ಕಸ್ಬಾ ಪ್ರದೇಶ ಕಾರಣವಾಗಿದ್ದು, ಈ ಎರಡು ಜಾಗಗಳಿಗೆ ಕೋವಿಡ್ ಎಲ್ಲಿಂದ ಬಂದಿದೆ ಎನ್ನುವುದನ್ನು ಇಲ್ಲಿವರೆಗೆ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಅದರಲ್ಲಿಯೂ ಒಂದೇ ಆಸ್ಪತ್ರೆಯ ಸಂಪರ್ಕದಿಂದ ದ.ಕ. ಜಿಲ್ಲೆಯ 18, ಉತ್ತರ ಕನ್ನಡ ಜಿಲ್ಲೆ ಭಟ್ಕಳದ 21 ಮಂದಿ ಹಾಗೂ ಉಡುಪಿ ಮೂಲದ ಇಬ್ಬರ ಸಹಿತ 41 ಮಂದಿಗೆ ಕೊರೊನಾ ತಗಲಿದೆ.

ಜಿಲ್ಲಾಡಳಿತ ನೇತೃತ್ವದ ತಜ್ಞರ ತಂಡವು ಪರಿಶೀಲನೆ ನಡೆಸಿ ಫಸ್ಟ್‌ ನ್ಯೂರೋಕ್ಕೆ ಕೇರಳದ ಕಡೆಯಿಂದ ಸೋಂಕು ಹರಡಿರುವ ಅನುಮಾನ ವ್ಯಕ್ತಪಡಿಸಿದ್ದು, ಹೆಚ್ಚಿನ ತನಿಖೆಗೆ ಕೇರಳ ಸರಕಾರದ ಕಡೆಯಿಂದ ಮಾಹಿತಿ ಪಡೆಯಬೇಕಾಗಿದೆ ಎಂದಿದೆ. ಅದರಂತೆ ಆ ಆಸ್ಪತ್ರೆಗೆ ನಿಗದಿತ ಅವಧಿಯಲ್ಲಿ ಕೇರಳದಿಂದ ಬಂದು ಚಿಕಿತ್ಸೆ ಪಡೆದುಕೊಂಡವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುವಂತೆ ಕೋರಿ ಜಿಲ್ಲಾ ಆರೋಗ್ಯ ಇಲಾಖೆ ಕಡೆಯಿಂದ ರಾಜ್ಯ ಸರಕಾರಕ್ಕೆ ಪತ್ರ ಕೂಡ ಬರೆಯಲಾಗಿದೆ ಎನ್ನಲಾಗಿದೆ.

ಈ ನಡುವೆ ಮೂರು ವಾರ ಕಳೆದರೂ ಸೋಂಕಿನ ಮೂಲ ಪತ್ತೆ ಮಾಡದೆ ಇದೀಗ ಕೇರಳದ ಕಡೆಗೆ ಕೈತೋರಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ- ಆರೋಪಗಳು ಕೇಳಿಬರುತ್ತಿವೆ. ವಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಸಿಪಿಐ (ಎಂ) ಮುಖಂಡರು ಕೂಡ ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸುವ ಮೂಲಕ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುತ್ತಿವೆ. ಈ ನಡುವೆ ಸೋಂಕಿನ ಮೂಲದ ಬಗ್ಗೆ ಇಷ್ಟು ದಿನ ಮೌನ ವಹಿಸಿದ್ದ ಬಿಜೆಪಿ ನಾಯಕರ ಪೈಕಿ ಶಾಸಕ ಉಮಾನಾಥ ಕೋಟ್ಯಾನ್‌ ಅವರು ಪಡೀಲ್‌ ಆಸ್ಪತ್ರೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವುದು ವಿಶೇಷ.
ಸಚಿವರ ನಿರಾಕರಣೆ ಈ ನಡುವೆ ಬೆಂಗಳೂರಿನಿಂದ ತನಿಖೆಗೆ ತಜ್ಞರ ತಂಡವು ತನಿಖೆಗಾಗಿ ಮಂಗಳೂರಿಗೆ ಆಗಮಿಸುತ್ತಿರುವ ವಿಚಾರದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಉದಯವಾಣಿಗೆ ತಿಳಿಸಿದ್ದಾರೆ.

