ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮತದಾನ ಪ್ರಕ್ರಿಯೆ ಹಾಗೂ ಅದಕ್ಕಾಗಿ ಮಾಡಿಕೊಂಡಿರುವ ಸಿದ್ಧತೆಗಳನ್ನು ವೀಕ್ಷಿಸಲು 5 ದೇಶಗಳ ಚುನಾವಣ ಆಯೋಗದ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಸೋಮವಾರ ಬೆಳಗಾವಿಗೆ ಭೇಟಿ ನೀಡಿದರು.
ಚುನಾವಣ ಆಯೋಗದ ಆಹ್ವಾನದ ಮೇರೆಗೆ ಕಾಂಬೋಡಿಯಾ, ನೇಪಾಲ, ಟ್ಯುನಿಸಿಯಾ, ಮೊಲ್ಡೋವಾ ಹಾಗೂ ಸಿಷೆಲ್ ದೇಶಗಳಿಂದ ಬಂದಿರುವ 10 ಅಧಿಕಾರಿಗಳ ತಂಡವು ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ ಸಿದ್ಧತೆ ಹಾಗೂ ವಿವಿಧ ಹಂತದ ಪ್ರಕ್ರಿಯೆಗಳನ್ನು ವೀಕ್ಷಿಸಿತು.
ಕಾಂಬೋಡಿಯಾದ ರಾಷ್ಟ್ರೀಯ ಚುನಾವಣ ಮಂಡಳಿ ಸದಸ್ಯ ಹೆಲ್ ಸರಾಥ್, ಕಾಂಬೋಡಿಯಾದ ಚುನಾವಣ ಮಂಡಳಿ ಮುಖ್ಯ ಕಾರ್ಯದರ್ಶಿ ಹೌಟ್ ಬೋರಿನ್, ಮೊಲ್ಡೊವಾದ ಕೇಂದ್ರ ಚುನಾವಣ ಆಯೋಗದ ಸದಸ್ಯೆ ಡಾ| ನಾ ಮಂಟೇನುವಾ, ಆಯೋಗದ ಸ್ಥಳೀಯ ಜಿಲ್ಲಾ ಚುನಾವಣ ಪರಿಷತ್ ಮುಖ್ಯಸ್ಥ ಆ್ಯಡ್ರಿಯನ್ ಗಮರ್ತಾ ಎಸಾನು, ನೇಪಾಲದ ಮುಖ್ಯ ಚುನಾವಣ ಆಯುಕ್ತ ದಿನೇಶ್ ಕುಮಾರ್ ಥಾಪಾಲಿಯಾ, ಸಿಷೆಲ್ ದೇಶದ ಚುನಾವಣ ಆಯೋಗದ ಮುಖ್ಯಸ್ಥ ಡ್ಯಾನಿ ಸಿಲ್ವಾ ಲುಕಾಸ್, ಆಯುಕ್ತ ನೊರ್ಲಿಸ್ ನಿಕೋಲಸ್ ರೋಸ್ ಹೋರೌ, ಟ್ಯುನಿಷಿಯಾದ ಇಂಡಿಪೆಂಡೆಂಟ್ ಎಲೆಕ್ಷನ್ ಹೈಕಮಿಷನ್‌ನ ಅಧಿಕೃತ ವಕ್ತಾರ ಎಂ.ಎಂ.ಟಿಲಿ, ಪ್ರಾದೇಶಿಕ ನಿರ್ದೇಶಕ ಜೆಲ್ಲಾಲಿ ನಬೀಲ್ ಈ ತಂಡದಲ್ಲಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ್ ಅವರಿಂದ ಸಮಗ್ರ ಮಾಹಿತಿ ಪಡೆದುಕೊಂಡ ಅಧಿಕಾರಿಗಳು ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬಂದಿ ಜತೆಗೆ ಸಂವಾದ ನಡೆಸಿ ತಮ್ಮ ದೇಶದ ಮತ್ತು ಭಾರತದ ಚುನಾವಣೆ ವ್ಯವಸ್ಥೆಗಿರುವ ವ್ಯತ್ಯಾಸದ ಕುರಿತು ಅಭಿಪ್ರಾಯ ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ನೇಪಾಲದ ಚುನಾವಣ ಆಯೋಗದ ಅಧೀನ ಕಾರ್ಯದರ್ಶಿ ಥಾನೇಶ್ವರ ಬುಸಾಲ್, ಭಾರತದಲ್ಲಿ ಚುನಾವಣೆ ಪ್ರಕ್ರಿಯೆ ಶಿಸ್ತುಬದ್ಧವಾಗಿ ನಡೆಯುತ್ತದೆ. ಇಲ್ಲಿ ಸಿಬಂದಿಗೆ ಹೆಚ್ಚಿನ ತರಬೇತಿ ನೀಡಲಾಗಿದೆ. ಈ ವಿಧಾನದಿಂದ ಚುನಾವಣೆ ವೆಚ್ಚ ತಗ್ಗಿಸಬಹುದು. ಭಾರತೀಯರು ಚುನಾವಣೆ ಮೇಲಿಟ್ಟ ವಿಶ್ವಾಸ ಕಂಡು ಖುಷಿಯಾಗಿದೆ ಎಂದರು.
ಜಿಲ್ಲಾ ಚುನಾವಣಾಧಿಕಾರಿ ನಿತೇಶ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿರುವ ಅಧಿಕಾರಿಗಳ ತಂಡ ಮಂಗಳವಾರ ನಡೆಯುವ ಮತದಾನ ವೇಳೆ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಲಿದ್ದಾರೆ ಎಂದರು.