ಕಲಬುರಗಿ: ಜಿಲ್ಲೆಯ ಸೇಡಂ ವಿಧಾನಸಭಾ ಕ್ಷೇತ್ರದ ಹಾಗೂ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಕೆಲ ಹಳ್ಳಿಗಳಲ್ಲಿ ಕಳೆದೆರಡು ದಿನಗಳಿಂದ ಉಂಟಾಗುತ್ತಿರುವ ಭೂಕಂಪನದ ಸ್ಥಳಗಳಿಗೆ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲಿಸಲಿದೆ ಎಂದು ಸಂಸದ ಡಾ. ಉಮೇಶ ಜಾಧವ್ ಹಾಗೂ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ರಾತ್ರಿ 7.28 ಹಾಗೂ 7.29 ಕ್ಕೆ ಭೂಮಿ ಕಂಪಿಸಿದೆ. ಇದರಿಂದ ಜನ ಭಯಗೊಂಡು ಮನೆಯಿಂದ ಹೊರ ಬಂದಿದ್ದಾರೆ. ಕಂಪನವು 0.01 ಮಾಪನದಲ್ಲಿ ಆಗಿರುವುದರಿಂದ ರಿಕ್ಟರ್ ಮಾಪನದಲ್ಲಿ ದಾಖಲಾಗಿರುವುದಿಲ್ಲ.
ಇದನ್ನೂ ಓದಿ:ತಿಹಾರ್, ಹಿಂಡಲಗಾ ಜೈಲಿನಿಂದ ಹೊರಬಂದವರೇ ಕಾಂಗ್ರೆಸ್ ಪಕ್ಷಕ್ಕೆ ಶ್ರೇಷ್ಠರು: ಬಿಜೆಪಿ ಟೀಕೆ
ಭೂಕಂಪನಕ್ಕೆ ನಿಖರ ಕಾರಣಗಳು ತಿಳಿದು ಬರುತ್ತಿಲ್ಲ. ಹೀಗಾಗಿ ಭೂಗರ್ಭ ವಿಜ್ಞಾನಿಗಳ ತಂಡ ಕಳುಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರೊಂದಿಗೆ ಮಾತನಾಡಿ ವಿಷಯ ತಿಳಿಸಿದ್ದರಿಂದ ರಾಜ್ಯದ ಹಾಗೂ ಕೇಂದ್ರದಿಂದ ನುರಿತ ತಂಡ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದ್ದರಿಂದ ಎರಡು ದಿನದೊಳಗೆ ಭೂಗರ್ಭ ಶಾಸ್ತ್ರಜ್ಞರ ತಂಡ ಭೂಕಂಪನ ಬಾದಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಲಿದೆ ಎಂದು ವಿವರಿಸಿದರು.
ಜನ ಹೆಚ್ಚಿಗೆ ಭಯಭೀತರಾಗಿದ್ದರಿಂದ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನ ಜಾವದವರೆಗೂ ಸಂಚರಿಸಿ ಜನರಿಗೆ ಧೈರ್ಯ ತುಂಬಲಾಗಿದೆ. ಯಾವುದೇ ಕಾರಣಕ್ಕೂ ಜೀವಕ್ಕೆ ಅಪಾಯ ಎದುರಾಗುದಿಲ್ಲ. ನಾವಿದ್ದೇವೆ. ಸರ್ಕಾರವಿದೆ ಎಂದು ಮನೋಬಲ ಹೆಚ್ಚಿ ಸಲಾಗಿದೆ ಎಂದರು.
ಸಮೀಕ್ಷೆ: ಯಾವ,ಯಾವ ಮನೆಗಳು ಅಪಾಯಕ್ಕೆ ಸಿಲುಕುತ್ತವೆ ಹಾಗೂ ಎಲ್ಲ ಜನರಿಗೆ ಊರ ಹೊರಗೆ ಶೆಡ್ ಹಾಕಿ ಸೌಲಭ್ಯ ಕಲ್ಪಿಸುವ ಕುರಿತಾಗಿ ಅವಲೋಕಿಸಲು ಸಮೀಕ್ಷೆ ನಡೆಸಲಾಗುವುದು. ಅಪಾಯದ ಅಂದರೆ ಶಿಥಿಲಾವಸ್ಥೆಯ ಮನೆಗಳನ್ನು ನೆಲಸಮಗೊಳಿಸಿ ಪಕ್ಕಾ ಮನೆಗಳನ್ನು ಸರ್ಕಾರದಿಂದ ನಿರ್ಮಿಸಿ ಕೊಡಲಾಗುವುದು. ಹೊಸದಾಗಿ ಮನೆಗಳ ನಿರ್ಮಾಣ ಮಾಡಿ ಕೊಡುವ ನಿಟ್ಟಿನಲ್ಲಿ ಸಿಎಂ ಹಾಗೂ ವಸತಿ ಸಚಿವರೊಂದಿಗೆ ಮಾತನಾಡಲಾಗಿದೆ ಎಂದು ಸಂಸದ ಹಾಗೂ ಶಾಸಕರು ತಿಳಿಸಿದೆ.