ಕೇರಳದ ಕಡೆಗೆ ಬೆಟ್ಟು!
ಬಂಟ್ವಾಳದ ಮಹಿಳೆಯ ಮೂಲಕವೇ ಕೋವಿಡ್ ಹರಡಿದೆ ಎಂದು ಹೇಳುವ ಪ್ರಯತ್ನವನ್ನು ಮಾಡಿದ್ದ ಕೆಲವರು ಇದೀಗ ಕೇರಳ ರಾಜ್ಯದ ಕಡೆಗೆ ಕೈ ತೋರಿಸುತ್ತಿದ್ದಾರೆ. ಕೇರಳದಿಂದ ಬಂದ ರೋಗಿಗಳ ಗಂಟಲ ದ್ರವ ಮಾದರಿಯನ್ನು ಪರೀಕ್ಷೆ ಮಾಡಲು ಅಲ್ಲಿನ ಸರಕಾರದೊಂದಿಗೆ ಮಾತನಾಡಿ, ಆ ರೋಗಿಗಳ ಗಂಟಲ ದ್ರವ ಮಾದರಿ ಪರೀಕ್ಷೆ ವರದಿಯನ್ನಾಧರಿಸಿ ಮೂಲ ನಿರ್ಧರಿಸಲು ಮುಂದಾಗಿದ್ದಾರೆ. ಈ ಒಟ್ಟು ಬೆಳವಣಿಗೆಗೆ ಇನ್ನೆಷ್ಟು ಸಮಯ ಹಿಡಿಯಬಹುದೋ ಗೊತ್ತಿಲ್ಲ.

Advertisement

2,218 ಮಂದಿಯ ತಪಾಸಣೆ ಅಗತ್ಯ!
ಆರೋಗ್ಯ ಇಲಾಖೆಯ ಮೂಲಗಳ ಮಾಹಿತಿ ಪ್ರಕಾರ, ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ಫೆ. 1ರಿಂದ ಎ.24ರ ನಡುವೆ ಕೇರಳದಿಂದ ಒಟ್ಟು 1,606 ಮಂದಿ ಹೊರರೋಗಿಗಳು ಮತ್ತು 612 ಮಂದಿ ಒಳರೋಗಿಗಳು ಚಿಕಿತ್ಸೆ ಪಡೆದು ತೆರಳಿದ್ದಾರೆ. ಹೀಗಿರುವಾಗ ವಾಸ್ತವದಲ್ಲಿ ಕೇರಳದಿಂದ ಬಂದು ಹೋದ 2,218 ಮಂದಿಯನ್ನೂ ಕೋವಿಡ್ ತಪಾಸಣೆಗೆ ಒಳಪಡಿಸಿದ ಬಳಿಕವಷ್ಟೇ ದಕ್ಷಿಣ ಕನ್ನಡದ ಕೋವಿಡ್ ಮೂಲ ಪತ್ತೆಯಾಗಬಹುದು ಎನ್ನುವುದು ತಜ್ಞ ವೈದ್ಯರ ತಂಡದ ಲೆಕ್ಕಾಚಾರ. ಆದರೆ ಕೇರಳ ಸರಕಾರವು ಕರ್ನಾಟಕದ ಈ ಮನವಿಗೆ ಯಾವ ರೀತಿ ಸ್ಪಂದಿಸಬಹುದು ಎನ್ನುವುದೇ ಬಹುದೊಡ್ಡ ಪ್ರಶ್ನೆ.

Advertisement

Udayavani is now on Telegram. Click here to join our channel and stay updated with the latest news.

Next